ಭಾರತದ ‘ಸೈಲಂಟ್ ಕಿಲ್ಲರ್’ ಅಧಿಕ ರಕ್ತದೊತ್ತಡ

Update: 2018-12-19 18:31 GMT

‘ಸೈಲಂಟ್ ಕಿಲ್ಲರ್’ ಅಥವಾ ‘ವೌನ ಹಂತಕ’ಎಂದೇ ಕುಖ್ಯಾತಿ ಪಡೆದಿರುವ ಅಧಿಕ ರಕ್ತದೊತ್ತಡವು ಭಾರತದಲ್ಲಿ ಶೇ.57ರಷ್ಟು ಎಲ್ಲ ಪಾರ್ಶ್ವವಾಯು ಸಾವುಗಳಿಗೆ ಕಾರಣವಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿಯಂತೆ ಅಧಿಕ ರಕ್ತದೊತ್ತಡವು ಪ್ರತಿವರ್ಷ ವಿಶ್ವಾದ್ಯಂತ 9.4 ಮಿಲಿಯ ಜನರನ್ನು ಸಾವಿನ ಮಡಿಲಿಗೆ ತಳ್ಳುತ್ತದೆ. ಇದು ಏಡ್ಸ್, ರಸ್ತೆ ಅಪಘಾತಗಳು, ಮಧುಮೇಹ ಮತ್ತು ಕ್ಷಯರೋಗದಿಂದ ಸಂಭವಿಸುವ ಒಟ್ಟು ಸಾವುಗಳ ಸಂಖ್ಯೆಗಿಂತ ಅಧಿಕವಾಗಿದೆ. ಇದರೊಂದಿಗೆ ಅಧಿಕ ರಕ್ತದೊತ್ತಡವು ಸಾವುಗಳು ಮತ್ತು ಕಾಯಿಲೆಗಳನ್ನು ತರುವ ಪ್ರಮುಖ ಅಪಾಯವಾಗಿದೆ.
ವರದಿಯು ಹೇಳಿರುವಂತೆ ಸತ್ತವರಲ್ಲಿ ಹೆಚ್ಚಿನವರಿಗೆ ತಾವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೇವೆ ಎನ್ನುವುದೇ ಗೊತ್ತಿರಲಿಲ್ಲ, ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ಯಾವುದೇ ಸ್ಪಷ್ಟ ಲಕ್ಷಣಗಳನ್ನು ಪ್ರಕಟಿಸುವುದಿಲ್ಲ. ಇದೇ ಕಾರಣದಿಂದ ಅಧಿಕ ರಕ್ತದೊತ್ತಡವನ್ನು ‘ಸೈಲಂಟ್ ಕಿಲ್ಲರ್’ ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅದು ಭಾರತದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಪ್ರತಿವರ್ಷ 1.1 ಮಿಲಿಯ ಜನರು ಅಧಿಕ ರಕ್ತದೊತ್ತಡದಿಂದಾಗಿಯೇ ಸಾಯುತ್ತಾರೆ.
ವಾಶಿಂಗ್ಟನ್‌ನ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವ್ಯಾಲ್ಯುಯೇಷನ್‌ನ ವರದಿಯಂತೆ ಅಧಿಕ ರಕ್ತದೊತ್ತಡವು ಭಾರತದಲ್ಲಿ ಸಾವುಗಳು ಮತ್ತು ಅಂಗವೈಕಲ್ಯಗಳಿಗೆ ನಾಲ್ಕನೇ ಪ್ರಮುಖ ಕಾರಣವಾಗಿದ್ದು, 2016ನೇ ಸಾಲಿನಲ್ಲಿ 1.6 ಮಿಲಿಯಕ್ಕೂ ಹೆಚ್ಚು ಸಾವುಗಳು ಇದರಿಂದಾಗಿ ಸಂಭವಿಸಿವೆ.
ಹೆಚ್ಚಾಗಿ 50 ವರ್ಷ ದಾಟಿದವರನ್ನೇ ಬಾಧಿಸುತ್ತದೆ ಎಂದು ಈ ಹಿಂದೆ ಭಾವಿಸಲಾಗುತ್ತಿದ್ದ ಅಧಿಕ ರಕ್ತದೊತ್ತಡವು ಈಗ ಯುವಜನರನ್ನೂ ಕಾಡುತ್ತಿದೆ. 15ವರ್ಷ ಪ್ರಾಯದ ಮಕ್ಕಳನ್ನೂ ಈ ಸಂಕಷ್ಟ ಬಿಡುತ್ತಿಲ್ಲ. ಧೂಮ್ರಪಾನ ಮತ್ತು ಮದ್ಯಪಾನ ಮಾಡದ, ಬೊಜ್ಜುದೇಹ ಹೊಂದಿರದವರೂ ಅಧಿಕ ರಕ್ತದೊತ್ತಡಕ್ಕೆ ತುತ್ತಾಗುತ್ತಿದ್ದಾರೆ.
