ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಂಚನೆಯ ಬಗ್ಗೆ ದೂರು ನೀಡುವುದು ಹೇಗೆ....?

Update: 2018-12-14 14:32 GMT

ಸುಮ್ಮನೆ ಕಲ್ಪಿಸಿಕೊಳ್ಳಿ.....ನಿಮ್ಮ ಊರಿನಿಂದ ಸಾವಿರಾರು ಕಿ.ಮೀ.ದೂರದಲ್ಲಿಯ ನಗರದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆದಿದೆ ಎಂಬ ಎಸ್‌ಎಂಎಸ್ ಮಧ್ಯರಾತ್ರಿ ವೇಳೆಗೆ ಬಂದಿದೆ. ಆದರೆ ನೀವು ಮನೆಯಲ್ಲಿಯೇ ಇದ್ದೀರಿ ಮತ್ತು ಕ್ರೆಡಿಟ್ ಕಾರ್ಡ್ ಕೂಡ ನಿಮ್ಮ ಬಳಿಯೇ ಇದೆ. ಈಗ ನೀವೇನು ಮಾಡಲು ಸಾಧ್ಯ?,

ಇದು ಕಲ್ಪನೆ ಮಾತ್ರವಲ್ಲ. ಇಂತಹ ಘಟನೆಗಳು ಅದೆಷ್ಟೋ ನಡೆದಿವೆ. ಇಂತಹ ವಿದ್ಯಮಾನ ಸಂಭವಿಸಿದಾಗ ನೀವಷ್ಟೇ ಅಲ್ಲ, ಪ್ರತಿಯೊಬ್ಬರೂ ಗಾಬರಿಗೊಳ್ಳುವುದು ಸಹಜ. ಡಿಜಿಟಲ್ ಜೀವನ ವಿಧಾನ ಹೆಚ್ಚುತ್ತಿರುವುದರೊಂದಿಗೆ, ವಿಶೇಷವಾಗಿ ಅದು ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದಾಗ ಆರ್ಥಿಕ ವಂಚನೆಗಳನ್ನು ಕಡೆಗಣಿಸುವಂತಿಲ್ಲ. ಇ-ಮೇಲ್ ದುರ್ಬಳಕೆ, ಫಿಶಿಂಗ್ ಅಥವಾ ನಕಲಿ ಕಾರ್ಡ್‌ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು ವಂಚನೆಗೆ ಗುರಿಯಾಗುತ್ತವೆ.

ಇಂತಹ ವಂಚನೆ ಪ್ರಕರಣದಲ್ಲಿ ಏನು ಮಾಡಬೇಕು?

ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್‌ನಲ್ಲಿ ಶಂಕಾಸ್ಪದ ವಹಿವಾಟು ನಿಮ್ಮ ಗಮನಕ್ಕೆ ಬಂದ ತಕ್ಷಣ ನಿಮಗೆ ಕಾರ್ಡ್ ವಿತರಿಸಿರುವ ಸಂಸ್ಥೆಗೆ ಮಾಹಿತಿ ನೀಡಿ. ಕಾರ್ಡ್‌ನ್ನು ಅಥವಾ ಖಾತೆಯಲ್ಲಿ ವಹಿವಾಟುಗಳನ್ನು ತಡೆಯಲು ತಕ್ಷಣವೇ ಬ್ಯಾಂಕಿಗೆ ವಿಧ್ಯುಕ್ತ ದೂರು ಸಲ್ಲಿಸುವುದು ಮತ್ತು ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡುವುದು ಅಗತ್ಯವಾಗುತ್ತದೆ.

ದೂರು ಸಲ್ಲಿಸುವುದು ಹೇಗೆ?

ನಿಮಗೆ ಆಗಿರುವ ವಂಚನೆಯು ನೆಟ್ ಬ್ಯಾಂಕಿಂಗ್,ಎಟಿಎಂ ವಹಿವಾಟುಗಳು ಅಥವಾ ಇತರ ಯಾವುದೇ ಆನ್‌ಲೈನ್ ವಹಿವಾಟುಗಳಿಗೆ ಸಂಬಂಧಿಸಿದ್ದರೆ ನೀವು ದೂರು ಸಲ್ಲಿಸಬೇಕಾಗುತ್ತದೆ. ಆದರೆ ಬ್ಯಾಂಕ್ ಅಥವಾ ಕಾರ್ಡ್ ವಿತರಣಾ ಸಂಸ್ಥೆಗೆ ದೂರು ನೀಡುವ ಮುನ್ನ, ನಿಮ್ಮ ಖಾತೆಗೆ ಸಂಬಂಧಿಸಿದಂತೆ ಹಿಂದಿನ ಆರು ತಿಂಗಳ ಬ್ಯಾಂಕ್ ಸ್ಟೇಟ್‌ ಮೆಂಟ್, ಶಂಕಿತ ವಹಿವಾಟುಗಳ ಕುರಿತು ನಿಮಗೆ ಬಂದಿರುವ ಎಸ್‌ಎಂಎಸ್‌ನ ಪ್ರತಿ, ಬ್ಯಾಂಕ್‌ ಖಾತೆಯಲ್ಲಿ ತೋರಿಸಿರುವ ನಿಮ್ಮ ಐಡಿ ಮತ್ತು ವಿಳಾಸದ ಪುರಾವೆಯ ಪ್ರತಿ ಇವು ನಿಮ್ಮ ಬಳಿಯಲ್ಲಿರಬೇಕು. ನಿಮಗೆ ಆಗಿರುವ ವಂಚನೆಯನ್ನು ಲಿಖಿತವಾಗಿ ವಿವರಿಸಿ ಈ ದಾಖಲೆಗಳೊಂದಿಗೆ ನಿಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ.

