ರಕ್ಷಣಾ ಇಲಾಖೆಯ ಸ್ಥಿರಾಸ್ತಿಗಳು ಮಹತ್ವದ್ದಾಗಿವೆ: ರಕ್ಷಣಾ ಸಚಿವೆ

Update: 2018-12-22 15:27 GMT

ಹೊಸದಿಲ್ಲಿ,ಡಿ.22: ನಗರಗಳಲ್ಲಿಂದು ನಗರೀಕರಣ ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಶನಿವಾರ ಇಲ್ಲಿ ಒತ್ತಿ ಹೇಳಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು,ರಕ್ಷಣಾ ಇಲಾಖೆಯ ಸ್ಥಿರಾಸ್ತಿಗಳು ಮಹತ್ವಪೂರ್ಣವಾಗಿವೆ ಮತ್ತು ಯಾವುದೇ ವಿಧದಿಂದ ಅವುಗಳ ಅತಿಕ್ರಮಣವಾಗದಂತೆ ಹೆಚ್ಚು ಎಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ರಕ್ಷಣಾ ಸ್ಥಿರಾಸ್ತಿಗಳ ಮಹಾ ನಿರ್ದೇಶನಾಲಯ(ಡಿಜಿಡಿಇ)ವು ಆಯೋಜಿಸಿದ್ದ 2018ರ ರಕ್ಷಾ ಮಂತ್ರಿ ಉತ್ಕೃಷ್ಟತಾ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು,ರಕ್ಷಣಾ ಇಲಾಖೆಯ ಭೂಮಿ ಅತಿಕ್ರಮಣವಾಗದಂತೆ ನೋಡಿಕೊಳ್ಳಲು ದಂಡುಪ್ರದೇಶ ಆಡಳಿತ ಮತ್ತು ಮುನ್ಸಿಪಲ್ ಪ್ರಾಧಿಕಾರಗಳ ನಡುವೆ ಹೆಚ್ಚಿನ ಸಮನ್ವಯಕ್ಕೂ ಒತ್ತು ನೀಡಿದರು.

ರಕ್ಷಣಾ ಸ್ಥಿರಾಸ್ತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಮತ್ತು ಅವುಗಳ ರಕ್ಷಣೆಯು ದೇಶದ ಗಡಿಗಳ ರಕ್ಷಣೆಯಷ್ಟೇ ಮುಖ್ಯವಾಗಿದೆ. ಡಿಜಿಡಿಇ ನಿಯಂತ್ರಣದಲ್ಲಿ ಹಲವಾರು ಲಕ್ಷ ಎಕರೆಗಳಷ್ಟು ರಕ್ಷಣಾ ಭೂಮಿಯಿದೆ. ಕೆಲವು ದಂಡುಪ್ರದೇಶಗಳಲ್ಲಿ 20 ಲಕ್ಷಕ್ಕೂ ಅಧಿಕ ನಾಗರಿಕರು ಅವುಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದ ಸಚಿವೆ,ಡಿಜಿಡಿಇ ನಿರ್ವಹಿಸುತ್ತಿರುವ ಪ್ರದೇಶಗಳು ದೂರದ ಸ್ಥಳಗಳಲ್ಲಿ,ದುರ್ಗಮ ಪ್ರದೇಶಗಳಲ್ಲಿ ಇರಬಹುದು,ಆದರೆ ರಕ್ಷಣಾ ಆಸ್ತಿಗಳ ವಿಸ್ತರಣೆಯು ಅತ್ಯಂತ ಮುಖ್ಯವಾಗಿದೆ. ಇವು ತುರ್ತು ಸಂದರ್ಭಗಳಲ್ಲಿ ಮತ್ತು ದೇಶದ ರಕ್ಷಣೆಯಲ್ಲಿ ನಿರ್ಣಾಯಕವಾಗಿವೆ ಮತ್ತು ನಮ್ಮ ಯೋಧರಿಗೆ ವಸತಿಗಳನ್ನು ಕಲ್ಪಿಸಲೂ ಮುಖ್ಯವಾಗಿವೆ ಎಂದರು.

ಈ ವರ್ಷದ ಆರಂಭದಲ್ಲಿ ವಿವಿಧ ದಂಡುಪ್ರದೇಶ ಮಂಡಳಿಗಳ ಚುನಾಯಿತ ಪ್ರತಿನಿಧಿಗಳು ತನ್ನನ್ನು ಭೇಟಿಯಾಗಿ ಕೆಲವು ಪ್ರದೇಶಗಳಿಗೆ ರಸ್ತೆಗಳು ಮತ್ತು ಸಂಪರ್ಕಾವಕಾಶಗಳ ಬಗ್ಗೆ ಚರ್ಚಿಸಿದ್ದರು ಎಂದ ಅವರು,ನಗರೀಕರಣವು ಭರದಿಂದ ನಡೆಯುತ್ತಿರುವ ಪಟ್ಟಣಗಳು ಮತ್ತು ನಗರಗಳಲ್ಲಿ ರಕ್ಷಣಾ ಸ್ಥಿರಾಸ್ತಿಗಳ ಸಮೀಪದಲ್ಲಿರುವ ಪ್ರದೇಶಗಳಿಂದ ಒತ್ತಡಗಳು ಹೆಚ್ಚುತ್ತಿವೆ. ಸ್ಥಳೀಯ ಅಧಿಕಾರಿಗಳು ಮತ್ತು ಡಿಜಿಡಿಇ ನಡುವೆ ಸಮನ್ವಯದ ಕೊರತೆಯಿಂದಾಗಿ ನಾವು ಬಹುಶಃ ಬಹಳಷ್ಟು ಸ್ಥಳವನ್ನು ಕಳೆದುಕೊಳ್ಳಬಹುದು ಎಂದರು.

ರಕ್ಷಣಾ ಆಸ್ತಿಗಳ ಅತಿಕ್ರಮಣವಾದರೆ ಬಳಿಕ ಅವುಗಳನ್ನು ತೆರವುಗೊಳಿಸುವುದು ಕಷ್ಟವಾಗುತ್ತದೆ ಎಂದ ಅವರು, ಹೀಗಾಗಿ ಅದಕ್ಕೆ ಅವಕಾಶವಾಗದಂತೆ ಮುನ್ಸಿಪಲ್ ಪ್ರಾಧಿಕಾರಗಳು ಮತ್ತು ದಂಡುಪ್ರದೇಶ ಅಧಿಕಾರಿಗಳ ನಡುವೆ ಹೆಚ್ಚಿನ ಸಮನ್ವಯ ಅತ್ಯಗತ್ಯವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News