ದೀರ್ಘಾವಧಿಯ ಅಧಿಕ ರಕ್ತದೊತ್ತಡವು ಪರಿಧಮನಿ ಕಾಯಿಲೆ, ಪಾರ್ಶ್ವವಾಯು, ಹೃದಯ ವೈಫಲ್ಯ, ಹೃತ್ಕರ್ಣ ಕಂಪನ, ಕಣ್ಣಿನ ರಕ್ತನಾಳಗಳಿಗೆ ಹಾನಿ, ಬಾಹ್ಯ ನಾಳೀಯ ಕಾಯಿಲೆ, ಲೈಂಗಿಕ ದೌರ್ಬಲ್ಯ, ಮೂತ್ರಪಿಂಡ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಯ ಅಪಾಯಗಳನ್ನು ಹೆಚ್ಚಿಸುತ್ತದೆ.
ಭಾರತದಲ್ಲಿ ಸಂಭವಿಸುವ ಎಲ್ಲ ಪರಿಧಮನಿ ಹೃದಯ ರೋಗ(ಸಿಎಚ್‌ಡಿ) ಸಾವುಗಳ ಪೈಕಿ ಶೇ.24ರಷ್ಟು ಸಾವುಗಳಿಗೆ ಅಧಿಕ ರಕ್ತದೊತ್ತಡವು ಕಾರಣವಾಗಿದೆ ಎನ್ನುತ್ತಿವೆ ವರದಿಗಳು.
ದಿಲ್ಲಿಯ ಏಮ್ಸ್‌ನ ಅಧ್ಯಯನ ವರದಿಯಂತೆ ನಗರ ಪ್ರದೇಶಗಳಲ್ಲಿ ಪ್ರತಿ ಇಬ್ಬರಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮೂವರಲ್ಲಿ ಒಬ್ಬರಿಗೆ ತಾವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೇವೆ ಎಂಬ ಕಟುಸತ್ಯದ ಅರಿವಿಲ್ಲ. ಒತ್ತಡ, ನಿದ್ರೆಯ ಕೊರತೆ, ಅನಾರೋಗ್ಯಕರ ಆಹಾರ ಸೇವನೆ ಹಾಗೂ ಮದ್ಯ ಮತ್ತು ತಂಬಾಕಿನ ಅತಿಯಾದ ಸೇವನೆಯಂತಹ ಹಲವಾರು ಕಾರಣಗಳು ಯುವಜನರನ್ನು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗಿಸುತ್ತಿವೆ.
ಕಾರ್ಡಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ(ಸಿಎಸ್‌ಐ)ದ 70ನೇ ವಾರ್ಷಿಕ ಸಮಾವೇಶದಲ್ಲಿ ಮಂಡಿಸಲಾದ ಸಂಶೋಧನಾ ವರದಿಯಂತೆ ಭಾರತದಲ್ಲಿ ಪ್ರತಿ ಐವರು ಯುವಜನರಲ್ಲಿ ಓರ್ವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಪಾಶ್ಚಾತ್ಯರಿಗೆ ಹೋಲಿಸಿದರೆ ಯುವವಯಸ್ಸಿನ ಭಾರತೀಯರಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳು ಹೆಚ್ಚಾಗಿವೆ ಹಾಗೂ ಮೊದಲ ಹೃದಯಾಘಾತಗಳು ಮತ್ತು ಮಿದುಳಿನ ಆಘಾತಗಳು ಸರಾಸರಿಯಾಗಿ ಹತ್ತು ವರ್ಷಗಳಿಗೆ ಮೊದಲೇ ಸಂಭವಿಸುತ್ತಿವೆ. ಭಾರತೀಯರು ಸಾಮಾನ್ಯವಾಗಿ 30ನೇ ವರ್ಷದಿಂದ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಆರಂಭಿಸುತ್ತಾರೆ. ‘‘ಭಾರತಕ್ಕೆ ಎದುರಾಗಲಿರುವ ಆರೋಗ್ಯ ಬಿಕ್ಕಟ್ಟನ್ನು ತಪ್ಪಿಸಿಕೊಳ್ಳಲು ಎಳೆಯ ವಯಸ್ಸಿನಲ್ಲಿಯೇ ನಿಯಮಿತವಾಗಿ ವೈದ್ಯಕೀಯ ತಪಾಸಣೆಗಳು ಮತ್ತು ಆರೋಗ್ಯಕರ ಜೀವನಶೈಲಿಗಳನ್ನು ಅನುಸರಿಸುವ ಅಗತ್ಯವಿದೆ’’ ಎನ್ನುತ್ತಾರೆ ವರದಿಯ ಲೇಖಕ ಡಾ. ಕಾರ್ತಿಕ್ ಗುಪ್ತಾ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ನಡುವಿನ ಗಾಢಸಂಬಂಧವನ್ನು ಸಿಎಸ್‌ಐನ ಸಂಶೋಧನೆಯೊಂದು ಬಹಿರಂಗಗೊಳಿಸಿದೆ. ಮಧುಮೇಹಿಗಳು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವು ಇತರರಿಗೆ ಹೋಲಿಸಿದರೆ ಎರಡು ಪಟ್ಟುಗಳಷ್ಟು ಇರುತ್ತದೆ. ಕಳವಳದ ವಿಷಯವೆಂದರೆ ಭಾರತದಲ್ಲಿ ಮಧುಮೇಹ ಪ್ರಕರಣಗಳೂ ಹೆಚ್ಚುತ್ತಿವೆ.