ಸೈಬರ್ ಲೋಕದಲ್ಲಿ ಹಲವಾರು ನಕಲಿ ಆ್ಯಪ್‌ಗಳು ಹರಿದಾಡುತ್ತಿವೆ. ಆ್ಯಪ್ ಮೂಲಕ ಯಾವುದೇ ಹಣಕಾಸು ವಂಚನೆ ನಡೆದಿದ್ದರೆ ಈ ಮೇಲ್ಕಾಣಿಸಿರುವ ದಾಖಲೆಗಳೊಂದಿಗೆ ವಂಚಕ ಆ್ಯಪ್ ಮತ್ತು ಅದನ್ನು ಡೌನ್ ಲೋಡ್ ಮಾಡಿಕೊಳ್ಳಲಾದ ತಾಣದ ಸ್ಕ್ರೀನ್ ಶಾಟ್‌ನ್ನೂ ಸಲ್ಲಿಸಬೇಕಾಗುತ್ತದೆ.

ಎಲ್ಲಿ ದೂರು ಸಲ್ಲಿಸಬೇಕು?

ವಂಚನೆಯ ವಹಿವಾಟುಗಳ ಬಗ್ಗೆ ಕಾರ್ಡ್ ವಿತರಿಸಿದ ಸಂಸ್ಥೆ ಅಥವಾ ಬ್ಯಾಂಕಿಗೆ ಮಾಹಿತಿ ನೀಡಿದ ಬಳಿಕ ಸಮೀಪದ ಪೊಲಿಸ್ ಠಾಣೆಯಲ್ಲಿ ಲಿಖಿತ ದೂರನ್ನು ಸಲ್ಲಿಸಬೇಕಾಗುತ್ತದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೇ ಎಫ್‌ಐಆರ್ ಸಲ್ಲಿಸಬೇಕು. ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದರೆ ಸಿಆರ್‌ಪಿಸಿಯ ಕಲಂ 156(3)ರಡಿ ನ್ಯಾಯಾಲಯದ ಮೆಟ್ಟಿಲನ್ನೇರಬಹುದು.

 ಆದರೆ ದೂರು ದಾಖಲಿಸಲು ಸೈಬರ್ ಸೆಲ್‌ಗೆ ಹೋಗಿ ಎಂದು ಪೊಲೀಸರು ನಿಮಗೆ ಸೂಚಿಸಿದರೆ?, ನೀವು ಸೈಬರ್ ಸೆಲ್‌ಗೆ ಹೋಗುವ ಅಗತ್ಯವಿಲ್ಲ. ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೇ ನೀವು ದೂರನ್ನು ದಾಖಲಿಸಬಹುದು. ಪೊಲೀಸ್ ಠಾಣೆಗಳು ಇಂತಹ ಪ್ರಕರಣಗಳನ್ನು ಸೈಬರ್ ಸೆಲ್‌ಗೆ ಹಸ್ತಾಂತರಿಸುತ್ತವೆ.

 ಪೊಲೀಸರ ಬಳಿ ದೂರು ಸಲ್ಲಿಸಿದ ಬಳಿಕ ನೀವು ಬಯಸಿದರೆ ನೇರವಾಗಿ ಸೈಬರ್ ಸೆಲ್‌ಗೂ ದೂರು ಸಲ್ಲಿಸಬಹುದು. ನಿಮ್ಮ ವಾಸಸ್ಥಳದ ವ್ಯಾಪ್ತಿ ಹೊಂದಿರುವ ಇಂತಹ ಜಿಲ್ಲಾ ಸೈಬರ್ ಸೆಲ್‌ನ ಸಂಪರ್ಕ ವಿವರಗಳನ್ನು ಇಂಟರ್ನೆಟ್‌ನಲ್ಲಿ ಪಡೆಯಬಹುದು.

