ಮೋದಿ ವಿದೇಶ ಪ್ರವಾಸಗಳಿಗಾಗಿ 2,010 ಕೋಟಿ ರೂ. ವೆಚ್ಚ

Update: 2018-12-14 08:52 GMT

ಹೊಸದಿಲ್ಲಿ, ಡಿ.14: ಮೇ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿದಂದಿನಿಂದ ನರೇಂದ್ರ ಮೋದಿ ತಮ್ಮ 84 ವಿದೇಶ ಪ್ರವಾಸಗಳಿಗಾಗಿ ಸುಮಾರು 2,010 ಕೋಟಿ  ರೂ. ವೆಚ್ಚ ಮಾಡಿದ್ದಾರೆಂದು ತಿಳಿದು ಬಂದಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಈ ಮಾಹಿತಿಯನ್ನು ಸಂಸತ್ತಿಗೆ  ನೀಡಿದ್ದಾರೆ. ಈ ವೆಚ್ಚ ಪ್ರಧಾನಿ ಪ್ರಯಾಣಿಸುವ ಏರ್ ಇಂಡಿಯಾ ವನ್ ವಿಮಾನದ ನಿರ್ವಹಣಾ ವೆಚ್ಚ ಹಾಗೂ ಸುರಕ್ಷಿತ ಹಾಟ್ ಲೈನ್ ವ್ಯವಸ್ಥೆಯ ಖರ್ಚು ಕೂಡ ಸೇರಿದೆ ಎಂಬ ಮಾಹಿತಿ ನೀಡಲಾಗಿದೆ.

ಪ್ರಧಾನಿಯಾಗಿ ಅಧಿಕಾರ ವಹಿಸಿದಂದಿನಿಂದ ಮೋದಿ ಹಲವಾರು ದೇಶಗಳಿಗೆ ಪ್ರಯಾಣಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಅಧ್ಯಕ್ಷರನ್ನು ಹಲವಾರು ಬಾರಿ ಭೇಟಿಯಾಗಿದ್ದಾರೆ. ಒಂದು ಪ್ರವಾಸದ ವೇಳೆ ಚೀನಾ ನಾಯಕ ಕ್ಸಿ ಜಿನ್ಪಿಂಗ್ ಅವರ ಜತೆ ಅನೌಪಚಾರಿಕ ಮಾತುಕತೆ ಕೂಡ ನಡೆಸಿ ಅದು ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳಲಾಗಿತ್ತು.

ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣ ನಡೆಸಿದ ಬೆನ್ನಲ್ಲೇ ಮೋದಿ ಜಪಾನ್ ಪ್ರವಾಸಕ್ಕೆ ತೆರಳಿದ್ದಾಗ, ಸಾವಿರಾರು ಭಾರತೀಯರು ದೇಶದಲ್ಲಿ ಅಮಾನ್ಯೀಕರಣದಿಂದ ಹೆಣಗಾಡುತ್ತಿದ್ದಾಗ ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ವಿಪಕ್ಷ ಅವರನ್ನು ಟೀಕಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News