ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-12-22 15:50 GMT

ಬೆಂಗಳೂರು, ಡಿ.22: ರಾಜ್ಯದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವಂತಹ ಎಲ್ಲ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಬಡಜನರು ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಅನುಕೂಲ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಶನಿವಾರ ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆರ್.ಕೆ. ಸಿಪಾನಿ ಬ್ಲಾಕ್ ಮತ್ತು ಧನರಾಜ್ ಡಾಗಾ ಬ್ಲಾಕ್ ಉದ್ಘಾಟಿಸಿ, ಬಿಇಎಲ್ ನೀಡಿರುವ ಮೊಬೈಲ್ ಕ್ಯಾನ್ಸರ್ ತಪಾಸಣಾ ವಾಹನ ಹಾಗೂ ಆಸ್ಪತ್ರೆಯ ಸೇವೆ ಸೇರಿದಂತೆ ಸಮಗ್ರ ಮಾಹಿತಿ ನೀಡುವ ನೂತನ ವೆಬ್‌ಸೈಟ್ ಮತ್ತು ತಂಬಾಕು ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತ ಸಾಕ್ಷ್ಯಚಿತ್ರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ ದೇಶಾದ್ಯಂತ ಹೆಸರು ಮಾಡಿರುವ ಜಯದೇವ ಹೃದ್ರೋಗ ಸಂಸ್ಥೆ, ನಿಮಾನ್ಸ್, ಕಿದ್ವಾಯಿ, ಸಂಜಯ್‌ಗಾಂಧಿ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ವಾಣಿ ವಿಲಾಸ, ವಿಕ್ಟೋರಿಯಾ, ಬೋರಿಂಗ್ ಆಸ್ಪತ್ರೆ ಸೇರಿದಂತೆ ಹಲವಾರು ಅತ್ಯುನ್ನತ ಆಸ್ಪತ್ರೆಗಳು ನಮ್ಮ ರಾಜ್ಯದಲ್ಲಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಕಾರ್ಪೊರೇಟ್ ಕಂಪನಿಗಳಿಂದ ಸುಮಾರು 750 ಕೋಟಿ ರೂ. ಹಣ ದಾನದ ರೂಪದಲ್ಲಿ ದೊರೆಯುವ ಅವಕಾಶವಿದೆ. ಆದರೆ ಅಂತಹ ಕಂಪನಿಗಳನ್ನು ಕರೆದು ಮಾತನಾಡುವ ಸೌಜನ್ಯವನ್ನು ಹಿಂದಿನ ಸರಕಾರಗಳು ತೋರಲಿಲ್ಲ ಎಂದು ಸಿಎಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News