×
Ad

ಕಂಪ್ಯೂಟರ್‌ಗಳ ಮೇಲೆ ನಿಗಾ ಆದೇಶ: ಸರಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು

Update: 2018-12-21 22:29 IST

ಹೊಸದಿಲ್ಲಿ,ಡಿ.21: ದೇಶದ ಯಾವುದೇ ಕಂಪ್ಯೂಟರ್‌ನಲ್ಲಿ ಸ್ವೀಕೃತ,ರವಾನೆಯಾದ ಮತ್ತು ಸಂಗ್ರಹಿತ ಮಾಹಿತಿಗಳ ಮೇಲೆ ನಿಗಾಯಿರಿಸುವಂತೆ 10 ಕೇಂದ್ರೀಯ ಸಂಸ್ಥೆಗಳಿಗೆ ಸರಕಾರದ ಆದೇಶವನ್ನು ಪ್ರತಿಪಕ್ಷಗಳು ಕಟುವಾಗಿ ಟೀಕಿಸಿವೆ. ಇದು ದೇಶವನ್ನು ಕಣ್ಗಾವಲು ರಾಜ್ಯವನ್ನಾಗಿಸುವ ಸರಕಾರದ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಬಣ್ಣಿಸಿದೆ.

ಈ ಆದೇಶದ ಮೂಲಕ ಬಿಜೆಪಿ ನೇತೃತ್ವದ ಸರಕಾರವು ದೇಶವನ್ನು ಕಣ್ಗಾವಲು ರಾಜ್ಯವನ್ನಾಗಿ ಮಾಡುತ್ತಿದೆ. ಇದು ಖಾಸಗಿತನದ ಹಕ್ಕಿನ ವಿರುದ್ಧವಾಗಿದೆ. ಇದು ಪರಮಾಧಿಕಾರದ ಬಳಕೆಯನ್ನು ತೋರಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಆನಂದ ಶರ್ಮಾ ಹೇಳಿದರು. ರಾಜ್ಯಸಭೆಯಲ್ಲಿ ಶರ್ಮಾರಿಗೆ ಉತ್ತರಿಸಿದ ವಿತ್ತಚಿವ ಅರುಣ್ ಜೇಟ್ಲಿ ಅವರು,2009ರಿಂದಲೇ ಜಾರಿಯಲ್ಲಿದ್ದ ಆದೇಶವನ್ನು ಡಿ.20ರಂದು ನವೀಕರಿಸಲಾಗಿದೆ, ನೀವು ಗುಡ್ಡವನ್ನು ಅಗೆದು ಇಲಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೀರಿ. ಮಾಹಿತಿಗಳ ಮೇಲೆ ನಿಗಾಯಿರಿಸುವ ಅಧಿಕಾರವನ್ನು ಕೆಲವು ಏಜೆನ್ಸಿಗಳು ಸದಾ ಹೊಂದಿವೆ. 2009ರಲ್ಲಿ ಯುಪಿಎ ಸರಕಾರವು ಈ ಅಧಿಕಾರವನ್ನು ಕಾನೂನಿನ ವ್ಯಾಪ್ತಿಗೆ ತಂದಿತ್ತು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸದ ಮಾಹಿತಿ ಅಥವಾ ಫೋನ್ ಸಂವಾದಗಳಿಗೆ ನಾವು ಕೈಹಾಕುವಂತಿಲ್ಲ ಎಂದು ತಿಳಿಸಿದರು.

ಇದೊಂದು ಅಪಾಯಕಾರಿ ಕ್ರಮ ಎಂದು ಎಸ್ಪಿ ನಾಯಕ ರಾಮಗೋಪಾಲ ಯಾದವ್ ಹೇಳಿದರೆ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಇದು ಅಪಾಯಕಾರಿ ಎಂದು ಬಣ್ಣಿಸಿದ್ದಾರೆ. ಅವರು ಟ್ವಿಟರ್‌ನಲ್ಲಿ ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕೋರಿದ್ದಾರೆ.

ಪ್ರತಿಯೊಬ್ಬ ಭಾರತೀಯನನ್ನೂ ಅಪರಾಧಿಯಂತೆ ಏಕೆ ನೋಡಲಾಗುತ್ತಿದೆ ಎಂದು ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಪ್ರಶ್ನಿಸಿದರೆ,ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು,ಬಿಜೆಪಿಯವರು ‘ಘರ್ ಘರ್ ಮೋದಿ’ ಎಂದು ಹೇಳಿದ್ದಾಗ ಅವರ ಅರ್ಥ ಇದುವೇ ಆಗಿತ್ತು ಎನ್ನುವುದು ಯಾರಿಗೆ ಗೊತ್ತಿತ್ತು ಎಂದು ವ್ಯಂಗ್ಯ ವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News