ಮಣಿಕಾ ಬಾತ್ರಾಗೆ ಬ್ರೆಕ್‌ ಥ್ರೂ ಸ್ಟಾರ್ ಅವಾರ್ಡ್

Update: 2018-12-12 18:18 GMT

ಹೊಸದಿಲ್ಲಿ, ಡಿ.12: ಬಂಗಾರದ ಹುಡುಗಿ ಮಣಿಕಾ ಬಾತ್ರಾ ‘ಬ್ರೆಕ್‌ಥ್ರೂ ಟೇಬಲ್ ಟೆನಿಸ್ ಸ್ಟಾರ್’ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಆ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಭಾರತೀಯ ಟೇಬಲ್ ಟೆನಿಸ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬುಧವಾರ ದಕ್ಷಿಣ ಕೊರಿಯದ ಇಂಚೋನ್‌ನಲ್ಲಿ ನಡೆದ ಐಟಿಟಿಎಫ್ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಣಿಕಾ, ‘‘ಈ ಪ್ರಶಸ್ತಿಯಿಂದ ನಿಜವಾಗಿಯೂ ನಾನು ಗೌರವಿಸಲ್ಪಟ್ಟಿದ್ದೇನೆ. ಸಂತಸವಾಗಿದೆ. 2018 ನನ್ನ ವೃತ್ತಿಜೀವನದಲ್ಲಿ ಅತ್ಯುತ್ತಮವಾದ ವರ್ಷ ಎಂಬುದು ನನ್ನ ಅಭಿಪ್ರಾಯ ಮತ್ತು ಸಾಧನೆಯ ಬಗ್ಗೆ ಸಂತೋಷವಿದೆ’’ ಎಂದರು. 2018ರ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳಾ ತಂಡ ವಿಭಾಗದಲ್ಲಿ ಚೊಚ್ಚಲ ಬಂಗಾರದ ಪದಕ ಗೆಲ್ಲುವಲ್ಲಿ ಅವರ ಕೊಡುಗೆ ಗಣನೀಯವಾಗಿತ್ತು. ಫೈನಲ್ ಪಂದ್ಯದಲ್ಲಿ ಭಾರತ ತಂಡವು ಚಾಂಪಿಯನ್ ಹಾಗೂ ನಾಲ್ಕು ಬಾರಿ ಚಿನ್ನದ ಪದಕ ವಿಜೇತ ಸಿಂಗಪೂರ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿತ್ತು.

ಅಲ್ಲದೆ ಮಣಿಕಾ 2018ರ ವರ್ಷದಲ್ಲಿ ಜೀವನ ಶ್ರೇಷ್ಠ 52ನೇ ರ್ಯಾಂಕಿಂಗ್ ತಲುಪಿ, ಭಾರತದ ಅತ್ಯುತ್ತಮ ಶ್ರೇಯಾಂಕದ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News