ರಾಜಸ್ಥಾನದಲ್ಲಿ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕ್ ಧ್ವಜ ಹಾರಿಸಲಾಗಿತ್ತೇ?: ಇಲ್ಲಿದೆ ಉತ್ತರ

Update: 2018-12-13 11:28 GMT

ಹೊಸದಿಲ್ಲಿ, ಡಿ.13: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಮಣಿಸಿದ ಬಳಿಕ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದರು. ಸಂಭ್ರಮಾಚರಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪಾಕ್ ಧ್ವಜ ಹಾರಿಸಿದ್ದರು ಎಂದು ಆರೋಪಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾವಿರಾರು ಮಂದಿ ಈ ಆರೋಪಗಳನ್ನು ನಂಬಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಆದರೆ ಈ ವಿಡಿಯೋ ನಕಲಿ ಎಂದು ರಾಜಸ್ಥಾನ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಇಂತಹ ವ್ಯಾಪಕ ಸುಳ್ಳುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚುನಾವಣೆಗೆ ಮೊದಲು ಸಾಲಮನ್ನಾ ಭರವಸೆ ನೀಡಿದ್ದ ರಾಹುಲ್ ಗಾಂಧಿ ಚುನಾವಣೆ ನಂತರ ಉಲ್ಟಾ ಹೊಡೆದಿದ್ದಾರೆ ಎಂದು ಆರೋಪಿಸಿ ಕೂಡ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ವಿಡಿಯೋದ ಸ್ವಲ್ಪ ಭಾಗವನ್ನು ಕತ್ತರಿಸಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದರು. ತಾನು ಸಾಲಮನ್ನಾ ಭರವಸೆಗೆ ಬದ್ಧನಾಗಿದ್ದೇನೆ ಎಂದು ರಾಹುಲ್ ಹೇಳಿರುವ ಸಂಪೂರ್ಣ ವಿಡಿಯೋವನ್ನು ಕತ್ತರಿಸಲಾಗಿತ್ತು ಎನ್ನುವುದು ನಂತರ ವರದಿಯಾಗಿತ್ತು.

ಇದೇ ರೀತಿ ಪಾಕ್ ಧ್ವಜ ಹಾರಾಟದ ವಿಡಿಯೋ ಕೂಡ ಸುಳ್ಳು. ಹಸಿರು ಬಣ್ಣದ ಬಾವುಟ ಅದಾಗಿತ್ತು ಹೊರತು ಪಾಕಿಸ್ತಾನದ್ದಲ್ಲ. ಅದರ ಮೇಲೆ ಅರ್ಧ ಚಂದ್ರಾಕೃತಿಯ ಚಿತ್ರವಿಲ್ಲ. “ಕಾಂಗ್ರೆಸ್ ರ್ಯಾಲಿಯಲ್ಲಿ ಪಾಕ್ ಧ್ವಜ ಹಾರಾಟ ಎಂದು ವೈರಲ್ ಆಗುತ್ತಿರುವ ವಿಡಿಯೋ ನಕಲಿ. ಜನರು ಇದನ್ನು ನಂಬಬಾರದು ಎಂದು ನಾವು ವಿನಂತಿಸುತ್ತೇವೆ” ಎಂದು ರಾಜಸ್ಥಾನ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News