ವಸತಿಗೆ ಸಿದ್ಧವಾಗಿರುವ ಫ್ಲಾಟ್ ಖರೀದಿಸುತ್ತಿದ್ದೀರಾ?

Update: 2018-12-20 11:31 GMT

ನೀವು ನಿರ್ಮಾಣ ಪೂರ್ಣಗೊಂಡಿರುವ ನಿಮ್ಮ ಕನಸಿನ ಮನೆಯನ್ನು ಆಯ್ಕೆ ಮಾಡಿಕೊಂಡಿರಬಹುದು ಮತ್ತು ಹಣವನ್ನು ಪಾವತಿಸಿ ನೋಂದಣಿ ಮಾಡಿಸಿಕೊಳ್ಳಲು ಸಜ್ಜಾಗಿರಬಹುದು. ಮನೆ ಸಾಲವೂ ಪೂರ್ಣವಾಗಿ ಮಂಜೂರಾಗಿರುವುದರಿಂದ ನಿಗದಿತ ಬೆಲೆಯನ್ನು ಪಾವತಿಸಲು ನಿಮಗೆ ಸಮಸ್ಯೆಯಿಲ್ಲ ಮತ್ತು ಗೃಹಪ್ರವೇಶಕ್ಕೆ ಆಹ್ವಾನಿಸಲು ಅತಿಥಿಗಳು ಮತ್ತು ಬಂಧುಗಳ ಪಟ್ಟಿಯನ್ನೂ ನೀವು ಮಾಡಿಟ್ಟಿರಬಹುದು.

ಆದರೆ ಸ್ವಲ್ಪ ನಿಲ್ಲಿ. ಬಿಲ್ಡರ್‌ಗೆ ನಿರ್ಮಾಣ ಪೂರ್ಣಗೊಂಡಿದೆ ಎಂಬ ಪ್ರಮಾಣಪತ್ರ (ಕಂಪ್ಲೀಷನ್ ಸರ್ಟಿಫಿಕೇಟ್) ಸಿಕ್ಕಿದೆಯೇ ಇಲ್ಲವೇ ಎನ್ನುವುದನ್ನು ಮೊದಲು ಖಚಿತ ಪಡಿಸಿಕೊಳ್ಳಿ. ಈ ಪ್ರಮಾಣಪತ್ರ ವಿತರಣೆಗೆ ಮೊದಲೇ ನೀವು ಆಸ್ತಿಯನ್ನು ಖರೀದಿಸಿದರೆ ಜಿಎಸ್‌ಟಿಯನ್ನು ಪಾವತಿಸಲು ಶೇ.12ರಷ್ಟು ಹೆಚ್ಚಿನ ಹಣವನ್ನು ನೀವು ಕಕ್ಕಬೇಕಾಗುತ್ತದೆ. ಅಂದರೆ ನೀವು ಖರೀದಿಸುವ ಆಸ್ತಿಯ ಬೆಲೆ 50 ಲಕ್ಷ ರೂ.ಗಳಾಗಿದ್ದರೆ ನೀವು ಇನ್ನೂ ಆರು ಲಕ್ಷ ರೂ.ಗಳನ್ನು ಜಿಎಸ್‌ಟಿಯ ರೂಪದಲ್ಲಿ ಸರಕಾರಕ್ಕೆ ಪಾವತಿಸಬೇಕಾಗುತ್ತದೆ.

ಹೀಗಾಗಿ ಫ್ಲಾಟ್‌ನ ಸೂಪರ್ ಫಿನಿಷಿಂಗ್ ಮತ್ತು ದುಬಾರಿ ಬೆಲೆಯ ಫಿಟಿಂಗ್ ಇತ್ಯಾದಿಗಳನ್ನು ಕಂಡು ಪುಳಕಿತರಾಗಬೇಕಿಲ್ಲ,ಆದರೆ ಫ್ಲಾಟ್‌ಗೆ ಕಂಪ್ಲೀಷನ್ ಸರ್ಟಿಫಿಕೇಟ್ ಲಭಿಸಿದೆಯೇ ಮತ್ತು ಅದು ವಸತಿ ಹೂಡಲು ಸಿದ್ಧ(ರೆಡಿ ಟು ಮೂವ್)ವಾಗಿದೆಯೇ ಇಲ್ಲವೇ ಎನ್ನ್ನುವುದನ್ನು ಪರಿಶೀಲಿಸಿ. ಕಂಪ್ಲೀಷನ್ ಸರ್ಟಿಫಿಕೇಟ್ ವಿತರಣೆಯ ಬಳಿಕ ಮಾರಾಟವಾದ ರೆಡಿ ಟು ಮೂವ್ ಫ್ಲಾಟ್‌ಗಳಿಗೆ ಮಾತ್ರ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ ಎಂದು ಇತ್ತೀಚಿನ ಜಿಎಸ್‌ಟಿ ಪ್ರಕಟಣೆಯು ಸ್ಪಷ್ಟಪಡಿದಿರುವುದರಿಂದ ಈ ಪರಿಶೀಲನೆ ಅತ್ಯಂತ ಮಹತ್ವದ್ದಾಗಿದೆ.