ವಂಚನೆ ಪ್ರಕರಣಗಳಲ್ಲಿ ಹೊಣೆಗಾರಿಕೆ

ವಂಚನೆಯು ಸಂಭವಿಸಿದೆ ಮತ್ತು ಇದರಲ್ಲಿ ಬ್ಯಾಂಕಿನ ತಪ್ಪಿಲ್ಲ ಮತ್ತು ಸ್ಕ್ಯಾಮಿಂಗ್, ಫಿಶಿಂಗ್ ಇತ್ಯಾದಿ ಕುತಂತ್ರಗಳ ಮೂಲಕ ಮೂರನೇ ವ್ಯಕ್ತಿ ವಂಚನೆಯನ್ನು ನಡೆಸಿದ್ದಾನೆ ಎಂದಿಟ್ಟುಕೊಳ್ಳಿ. ಇಂತಹ ಪ್ರಕರಣಗಳಲ್ಲ ಆರ್‌ ಬಿಐ ನಿಯಮದಂತೆ ಮೂರು ದಿನಗಳೊಳಗೆ ವಂಚನೆಯ ಬಗ್ಗೆ ಮಾಹಿತಿಯನ್ನು ಸಲ್ಲಿಸಿದ್ದರೆ ಗ್ರಾಹಕ ನಷ್ಟವನ್ನು ಭರಿಸಬೇಕಿಲ್ಲ. ಮೂರು ದಿನಗಳ ನಂತರ,ಆದರೆ ಏಳು ದಿನಗಳ ಮೊದಲು ದೂರು ಸಲ್ಲಿಸಿದ್ದರೆ ಪ್ರತಿ ವಹಿವಾಟಿನಲ್ಲಿ ಗ್ರಾಹಕನ ಹೊಣೆಗಾರಿಕೆಯು ವಹಿವಾಟಿನ ಮೌಲ್ಯ ಅಥವಾ ಆರ್‌ಬಿಐ ನಿಗದಿಗೊಳಿಸಿರುವ ಮೊತ್ತ, ಇವುಗಳ ಪೈಕಿ ಯಾವುದು ಕಡಿಮೆಯೋ ಅದಕ್ಕೆ ಸೀಮಿತವಾಗಿರುತ್ತದೆ. ಆದರೆ ಏಳು ದಿನಗಳ ನಂತರ ದೂರು ಸಲ್ಲಿಸಿದ್ದರೆ ಬ್ಯಾಂಕಿನ ಆಡಳಿತ ಮಂಡಳಿಯು ಒಪ್ಪಕೊಂಡಿರುವ ನೀತಿಗನುಗುಣವಾಗಿ ಗ್ರಾಹಕನ ಹೊಣೆಗಾರಿಕೆಯನ್ನು ನಿರ್ಧರಿಸಲಾಗುತ್ತದೆ. ಡಿಜಿಟಲ್ ವ್ಯಾಲೆಟ್‌ಗಳಾದ ಮೊಬಿಕ್ವಿಕ್,ಆಕ್ಸಿಜನ್ ಮತ್ತು ಅಮೆಝಾನ್ ಪೇನಂತಹ ಪ್ರಿಪೇಡ್ ಪೇಮೆಂಟ್ ಸಾಧನಗಳನ್ನೊಳಗೊಂಡ ಅನಧಿಕೃತ ವಿದ್ಯುನ್ಮಾನ ವಹಿವಾಟುಗಳಿಗೆ ಸುರಕ್ಷತೆಯನ್ನು ವಿಸ್ತರಿಸುವ ಪ್ರಸ್ತಾವವನ್ನು ಆರ್‌ಬಿಐ ಹೊಂದಿದೆ.

ನೀವೇನು ಮಾಡಬೇಕು?

ಆರ್‌ಬಿಐ ನಿಯಮದಂತೆ ನೀವು ವಂಚನೆಯ ಬಗ್ಗೆ ಬ್ಯಾಂಕಿಗೆ ಮಾಹಿತಿ ನೀಡಿದ 90 ದಿನಗಳಲ್ಲಿ ನಿಮಗೆ ಪರಿಹಾರ ದೊರೆಯಬೇಕು. ಗ್ರಾಹಕ ನೋಟಿಸ್ ನೀಡಿದ ದಿನಾಂಕದಿಂದ ಹತ್ತು ಕೆಲಸದ ದಿನಗಳೊಳಗೆ ಬ್ಯಾಂಕುಗಳು ಅನಧಿಕೃತ ವಿದ್ಯುನ್ಮಾನ ವಹಿವಾಟನ್ನು ಹಿಂದೆಗೆಯಬೇಕು ಅಥವಾ ಮೊತ್ತವನ್ನು ಆತನ ಖಾತೆಗೆ ಜಮಾ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News