ತೀರ್ಪು ರಾಜಕೀಯ ಪಕ್ಷದಿಂದ ಪ್ರೇರಣೆ ಪಡೆದಿಲ್ಲ: ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ

Update: 2018-12-16 16:36 GMT

ಶಿಲ್ಲಾಂಗ್, ಡಿ. 16: ಭಾರತ ವಿಭಜನೆಯ ನಂತರ ಹಿಂದೂ ರಾಷ್ಟ್ರವಾಗಿರಬೇಕಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಮೇಘಾಲಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸುದೀಪ್ ರಂಜನ್ ಸೇನ್ ತನ್ನ ತೀರ್ಪನ್ನು ತಪ್ಪು ವ್ಯಾಖ್ಯಾನ ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮೇಘಾಲಯ ಉಚ್ಚ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಶುಕ್ರವಾರ ಸ್ಪಷ್ಟನೆ ಪೋಸ್ಟ್ ಮಾಡಿರುವ ಅವರು, ತನ್ನ ಆದೇಶ ಯಾವುದೇ ರಾಜಕೀಯ ಪಕ್ಷದಿಂದ ಪ್ರೇರಣೆ ಹೊಂದಿಲ್ಲ ಎಂದಿದ್ದಾರೆ.

‘‘ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನಿವೃತ್ತಿಯ ಬಳಿಕ ಯಾವುದಾದರೂ ರಾಜಕೀಯ ಪಕ್ಷ ಸೇರುವ ಕನಸು ನನಗಿಲ್ಲ. ನನ್ನ ತೀರ್ಪು ರಾಜಕೀಯ ಪ್ರೇರಿತ ಅಲ್ಲ ಹಾಗೂ ತೀರ್ಪಿನ ಮೇಲೆ ಯಾವುದೇ ರಾಜಕೀಯ ಪಕ್ಷ ಪ್ರಭಾವ ಬೀರಿಲ್ಲ’’ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘‘ಜಾತ್ಯತೀತತೆ ಭಾರತದ ಸಂವಿಧಾನದ ಒಂದು ಮೂಲ ಅಡಿಪಾಯ. ಅದು ಧರ್ಮ, ಜಾತಿ, ಸಮುದಾಯ, ಜನಾಂಗ, ಭಾಷೆಯ ಮೂಲಕ ವಿಭಜನೆ ಆಗಬಾರದು. ನನ್ನ ತೀರ್ಪಿನಲ್ಲಿ ಜಾತ್ಯತೀತತೆಯ ವಿರುದ್ಧ ಹೇಳಿರುವುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ತೀರ್ಪು ಇತಿಹಾಸದ ಬಗ್ಗೆ ಉಲ್ಲೇಖಗಳನ್ನು ಮಾಡಿದೆ. ಚರಿತ್ರೆಯನ್ನು ಯಾರೊಬ್ಬರೂ ಬದಲಾಯಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.

 ಶಿಲ್ಲಾಂಗ್ ನಲ್ಲಿ ಕಳೆದ ಮೂರು ತಲೆಮಾರುಗಳಿಂದ ಜೀವಿಸುತ್ತಿರುವ ಕುಟುಂಬದ ಅಮೋನ್ ರಾಣಾ ಅವರಿಗೆ ಮೇಘಾಲಯ ಸರಕಾರ ವಲಸಿಗ ಪ್ರಮಾಣ ಪತ್ರ ನೀಡಲು ನಿರಾಕರಿಸಿತ್ತು. ರಾಣಾ ಸೇನೆಗೆ ನೇಮಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೇಘಾಲಯ ಉಚ್ಚ ನ್ಯಾಯಾಲಯ ಸಂಪರ್ಕಿಸಿದ್ದರು. ಅವರ ಮನವಿಯ ವಿಚಾರಣೆ ವಿಲೇವಾರಿ ನಡೆಸಿದ ಸಂದರ್ಭ ಸೇನ್ ‘ಹಿಂದೂ ರಾಷ್ಟ್ರ’ದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕೂಡಲೇ ಅವರ ಆದೇಶದ ಪ್ರತಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಬುದ್ಧಿಜೀವಿಗಳು ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News