×
Ad

ಎಲ್ಲ ದೇವರ ಜಾತಿ ಬಹಿರಂಗಪಡಿಸಿ: ಆದಿತ್ಯನಾಥ್ ಗೆ ಅಖಿಲೇಶ್ ಯಾದವ್ ಲೇವಡಿ

Update: 2018-12-13 09:16 IST

ಲಕ್ನೋ, ಡಿ.13: ಹನುಮಂತ ದಲಿತ ಎಂದು ಹೇಳಿಕೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಲೇವಡಿ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಇತರ ದೇವರ ಜಾತಿಯನ್ನೂ ಬಹಿರಂಗಪಡಿಸಿ ಎಂದು ಕೆಣಕಿದ್ದಾರೆ.

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಆದಿತ್ಯನಾಥ್, ಹನುಮಾನ್ ಅರಣ್ಯವಾಸಿ, ಸೌಲಭ್ಯ ವಂಚಿತ ಹಾಗೂ ದಲಿತ ಎಂದು ಹೇಳಿದ್ದರು. "ಬಜರಂಗ ಬಲಿ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಭಾಗಗಳ ಎಲ್ಲ ಭಾರತೀಯ ಸಮುದಾಯಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು" ಎಂದು ಹೇಳಿದ್ದರು.

ಆದಿತ್ಯನಾಥ್ ಹೇಳಿಕೆಗೆ ಅಣಕವಾಡಿರುವ ಅಖಿಲೇಶ್, "ಕೆಲ ದೇವರ ಜಾತಿಯನ್ನಷ್ಟೇ ಬಹಿರಂಗಪಡಿಸಿದ್ದೀರಿ. ಆದರೆ ಎಲ್ಲ ದೇವರ ಜಾತಿ ಬಹಿರಂಗಪಡಿಸಿದರೆ ಒಳ್ಳೆಯದು. ನಾನು ಕೂಡಾ ನನ್ನ ಜಾತಿಯ ದೇವರನ್ನು ಪೂಜಿಸುತ್ತೇನೆ" ಎಂದು ಚುಚ್ಚಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಪಕ್ಷದ ಬೆಂಬಲ ಘೋಷಿಸಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಮತಪತ್ರ ವ್ಯವಸ್ಥೆ ಮರು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಚುನಾವಣೆ ಪಾರದರ್ಶಕವಾಗಿ ನಡೆಯುವ ದೃಷ್ಟಿಯಿಂದ ಮತಪತ್ರವೇ ಸೂಕ್ತ ಎಂದು ಅಭಿಪ್ರಾಯಪಟ್ಟರು. ದ್ವೇಷ ಹರಡುತ್ತಿರುವ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News