ನಿರ್ಮಾಣ ಹಂತದಲ್ಲಿರುವ ಆಸ್ತಿಗಳು ಅಥವಾ ಮಾರಾಟದ ಸಮಯದಲ್ಲಿ ಕಂಪ್ಲೀಷನ್ ಸರ್ಟಿಫಿಕೇಟ್ ಲಭಿಸಿರದ ಫ್ಲಾಟ್‌ಗಳ ಮಾರಾಟದ ಮೇಲೆ ಜಿಎಸ್‌ಟಿ ಅನ್ವಯಿಸುತ್ತದೆ ಎಂದು ಕೇಂದ್ರ ವಿತ್ತ ಸಚಿವಾಲಯವು ತನ್ನ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ.

ರೆಡಿ ಟು ಮೂವ್ ಎಂದು ಪರಿಗಣಿಸಲಾದ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸಿದ್ದರಿಂದ ಖರೀದಿದಾರರಿಗೆ ಈವರೆಗೆ ಗಣನೀಯ ಆಯ್ಕೆಗಳು ಲಭ್ಯವಿದ್ದವು,ಆದರೆ ಈ ಪ್ರಕಟಣೆಯ ಬಳಿಕ ಕಂಪ್ಲೀಷನ್ ಸರ್ಟಿಫೀಕೇಟ್ ಇಲ್ಲದ ಫ್ಲಾಟ್‌ಗಳು ಜಿಎಸ್‌ಟಿ ವ್ಯಾಪ್ತಿಗೆ ಬಂದಿವೆ.

ನೀವು ಖರೀದಿಸಲು ಬಯಸಿರುವ ಫ್ಲಾಟ್ ಕಂಪ್ಲೀಷನ್ ಸರ್ಟಿಫಿಕೇಟ್ ಹೊಂದಿಲ್ಲವಾದರೆ ಮತ್ತು ವಸತಿಗೆ ಸಿದ್ಧವಾಗಿಲ್ಲದಿದ್ದರೆ ನೀವು ಸಾಲದ ಮೊತ್ತವನ್ನು ಹೆಚ್ಚಿಸುವಂತೆ ನಿಮ್ಮ ಬ್ಯಾಂಕನ್ನು ಕೇಳಿಕೊಳ್ಳಬೇಕಾಗುತ್ತದೆ ಇಲ್ಲವೇ ಕೆಲವು ಲಕ್ಷ ರೂ.ಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಬೃಹತ್ ಪ್ರಮಾಣದಲ್ಲಿ ಫ್ಲಾಟ್‌ಗಳು ಮಾರಾಟವಾಗದೇ ಉಳಿದುಕೊಂಡಿರುವುದರಿಂದ ಈಗಾಗಲೇ ಕಷ್ಟದಲ್ಲಿರುವ ಬಿಲ್ಡರ್‌ಗಳು ದಿಢೀರ್ ಎನ್‌ಬಿಎಫ್‌ಸಿ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ನಗದು ಹರಿವನ್ನು ಸೃಷ್ಟಿಸಲು ಖಾಲಿ ಬಿದ್ದಿರುವ ಫ್ಲಾಟ್‌ಗಳ ಮಾರಾಟದ ಚಿಂತೆಯೊಂದಿಗೆ ಸಾಲವೆತ್ತುವುದೂ ಅವರಿಗೆ ದೊಡ್ಡ ತಲೆನೋವಾಗಿರುವುದರಿಂದ ಅವರಿಂದ ನೆರವನ್ನು ನೀವು ನಿರೀಕ್ಷಿಸುವಂತಿಲ್ಲ.

ನೂತನ ಜಿಎಸ್‌ಟಿ ಪ್ರಕಟಣೆಯು ಹೊಸ ಫ್ಲಾಟ್‌ಗಳನ್ನು ನಿರ್ಮಿಸುವವರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತದೆ. ಆದರೆ ಮರುಮಾರಾಟದ ಆಸ್ತಿಗಳು ಕಂಪ್ಲೀಷನ್ ಸರ್ಟಿಫಿಕೇಟ್ ಹೊಂದಿದ್ದು,ಜಿಎಸ್‌ಟಿಯಿಂದ ವಿನಾಯಿತಿ ಪಡೆದಿರುವುದರಿಂದ ಅವುಗಳ ಮಾರಾಟ ಚುರುಕುಗೊಳ್ಳಲಿದೆ.

ಹೀಗಾಗಿ ಶೇ.12 ರಷ್ಟು ಜಿಎಸ್‌ಟಿಯನ್ನು ಉಳಿಸಲು ನೀವು ಮರುಮಾರಾಟಕ್ಕಿರುವ ಫ್ಲಾಟ್ ಖರೀದಿಸಲು ಪ್ರಯತ್ನಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News