ಎರಡನೇ ಟೆಸ್ಟ್: ಆಸ್ಟ್ರೇಲಿಯ ಗೌರವಾರ್ಹ ಮೊತ್ತ

Update: 2018-12-14 09:35 GMT

ಪರ್ತ್, ಡಿ.14: ಆರಂಭಿಕ ಆಟಗಾರರಾದ ಹ್ಯಾರಿಸ್(70), ಆ್ಯರೊನ್ ಫಿಂಚ್(50) ಹಾಗೂ ನಾಯಕ ಟ್ರಾವಿಸ್ ಹೆಡ್(58) ಅರ್ಧಶತಕದ ಕೊಡುಗೆ ನೆರವಿನಿಂದ ಆಸ್ಟ್ರೇಲಿಯ ತಂಡ ಶುಕ್ರವಾರ ಇಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 85 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ.

ಇಲ್ಲಿನ ನೂತನ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿದ ಹ್ಯಾರಿಸ್(70,141 ಎಸೆತ, 10 ಬೌಂಡರಿ) ಹಾಗೂ ಫಿಂಚ್(50,105 ಎಸೆತ, 6 ಬೌಂಡರಿ)ಉತ್ತಮ ಆರಂಭವನ್ನೇ ನೀಡಿದ್ದರು.

ಆದರೆ, ಈ ಆರಂಭವನ್ನು ಬಳಸಿಕೊಳ್ಳಲು ಆಸೀಸ್ ವಿಫಲವಾಯಿತು. ಫಿಂಚ್ ಔಟಾದ ಬೆನ್ನಿಗೇ 3ನೇ ಕ್ರಮಾಂಕದ ದಾಂಡಿಗ ಉಸ್ಮಾನ್ ಖ್ವಾಜಾ(5) ಅಲ್ಪ ಮೊತ್ತಕ್ಕೆ ಔಟಾದರು. ಹ್ಯಾಂಡ್ಸ್‌ಕಾಂಬ್(5) ವಿರಾಟ್ ಕೊಹ್ಲಿ ಒಂದೇ ಕೈಯ್ಯಲ್ಲಿ ಪಡೆದ ಅದ್ಭುತ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು.

ಕಳೆದ ಪಂದ್ಯದ ಹೀರೋ ಶಾನ್ ಮಾರ್ಷ್(45) ಹಾಗೂ ನಾಯಕ ಹೆಡ್(58) ಒಂದಷ್ಟು ಪ್ರತಿರೋಧ ಒಡ್ಡಿದರು. ಭಾರತದ ಪರ ಇಶಾಂತ್ ಶರ್ಮಾ(2-35) ಹಾಗೂ ಹನುಮ ವಿಹಾರಿ(2-53) ತಲಾ ಎರಡು ವಿಕೆಟ್ ಕಬಳಿಸಿದರು. ಜಸ್‌ಪ್ರಿತ್ ಬುಮ್ರಾ(1-33) ಹಾಗೂ ಉಮೇಶ್ ಯಾದವ್(1-60) ತಲಾ 1 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News