​ಸುನಂದಾ ಪುಷ್ಕರ್ ಸಾವು: ತರೂರ್‌ಗೆ ದಾಖಲೆ ನೀಡಲು ಕೋರ್ಟ್ ಸೂಚನೆ

Update: 2018-12-19 04:25 GMT

ಹೊಸದಿಲ್ಲಿ, ಡಿ. 19: ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್‌ಗೆ ನಿರ್ದಿಷ್ಟ ದಾಖಲೆಗಳನ್ನು ಹಸ್ತಾಂತರಿಸುವಂತೆ ಇಲ್ಲಿನ ನ್ಯಾಯಾಲಯ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.

ಪ್ರಾಸಿಕ್ಯೂಶನ್ ಸಲ್ಲಿಸಿದ ಎಲೆಕ್ಟ್ರಾನಿಕ್ ದಾಖಲೆಗಳಲ್ಲಿ ಕೆಲ ಭಿನ್ನತೆಗಳು ಇರುವುದರಿಂದ ಮೂಲ ದಾಖಲೆಗಳನ್ನು ನೀಡಲು ಸೂಚಿಸಬೇಕು ಎಂದು ತರೂರ್ ಪರ ವಕೀಲ ವಿಕಾಸ್ ಪಾಹ್ವಾ ಕೋರಿದ ಬಳಿಕ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಈ ನಿರ್ದೇಶನ ನೀಡಿದರು.

ಪ್ರಾಸಿಕ್ಯೂಶನ್ ಸಲ್ಲಿಸಿದ ಪುರಾವೆಗಳ ಪಟ್ಟಿಯಲ್ಲಿ ನಮೂದಿಸಿದ ಕೆಲ ದಾಖಲೆಗಳನ್ನು ತಮಗೆ ನೀಡಿಲ್ಲ ಎಂದು ಹೇಳಿದ್ದರು. ಈ ದಾಖಲೆಗಳ ಪರಿಶೀಲನೆಗೆ ಸರ್ಕಾರಿ ವಕೀಲರು ಸಮಯಾವಕಾಶ ಕೇಳುತ್ತಿರುವುದು ಸಮಸ್ಯೆಯಾಗಿದೆ ಎಂದು ವಾದಿಸಿದ್ದರು.

ಪುಷ್ಕರ್ 2014ರ ಜನವರಿ 17ರಂದು ರಾತ್ರಿ ದೆಹಲಿಯ ಐಷಾರಾಮಿ ಹೋಟೆಲ್‌ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಸಾಕ್ಷಿಗಳ ಹೇಳಿಕೆ ಸೇರಿದಂತೆ ದೆಹಲಿ ಪೊಲೀಸರು ಆರೋಪಪಟ್ಟಿ ಜತೆ ಸಲ್ಲಿಸಿದ ಎಲ್ಲ ದಾಖಲೆಗಳನ್ನು ತರೂರ್‌ಗೆ ಒದಗಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ತಿರುವನಂತಪುರ ಸಂಸದರಾಗಿರುವ ತರೂರು ಕಳೆದ ಜುಲೈ 7ರಂದು ಕಾಯಂ ಜಾಮೀನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News