ರಾಮ ಮಂದಿರ ನಿರ್ಮಾಣ ಸುಗ್ರೀವಾಜ್ಞೆಯ ಸಾಧ್ಯತೆಯಿಲ್ಲ, ಸರಕಾರ ಚರ್ಚೆಯೇ ನಡೆಸಿಲ್ಲ: ಎನ್ ಡಿಎ ಮಿತ್ರ ಪಕ್ಷ

Update: 2018-12-17 14:30 GMT

ಹೊಸದಿಲ್ಲಿ, ಡಿ.17: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಲು ಸುಗ್ರೀವಾಜ್ಞೆ ಹೊರತರುವ ಕುರಿತಂತೆ ಬಿಜೆಪಿ ಇಲ್ಲಿಯ ತನಕ ಎನ್‍ ಡಿಎ ಮಿತ್ರ ಪಕ್ಷಗಳ ಜತೆ ಮಾತುಕತೆ ನಡೆಸಿಲ್ಲದ ಕಾರಣ ಸುಗ್ರೀವಾಜ್ಞೆ ಜಾರಿಯಾಗುವ ಸಾಧ್ಯತೆಯಿಲ್ಲ ಎಂದು ಎನ್‍ಡಿಎ ಮಿತ್ರ ಪಕ್ಷವಾಗಿರುವ ಲೋಕ್ ಜನ ಶಕ್ತಿಯ ಸಂಸದ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಸ್ವಾನ್, “ರಾಮ ಮಂದಿರ ನಿರ್ಮಾಣ ಒಂದು ಪಕ್ಷದ ಅಜೆಂಡಾ ಆಗಿದ್ದರೂ ಎನ್‍ ಡಿಎ ಅಥವಾ ಕೇಂದ್ರ ಸರಕಾರದ ಅಜೆಂಡಾ ಆಗಿಲ್ಲ,'' ಎಂದರು. ಸುಗ್ರೀವಾಜ್ಞೆ ಹೊರಡಿಸಲು ಸರಕಾರ ನಿರ್ಧರಿಸಿದ್ದೇ ಆದಲ್ಲಿ ವಿರೋಧಿಸುತ್ತೀರಾ ಎಂಬ ಪ್ರಶ್ನೆಗೆ ಅದೊಂದು `ಕಾಲ್ಪನಿಕ ಸನ್ನಿವೇಶ' ಎಂದು ಅವರು ಹೇಳಿದ್ದಾರೆ.

``ನಮ್ಮ ನಿಲುವು ಸ್ಪಷ್ಟ. ನ್ಯಾಯಾಲಯ ನೀಡುವ ಯಾವುದೇ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ. ಆದರೆ ಸರಕಾರ ಸುಗ್ರೀವಾಜ್ಞೆ ಹೊರತರುವುದೆಂದು ನನಗನಿಸುತ್ತಿಲ್ಲ,'' ಎಂದು ಅವರು ಹೇಳಿದರು.

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರರಾಗಿರುವ ಚಿರಾಗ್, “ಸರಕಾರಕ್ಕೆ ಅಭಿವೃದ್ಧಿಯ ಅಜೆಂಡಾ ಇರಬೇಕೆಂದು ಡಿಸೆಂಬರ್ 10ರಂದು ನಡೆದ ಎನ್‍ಡಿಎ ಸಭೆಯಲ್ಲಿ ಸ್ಪಷ್ಟ ಪಡಿಸಿದ್ದೇವೆ. ಕೆಲ ಜನರು ರಾಮ ಮಂದಿರ ಮತ್ತು ಬಜರಂಗ ಬಲಿ ವಿಚಾರಗಳನ್ನು ಎತ್ತುತ್ತಿರುವುದರಿಂದ ಜನರಿಗೆ ಗೊಂದಲವುಂಟಾಗುತ್ತಿದೆ. ನಾವು ನ್ಯಾಯಾಲಯದ ಆದೇಶಕ್ಕೆ ಕಾಯೋಣ,'' ಎಂದು ಹೇಳಿದರು.

ಅಯೋಧ್ಯಾ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿದಂದಿನಿಂದ ಕೇಸರಿ ಸಂಘಟನೆಗಳು ಸುಗ್ರೀವಾಜ್ಞೆ ಹೊರತರಬೇಕೆಂದು ಸರಕಾರದ ಮೇಲೆ ಒತ್ತಡ ಹೇರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News