 ಭಾರತದಲ್ಲಿ ಶೇ.5ರಿಂದ ಶೇ.10 ಜನರು ಮಧುಮೇಹಿಗಳಾಗಿದ್ದಾರೆ. ಶೇ.25ರಿಂದ ಶೇ.30ರಷ್ಟು ಜನರು ತಂಬಾಕು ತಿನ್ನುತ್ತಾರೆ ಅಥವಾ ಧೂಮ್ರಪಾನ ಮಾಡುತ್ತಾರೆ ಮತ್ತು ಶೇ.20ರಿಂದ ಶೇ.30ರಷ್ಟು ಜನರು ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದಾರೆ. ಹೆಚ್ಚಿನ ಭಾರತೀಯರು ವ್ಯಾಯಾಮವನ್ನು ಮಾಡುವುದಿಲ್ಲ ಮತ್ತು ಅವರ ಆಹಾರದಲ್ಲಿ ಸಾಂಪ್ರದಾಯಿಕವಾಗಿ ಉಪ್ಪು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ತರಕಾರಿ ಮತ್ತು ಹಣ್ಣುಗಳ ಸೇವನೆಯೂ ಕಡಿಮೆಯಿದೆ ಹಾಗೂ ಜಂಕ್‌ಫುಡ್ ಮತ್ತು ಮೃದುಪಾನೀಯಗಳ ಸೇವನೆ ಹೆಚ್ಚುತ್ತಿದೆ. ಇವೆಲ್ಲ ಅಂಶಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಯುವಜನರು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವುದು ಹೆಚ್ಚುತ್ತಿದೆ. ಹೀಗಾಗಿ 18-19ರ ವಯಸ್ಸಿನಿಂದಲೇ ನಿಯಮಿತವಾಗಿ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳುವ ಅಗತ್ಯವಿದೆ. ಆರಂಭದಲ್ಲೇ ಪತ್ತೆಯಾದರೆ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಎನ್ನುತ್ತಾರೆ ಡಾ.ಎ.ಕೆ ಶಾದ್ರಾ.
ಅತಿಯಾದ ರಕ್ತದೊತ್ತಡವು ತಲೆನೋವು, ಮಸುಕಾದ ದೃಷ್ಟಿ, ಮೂಗಿನಲ್ಲಿ ರಕ್ತಸ್ರಾವ, ಉಸಿರಾಟಕ್ಕೆ ತೊಂದರೆ, ಎದೆನೋವು, ಅನಿಯಮಿತ ಹೃದಯ ಬಡಿತ, ಮೂತ್ರದಲ್ಲಿ ರಕ್ತ, ಮಾನಸಿಕ ಗೊಂದಲ, ಎದೆ, ಕುತ್ತಿಗೆ ಮತ್ತು ಕಿವಿಗಳಲ್ಲಿ ಗುದ್ದಿದಂತಹ ಅನುಭವ ಇತ್ಯಾದಿಗಳಿಗೆ ಕಾರಣವಾಗುತ್ತದೆ.
ಸುದೀರ್ಘ ಕಾಲದಿಂದಲೂ ಜಗತ್ತಿನಲ್ಲಿ ಹೃದಯ ಕಾಯಿಲೆಗಳು ಮತ್ತು ಅಕಾಲಿಕ ಸಾವುಗಳಿಗೆ ಅಧಿಕ ರಕ್ತದೊತ್ತಡವು ಪ್ರಮುಖ ಕಾರಣವಾಗಿದೆಯಾದರೂ, ಇಂದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅದರ ಹಾವಳಿ ಹೆಚ್ಚುತ್ತಿದೆ.
ಸಾಂಕ್ರಾಮಿಕವಲ್ಲದ ರೋಗ(ಎನ್‌ಸಿಡಿ)ಗಳ ತಡೆ ಮತ್ತು ನಿಯಂತ್ರಣಕ್ಕಾಗಿ 2013-20ನೇ ಅವಧಿಗೆ ವಿಶ್ವ ಆರೋಗ್ಯ ಸಂಸ್ಥೆಯು ರೂಪಿಸಿರುವ ಜಾಗತಿಕ ಕ್ರಿಯಾ ಯೋಜನೆಗೆ ಅನುಗುಣವಾಗಿ 2050ರ ವೇಳೆಗೆ ಎನ್‌ಸಿಡಿಗಳಿಂದಾಗುವ ಅಕಾಲಿಕ ಸಾವುಗಳ ಪ್ರಮಾಣವನ್ನು ಶೇ.25ರಷ್ಟು ತಗ್ಗಿಸವುದು ಭಾರತದ ಗುರಿಯಾಗಿದೆ. ಆದರೆ ನಾವಿದನ್ನು ಸಾಧಿಸಬಲ್ಲೆವೇ?

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News