ಅಮೆರಿಕ: ಸಿಖ್ ಟ್ಯಾಕ್ಸಿ ಚಾಲಕನಿಗೆ ಹಲ್ಲೆಗೈದ ವ್ಯಕ್ತಿಗೆ ಜೈಲು

Update: 2018-12-19 15:24 GMT

ನ್ಯೂಯಾರ್ಕ್, ಡಿ. 18: ಕಳೆದ ವರ್ಷ ಸಿಯಾಟಲ್‌ನಲ್ಲಿ ಭಾರತ ಮೂಲದ ಸಿಖ್ ಟ್ಯಾಕ್ಸಿ ಚಾಲಕರೊಬ್ಬರ ಮೇಲೆ ಅಮಾನುಷ ಹಲ್ಲೆ ನಡೆಸಿದ ಅಮೆರಿಕದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯವೊಂದು 15 ತಿಂಗಳ ಸೆರೆವಾಸ ವಿಧಿಸಿದೆ.

2017 ಡಿಸೆಂಬರ್‌ನಲ್ಲಿ 53 ವರ್ಷದ ಸ್ವರಣ್ ಸಿಂಗ್ ಎಂಬವರ ಮೇಲೆ ರಾರಿ ಬೆನ್ಸನ್ ಎಂಬಾತನು ಮಾರಕ ಆಯುಧದಿಂದ ಹಲ್ಲೆ ನಡೆಸಿದ್ದನು ಎಂದು ಸಿಖ್ಖರ ನಾಗರಿಕ ಹಕ್ಕುಗಳ ಸಂಘಟನೆ ‘ದ ಸಿಖ್ ಕೋಯಲೀಶನ್’ ಹೇಳಿದೆ.

ಸಿಯಾಟಲ್‌ನ ನ್ಯಾಯಾಲಯವೊಂದರಲ್ಲಿ ನಡೆದ ವಿಚಾರಣೆಯ ವೇಳೆ ಬೆನ್ಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು.

ಅಪರಾಧಿ ಬೆನ್ಸನ್ ಮತ್ತು ಅವನ ತಾಯಿ ಅವರ ಅಪಾರ್ಟ್‌ಮೆಂಟ್ ಕಟ್ಟಡದ ಸಮೀಪ ಸ್ವರಣ್ ಸಿಂಗ್‌ರ ಕಾರಿನಿಂದ ಇಳಿಯುವಾಗ ಆಕ್ರಮಣ ನಡೆದಿದೆ.

ಬೆನ್ಸನ್ ಕಾರು ಚಾಲಕನ ಬೆನ್ನತ್ತಿ ಸುತ್ತಿಗೆಯಿಂದ ಅವರ ಪೇಟವನ್ನು ಗುರಿಯಾಗಿಸಿ ತಲೆಗೆ ಹೊಡೆದನು ಎಂದು ಆರೋಪಿಸಲಾಗಿದೆ. ಇದರಿಂದಾಗಿ ಅವರ ತಲೆಬುರುಡೆಯ ಎಲುಬು ಮುರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News