×
Ad

ಕರ್ತಾರ್‌ಪುರಕ್ಕಾಗಿ ಭಾರತ-ಪಾಕ್ ನಡುವೆ ಜಮೀನು ವಿನಿಮಯ ಒಪ್ಪಂದವಿಲ್ಲ: ಪಾಕ್

Update: 2018-12-21 22:44 IST

ಇಸ್ಲಾಮಾಬಾದ್, ಡಿ. 21: ಸಿಖ್ಖರ ಆರಾಧನಾ ಮಂದಿರವಿರುವ ಕರ್ತಾರ್‌ಪುರವನ್ನು ಭಾರತಕ್ಕೆ ಸೇರಿಸುವ ನಿಟ್ಟಿನಲ್ಲಿ, ಜಮೀನು ವಿನಿಮಯ ಮಾಡಿಕೊಳ್ಳುವ ಭಾರತದ ಪ್ರಸ್ತಾಪವನ್ನು ಪಾಕಿಸ್ತಾನ ಸಾರಾಸಗಟಾಗಿ ತಿರಸ್ಕರಿಸಿದೆ.

ಸಿಖ್ಖರ ಅತ್ಯಂತ ಪವಿತ್ರ ಕರ್ತಾರ್‌ಪುರ ಗುರುದ್ವಾರವು ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ಪಾಕಿಸ್ತಾನದ ಭಾಗದಲ್ಲಿದೆ.

ಕರ್ತಾರ್‌ಪುರದ ಜಮೀನನ್ನು ಭಾರತಕ್ಕೆ ನೀಡುವ ಉದ್ದೇಶದ ಜಮೀನು ವಿನಿಮಯ ಪ್ರಸ್ತಾಪವನ್ನು ಪಾಕಿಸ್ತಾನವು ಪರಿಶೀಲಿಸುವುದೇ ಎಂಬುದಾಗಿ ಇಸ್ಲಾಮಾಬಾದ್‌ನಲ್ಲಿ ಗುರುವಾರ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರ ಮುಹಮ್ಮದ್ ಫೈಸಲ್, ‘‘ಖಂಡಿತವಾಗಿಯೂ ಇಲ್ಲ’’ ಎಂದು ಹೇಳಿದರು.

‘‘ಕರ್ತಾರ್‌ಪುರ ಧಾರ್ಮಿಕ ಕ್ಷೇತ್ರದ ಭೇಟಿಯನ್ನು ಸುಲಭಗೊಳಿಸಲು ವೀಸಾ-ಮುಕ್ತ ಕಾರಿಡಾರ್ ಒದಗಿಸಬೇಕೆಂಬ ಮನವಿಗೆ ಸ್ಪಂದಿಸಿ ಸಿಖ್ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದ ಕೊಡುಗೆ ಅದಾಗಿದೆ. ಕರ್ತಾರ್‌ಪುರ ಕಾರಿಡಾರನ್ನು ನಿರ್ಮಿಸುವ ನಿರ್ಧಾರವನ್ನು ಸರಕಾರಗಳ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಹಾಗೂ ಭಾರತ ಸರಕಾರ ಇದರಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದೆ’’ ಎಂದು ಅವರು ಹೇಳಿದರು.

ಗುರು ನಾನಕರ ಅಂತಿಮ ವಿಶ್ರಾಂತಿ ಸ್ಥಳವಾಗಿರುವ ಕರ್ತಾರ್‌ಪುರಕ್ಕೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಜಮೀನು ವಿನಿಮಯ ಒಪ್ಪಂದ ಏರ್ಪಡಬೇಕೆಂದು ಒತ್ತಾಯಿಸಿ ಪಂಜಾಬ್ ವಿಧಾನಸಭೆ ಡಿಸೆಂಬರ್ 14ರಂದು ಸರ್ವಾನುಮತದ ನಿರ್ಣಯವೊಂದನ್ನು ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News