ಐಎನ್‌ಎಕ್ಸ್ ಮೀಡಿಯ ಪ್ರಕರಣ: ಚಿದಂಬರಂಗೆ ಇಡಿ ಸಮನ್ಸ್

Update: 2018-12-19 15:03 GMT

ಹೊಸದಿಲ್ಲಿ, ಡಿ.19: ಐಎನ್‌ಎಕ್ಸ್ ಮೀಡಿಯ ಹಣ ಅಕ್ರಮ ಸಾಗಣೆ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂಗೆ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಸಮನ್ಸ್ ಜಾರಿಗೊಳಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ತನಿಖಾಧಿಕಾರಿಯ ಎದುರು ಹಾಜರಾಗಿ ಹಣ ಅಕ್ರಮ ಸಾಗಣೆ ಕಾಯ್ದೆಯಡಿ ಹೇಳಿಕೆ ದಾಖಲಿಸುವಂತೆ ಚಿದಂಬರಂಗೆ ಸೂಚಿಸಲಾಗಿದೆ ಎಂದು ಇಡಿ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂರನ್ನು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಕಾರ್ತಿಗೆ ಸೇರಿದ್ದ ದೇಶ ಮತ್ತು ವಿದೇಶದಲ್ಲಿರುವ ಸುಮಾರು 54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. 2007ರಲ್ಲಿ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದ ವಿದೇಶಿ ದೇಣಿಗೆ ಸ್ವೀಕರಿಸಲು ಅಕ್ರಮವಾಗಿ ಕ್ಲಿಯರೆನ್ಸ್ ನೀಡಲಾಗಿದೆ ಎಂದು ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ಆಗ ಚಿದಂಬರಂ ಕೇಂದ್ರ ಸಚಿವರಾಗಿದ್ದರು.

ಅವರ ಪುತ್ರ ಕಾರ್ತಿ ಚಿದಂಬರಂ, ಐಎನ್‌ಎಕ್ಸ್ ಮೀಡಿಯಾ ಹಾಗೂ ಅದರ ನಿರ್ದೇಶಕರಾಗಿದ್ದ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ವಿರುದ್ಧ ಹಣ ಅಕ್ರಮ ಸಾಗಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News