ರೈತರ ಸಾಲ ಮನ್ನಾ: ಚುನಾವಣೆ ವಿಜಯದ ನಂತರ ಉಲ್ಟಾ ಹೊಡೆದರೇ ರಾಹುಲ್?

Update: 2018-12-13 11:05 GMT

ಹೊಸದಿಲ್ಲಿ, ಡಿ.13: ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂಬ ಆಶ್ವಾಸನೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯು-ಟರ್ನ್ ಹೊಡೆದಿದ್ದಾರೆ ಎಂಬಂತೆ ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎರಡು ಪ್ರತ್ಯೇಕ ವಿಡಿಯೋ ದೃಶ್ಯಾವಳಿಗಳನ್ನು ಇಲ್ಲಿ ಜತೆಯಾಗಿ ತೋರಿಸಲಾಗಿದೆ. ಒಂದು ವಿಡಿಯೋದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಚುನಾವಣಾ ರ್ಯಾಲಿಯಲ್ಲಿನ ಭಾಷಣದಲ್ಲಿ ನೀಡಿದ ಆಶ್ವಾಸನೆ ಹಾಗೂ ಎರಡನೇ ವೀಡಿಯೋದಲ್ಲಿ ಚುನಾವಣೆ ಗೆದ್ದ ಬಳಿಕ ಪತ್ರಿಕಾಗೋಷ್ಠಿಯಲ್ಲಿ “ಸಾಲ ಮನ್ನಾ ಪರಿಹಾರವಲ್ಲ'' ಎಂದು ಅವರು ಆಡಿದ ಮಾತುಗಳನ್ನು ತೋರಿಸುತ್ತದೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಈ ಹಿಂದಿನ ಆಶ್ವಾಸನೆ ಕುರಿತಂತೆ ಯು-ಟರ್ನ್ ಹೊಡೆದಿದ್ದು ಎಂಬಂತೆ ಬಿಂಬಿಸಲು  ಯತ್ನಿಸಲಾಗಿದೆ.

ಈ ವಿಡಿಯೋವನ್ನು ಜಯ್ ಪೂರ್ವಾಂಚಲ್ ಎಂಬ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯ ತನಕ 20 ಲಕ್ಷಕ್ಕೂ ಅಧಿಕ ಜನರು ಅದನ್ನು ವೀಕ್ಷಿಸಿದ್ದಾರೆ. ಇಂಡಿಯಾ 272+ ಎಂಬ ಫೇಸ್‍ಬುಕ್ ಪುಟದಲ್ಲೂ ಇರುವ ಈ ವೀಡಿಯೋವನ್ನು 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಟ್ವಿಟರ್‍ನಲ್ಲೂ ಈ ವೀಡಿಯೋ ವ್ಯಾಪಕವಾಗಿ ಶೇರ್ ಆಗಿದೆ.

ಕೇಂದ್ರ ಜವುಳಿ ಸಚಿವೆ ಸ್ಮೃತಿ ಇರಾನಿ ಕೂಡ ಈ ವೀಡಿಯೋ ಶೇರ್ ಮಾಡಿದ್ದಾರೆ.

ಆದರೆ ಕಾಂಗ್ರೆಸ್ ಅಧ್ಯಕ್ಷರು ರೈತರಿಗೆ ಸಾಲ ಮನ್ನಾ ಮಾಡಲಾಗುವುದಿಲ್ಲ ಎಂದು ಎಲ್ಲಿಯೂ ಹೇಳದೇ ಇದ್ದರೂ ಅವರು ಹಾಗೆ ಹೇಳಿದ್ದಾರೆಂಬ ತಪ್ಪು ಅಭಿಪ್ರಾಯ ಮೂಡಿಸಲು ಈ ಎರಡು ವೀಡಿಯೋಗಳನ್ನು ಜತೆಯಾಗಿ ಬಳಸಲಾಗಿದೆ.

ಚುನಾವಣಾ ವಿಜಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ತನ್ನ ಭರವಸೆಯನ್ನು ಪುನರುಚ್ಛರಿಸಿ ``ಸಾಲ ಮನ್ನಾ ಒಂದು ಬೆಂಬಲ ಕ್ರಮವೇ ಹೊರತು ಅದು ಪರಿಹಾರವಲ್ಲ. ಪರಿಹಾರಗಳು ಕ್ಲಿಷ್ಟಕರವಾಗಿವೆ, ಅದು ಅವರಿಗೆ ಬೆಂಬಲ ನೀಡಿ, ಮೂಲಭೂತ ಸೌಕರ್ಯ, ತಂತ್ರಜ್ಞಾನ ಸೌಲಭ್ಯ ಒದಗಿಸುವುದು, ನಿಜ ಹೇಳಬೇಕೆಂದರೆ ಪರಿಹಾರ ಸುಲಭವಲ್ಲ, ಅದು ಸವಾಲಿನಿಂದ ಕೂಡಿದೆಯಾದರೂ ನಾವು ಮಾಡುತ್ತೇವೆ. ನಾವು ದೇಶದ ಜನರು ಮತ್ತು ರೈತರೊಂದಿಗೆ ಕೆಲಸ ಮಾಡಬೇಕಿದೆ ಹಾಗೂ ನಾವು ಅದನ್ನು ಮಾಡುತ್ತೇವೆ,'' ಎಂದಿದ್ದರೂ ಕೇವಲ ಹೇಳಿದ ಮಾತುಗಳ ಒಂದು ಭಾಗದ ವೀಡಿಯೋ ತೋರಿಸಿ ಅವರು ಯು-ಟರ್ನ್ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.

ಕೃಪೆ: Altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News