ಅಫ್ಘಾನ್ ಪಡೆಗಳ ವಾಯುದಾಳಿ: 12 ಮಕ್ಕಳು ಸಹಿತ 20 ನಾಗರಿಕರ ಬಲಿ

Update: 2018-12-16 17:13 GMT

ಕಾಬೂಲ್, ಡಿ.15: ಅಫ್ಘಾನಿಸ್ತಾನದ ಪೂರ್ವ ಪ್ರಾಂತವಾದ ಕುನಾರ್‌ನಲ್ಲಿ ಶುಕ್ರವಾರ ತಾಲಿಬಾನ್ ಕಮಾಂಡರ್ ಒಬ್ಬನನ್ನು ಗುರಿಯಿರಿಸಿ ನಡೆಸಲಾದ ವಾಯುದಾಳಿಯಲ್ಲಿ 12 ಮಂದಿ ಮಕ್ಕಳು ಸೇರಿದಂತೆ 20 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ಸ್ಥಳೀಯ ತಾಲಿಬಾನ್ ಕಮಾಂಡರ್ ಶರೀಫ್ ಮಾವಿಯಾ ಎಂಬಾತನನ್ನು ಗುರಿಯಿರಿಸಿ, ಸರಕಾರಿ ಪಡೆಗಳು ಈ ವಾಯುದಾಳಿಯನ್ನು ನಡೆಸಿದ್ದವು.

ವಾಯುದಾಳಿಯಲ್ಲಿ ಎಂಟು ಮಂದಿ ಮಹಿಳೆಯರು ಹಾಗೂ 12 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ಪ್ರಾಂತೀಯ ಮಂಡಳಿಯ ಸದಸ್ಯ ಅಬ್ದುಲ್ ಲತೀಫ್ ಫಾಝ್ಲಿ ತಿಳಿಸಿದ್ದಾರೆ.

 ಶೆತ್ಲಾನ್ ಜಿಲ್ಲೆಯಲ್ಲಿ ಈ ನಡೆದ ಈ ವಾಯುದಾಳಿಯಲ್ಲಿ 38 ಮಂದಿ ತಾಲಿಬಾನ್ ಹಾಗೂ ಅಲ್‌ಖಾಯಿದ ಬಂಡುಕೋರರು ಕೂಡಾ ಮೃತಪಟ್ಟಿದ್ದಾರೆಂದು ಕುನಾರ್‌ನ ಗವರ್ನರ್ ಅಬ್ದುಲ್ ಸತಾರ್ ಮಿಝಾಕ್ವಾಲ್ ತಿಳಿಸಿದ್ದಾರೆ. ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳುವಂತೆ ತಾಲಿಬಾನ್ ಬಂಡುಕೋರರ ಮೇಲೆ ಒತ್ತಡ ಹೇರಲು ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲದೊಂದಿಗೆ ಅಫ್ಘಾನ್ ಪಡೆಗಳು ಸರಣಿ ವಾಯುದಾಳಿ ನಡೆಸುತ್ತಿರುವುದರಿಂದ ಈ ವರ್ಷ ವೈಮಾನಿಕ ದಾಳಿಗಳಲ್ಲಿ ಮೃತಪಟ್ಟ ಅಘ್ಘಾನ್ ನಾಗರಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

 ಈ ವರ್ಷ, ಸೆಪ್ಟೆಂಬರ್‌ವರೆಗೆ ಅಮೆರಿಕ ಹಾಗೂ ಅಫ್ಘಾನ್ ಪಡೆಗಳ ವಾಯುದಾಳಿಯಲ್ಲಿ ಕನಿಷ್ಠ 313 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 336 ಮಂದಿ ಗಾಯಗೊಂಡಿದ್ದಾರೆಂದು ವಿಶ್ವಸಂಸ್ಥೆಯ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News