ಕರುಣಾನಿಧಿ ಪ್ರತಿಮೆ ಅನಾವರಣಗೊಳಿಸಿದ ಸೋನಿಯಾ

Update: 2018-12-16 17:26 GMT

ಚೆನ್ನೈ, ಡಿ.16: ಹಿರಿಯ ವಿಪಕ್ಷ ಮುಖಂಡರ ಉಪಸ್ಥಿತಿಯಲ್ಲಿ ರವಿವಾರ ಚೆನ್ನೈಯಲ್ಲಿರುವ ಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಎಂಕೆ ಮುಖಂಡ , ದಿವಂಗತ ಕರುಣಾನಿಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಕರುಣಾನಿಧಿಯವರ ಪುತ್ರ, ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳು ನಟ ಹಾಗೂ ರಾಜಕಾರಣಿ ರಜಿನಿಕಾಂತ್, ಮಾಜಿ ಕೇಂದ್ರ ಸಚಿವ ಶತ್ರುಘ್ನ ಸಿನ್ಹ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಹಿರಿಯ ವಿಪಕ್ಷ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸೋನಿಯಾ ಗಾಂಧಿ ಮರೀನಾ ಬೀಚ್‌ನಲ್ಲಿರುವ ಕರುಣಾನಿಧಿ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು. ಡಿಸೆಂಬರ್ 10ರಂದು ವಿಪಕ್ಷ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಆಗಮಿಸಿದ್ದ ಸ್ಟಾಲಿನ್, ಆಗ ಕರುಣಾನಿಧಿಯವರ ಪ್ರತಿಮೆ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೋನಿಯಾರಿಗೆ ಆಹ್ವಾನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News