ರಫೇಲ್ ವಿವಾದ: ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಂಪೂರ್ಣ ತಪ್ಪು- ಪ್ರಶಾಂತ್ ಭೂಷಣ್

Update: 2018-12-14 10:55 GMT

ಹೊಸದಿಲ್ಲಿ, ಡಿ. 14: ''ಇದು ಸಂಪೂರ್ಣ ತಪ್ಪಾದ ತೀರ್ಪು''- ಹೀಗೆಂದು ಹೇಳಿದವರು ಹಿರಿಯ ವಕೀಲ ಪ್ರಶಾಂತ್ ಭೂಷಣ್.

ರಫೇಲ್ ಒಪ್ಪಂದದಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದವರಲ್ಲಿ ಒಬ್ಬರಾಗಿರುವ ಪ್ರಶಾಂತ್ ಭೂಷಣ್, ಕೋರ್ಟ್ ಇಂದು ರಫೇಲ್ ಕುರಿತಂತೆ ಎಲ್ಲಾ ಅಪೀಲುಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

''ಒಟ್ಟು 126 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಈ ಹಿಂದೆ ಮಾಡಲಾದ ಒಪ್ಪಂದವನ್ನು ರದ್ದುಪಡಿಸಲು ಕಾರಣವೇನೆಂದು ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಬೇಕೆಂದಷ್ಟೇ ನಾವು ಕೋರಿದ್ದೆವು. ನನ್ನ ಅಭಿಪ್ರಾಯದ ಪ್ರಕಾರ ಈ ತೀರ್ಪು ತಪ್ಪು. ಸೀಮಿತ ನ್ಯಾಯಾಂಗ ಪರಿಶೀಲನೆಯ ನೆಪ ಮುಂದಿಟ್ಟು ನ್ಯಾಯಾಲಯ ಈ ಆದೇಶ ನೀಡಿದೆ'' ಎಂದು ಸುದ್ದಿಗಾರರ ಜತೆ ಮಾತನಾಡಿದ  ಭೂಷಣ್ ತಿಳಿಸಿದರು.

ರಫೇಲ್ ಒಪ್ಪಂದ ಅಂತಿಮಗೊಳಿಸುವಾಗ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ, ಯುದ್ಧ ವಿಮಾನ ಖರೀದಿ ಬೇಡಿಕೆಯನ್ನು ಮೊದಲು ವಾಯು ಪಡೆ ಮುಖ್ಯಸ್ಥರು ಎತ್ತಬೇಕು. ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ 126 ಜೆಟ್ ಅಗತ್ಯವಿದೆಯೆಂದು ವಾಯುಪಡೆ ಹೇಳಿತ್ತು. ಆದರೆ ಈ ವಿಚಾರದಲ್ಲಿ ಪ್ರಧಾನಿ ದಿಢೀರ್ ಫ್ರಾನ್ಸ್ ದೇಶಕ್ಕೆ ತೆರಳಿ ಡಸ್ಸಾಲ್ಟ್  ಏವ್ಯೇಶನ್ ಜತೆ 36 ರಫೆಲ್ ವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಹಿಂದೆ  ಈ ವಿಮಾನಗಳ ಖರೀದಿಗೆ 5.2 ಮಿಲಿಯನ್ ಯುರೋಸ್ ನಿಗದಿ ಪಡಿಸಲಾಗಿದ್ದರೆ ಪ್ರಧಾನಿ ನೇತೃತ್ವದ ಕ್ಯಾಬಿನೆಟ್ ಸಮಿತಿ ಅದನ್ನು 7.8 ಮಿಲಿಯನ್ ಯುರೋಸ್‍ಗೆ ಹೆಚ್ಚಿಸಿ ದೇಶದ ಖಜಾನೆಗೆ 20,000 ಕೋಟಿ ರೂ. ನಷ್ಟವುಂಟು ಮಾಡಿದೆ'' ಎಂದು ಭೂಷಣ್ ಹೇಳಿದರು.

ಈ ತೀರ್ಪಿನ ವಿಚಾರದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತಂತೆ ತಾನು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News