ಈ ರಾಜ್ಯದ ನೂತನ ವಿಧಾನಸಭೆಯಲ್ಲಿ 187 ಕೋಟ್ಯಾಧಿಪತಿಗಳು!

Update: 2018-12-15 17:27 GMT

ಹೊಸದಿಲ್ಲಿ,ಡಿ.15: ಮಧ್ಯ ಪ್ರದೇಶ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ 230 ಸದಸ್ಯರ ಪೈಕಿ 187 ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ ಮತ್ತು ಶೇ.40 ಸದಸ್ಯರು ಅಪರಾಧಿ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ಮಧ್ಯ ಪ್ರದೇಶ ಚುನಾವಣಾ ನಿಗಾ ಮತ್ತು ಪ್ರಜಾಪ್ರಭುತ್ವ ಸುಧಾರಣೆಗಳ ಸಂಘಟನೆ (ಎಡಿಆರ್) ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಸಮೀಕ್ಷೆಯ ಪ್ರಕಾರ, ಬಿಜೆಪಿಯ 109 ಶಾಸಕರಲ್ಲಿ 91 ಮಂದಿ (ಶೇ.84), ಕಾಂಗ್ರೆಸ್‌ನ 114 ಶಾಸಕರಲ್ಲಿ 90 (ಶೇ.79), ಬಹುಜನ ಸಮಾಜ ಪಕ್ಷದ ಇಬ್ಬರಲ್ಲಿ ಒಬ್ಬರು, ಸಮಾಜವಾದಿ ಪಕ್ಷದ ಒಬ್ಬರು ಮತ್ತು ನಾಲ್ಕು ಸ್ವತಂತ್ರ ಶಾಸಕರು ಒಂದು ಕೋಟಿಗೂ ಅಧಿಕ ಸಂಪತ್ತು ಹೊಂದಿರುವ ಘೋಷಣೆ ಮಾಡಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ವಿಜಯರಾಘವಗಡ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಸತ್ಯೇಂದ್ರ ಪಾಠಕ್ ತನ್ನ ಆಸ್ತಿ ಮೌಲ್ಯ 226 ಕೋಟಿ ರೂ. ಎಂದು ಘೋಷಿಸಿದ್ದು, ಅತ್ಯಂತ ಹೆಚ್ಚು ಆಸ್ತಿ ಹೊಂದಿರುವ ಶಾಸಕರಾಗಿದ್ದರೆ ಬಿಜೆಪಿಯವರೇ ಆದ ಪಂದನ ಕ್ಷೇತ್ರದ ಶಾಸಕ ರಾಮ್ ದಂಗೊರೆ 50,749ರೂ. ಆಸ್ತಿಯೊಂದಿಗೆ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಶಾಸಕ ಎನ್ನುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. 230 ಶಾಸಕರಲ್ಲಿ 94 ಶಾಸಕರು ತಾವು ಅಪರಾಧಿ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಈ ಪೈಕಿ 47 ಶಾಸಕರು ತಾವು ಹತ್ಯೆ, ಹತ್ಯಾಯತ್ನ, ಮಹಿಳೆಯರ ವಿರುದ್ಧ ಅಪರಾಧ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News