ವಿದಾಯ ಹೇಳಿದ ಬೋನಸ್ ಕಾ ಬಾದ್‌ಶಹಾ

Update: 2018-12-22 18:27 GMT

ಬರಿಗಾಲಿನಲ್ಲಿ ಕಬಡ್ಡಿ ಆಡಲು ಆರಂಭಿಸಿದ ಅನೂಪ್ ಕುಮಾರ್, ಸತತ 15 ವರ್ಷಗಳ ಕಾಲ ಕಬಡ್ಡಿ ಅಂಗಣದಲ್ಲಿ ಮಿಂಚಿದರು. ಅರ್ಜುನ ಪ್ರಶಸ್ತಿ ಗೌರವಕ್ಕೂ ಪಾತ್ರರಾದರು. ಅನೂಪ್ ಕಬಡ್ಡಿ ಆಡಲು ಆರಂಭಿಸಿದಾಗಿನಿಂದ ದೇಶಕ್ಕಾಗಿ ಚಿನ್ನ ಗೆಲ್ಲಬೇಕೆಂಬ ಕನಸು ಕಂಡವರು. ಆ ಕನಸನ್ನು ನನಸು ಮಾಡಲು ಹಗಲಿರುಳು ಶ್ರಮಿಸಿದವರು. ಅದೇ ರೀತಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಚಿನ್ನ ಗೆದ್ದು ತಂದವರು. ಧೂಳಿನ ಅಂಗಣದಲ್ಲಿ ಕಂಡ ಆರಂಭ ಜಗಮಗಿಸುವ ನಿಯಾನ್ ಬೆಳಕು, ಸಂಗೀತದ ಹಿನ್ನೆಲೆ, ದೇಶದ ಸ್ಟಾರ್ ಆಟಗಾರರ ಸಮಾಗಮದಲ್ಲಿ ಕೊನೆಗೊಂಡಿತು. ಒಂದು ಗ್ರಾಮೀಣ ಕ್ರೀಡೆಯಲ್ಲಿ ಮಿಂಚಿ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಆಟಗಾರನಿಗೆ ಇದಕ್ಕಿಂತ ಗೌರವ ಇನ್ನೇನುಬೇಕು?.

ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇಂದು ಅಂತರ್‌ರಾಷ್ಟ್ರೀಯ ಕ್ರೀಡೆಯಾಗಿ ಬೆಳೆದು ನಿಂತಿದೆ. ಕಬಡ್ಡಿ ಆಡಿ, ಬರಿಗೈಯಲ್ಲಿ ಮನೆ ಸೇರುತ್ತಿದ್ದ ಆ ದಿನಗಳು ದೂರವಾಗಿವೆ. ಆಟಗಾರರು ಈಗ ಒಂದು ಲೀಗ್‌ನಲ್ಲಿ ಕೋಟ್ಯಂತರ ರೂ.ಗಳಿಸುತ್ತಿದ್ದಾರೆ. ಹೀಗೆ ಸಮಯ ಕಳೆಯಲು ಕಬಡ್ಡಿ ಆಡುತ್ತಿದ್ದ ಹುಡುಗನೊಬ್ಬ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಭಾರತ ತಂಡದ ನಾಯಕನಾಗಿ, ನಂತರ ವಿಶ್ವಕಪ್ ಗೆದ್ದು, ಪ್ರೊ ಕಬಡ್ಡಿ ಲೀಗ್ ಗೆದ್ದು, ಕಬಡ್ಡಿ ಆಟಗಾರರ ಪಾಲಿಗೆ ಕ್ಯಾಪ್ಟನ್ ಕೂಲ್ ಎನಿಸಿ, ಮಾದರಿ ಆಟಗಾರನಾಗಿ ನಿವೃತ್ತಿ ಹೊಂದಿದ ಬೋನಸ್ ಕಾ ಬಾದ್‌ಶಹಾ ಖ್ಯಾತಿಯ ಅನೂಪ್ ಕುಮಾರ್ ಈಗ ವಿದಾಯ ಹೇಳಿದ್ದಾರೆ. ಆದರೆ ಹಳ್ಳಿ ಹುಡುಗನೊಬ್ಬ ದೇಶದ ಭವಿಷ್ಯದ ಆಟಗಾರರಿಗೆ ಮಾದರಿ ಎನಿಸುವ ಹಲವಾರು ಮಾದರಿಯ ಹೆಜ್ಜೆಗಳನ್ನು ಕಬಡ್ಡಿ ಅಂಗಣದಲ್ಲಿ ಮೂಡಿಸಿದ್ದಾರೆ.
 ಹರ್ಯಾಣದ ಪಾಲ್ರಾ ಎಂಬಲ್ಲಿ ಮೊಲಗಳನ್ನು ಹಿಡಿಯುತ್ತ, ರಾತ್ರಿ ಕಾರುಗಳ ಬಲ್ಬ್‌ಗಳನ್ನು ಅಪಹರಿಸುತ್ತ ಕಾಲ ಕಳೆಯುತ್ತಿದ್ದ ತರಲೆ ಯುವಕ ಅನೂಪ್‌ಗೆ ಬದುಕು ನೀಡಿದ್ದ್ದು ಕಬಡ್ಡಿ. ಕಬಡ್ಡಿ ತನಗೆ ಪೊಲೀಸ್ ಹುದ್ದೆ, ಅರ್ಜುನ ಪ್ರಶಸ್ತಿ ತಂದುಕೊಡುತ್ತದೆ ಎಂದು ಅನೂಪ್ ಅಂಗಣಕ್ಕಿಳಿಯಲಿಲ್ಲ. ಬದಲಾಗಿ ಕಬಡ್ಡಿ ಅವರ ಪಾಲಿಗೆ ಖುಷಿ ಕೊಡುವ ಕ್ರೀಡೆಯಾಗಿತ್ತು. ಯುವಕರೊಂದಿಗೆ ತರಲೆ ಮಾಡುತ್ತ ಇದ್ದ ಅನೂಪ್‌ಗೆ ಗಂಭೀರ ಬದುಕು ನೀಡಿದ್ದು ಕಬಡ್ಡಿ. ಅವರನ್ನು ಅಂಗಣದಲ್ಲಿ ನೋಡುವಾಗ ಎಷ್ಟು ಗಂಭೀರ ಆಟಗಾರನೋ ಅಂಗಣದ ಹೊರಗೂ ಕೂಡ ಅವರು ಗಂಭೀರವಾಗಿರುತ್ತಾರೆ. ಎಲ್ಲಕ್ಕಿಂತ ಮಾದರಿ ಆಟಗಾರ. ಅವರ ಆಟದಲ್ಲಿ ಅಬ್ಬರ ಇಲ್ಲದಿದ್ದರೂ ಅಲ್ಲಿ ಅಂಕ ಗಳಿಸುವ ಜಾಣ್ಮೆ ಇದ್ದಿತ್ತು. ಅನೂಪ್ ಬೋನಸ್ ಇಲ್ಲದೆ ಹಿಂದಿರುಗಿದ ರೈಡ್‌ಗಳೇ ವಿರಳ. ಈ ಕಾರಣಕ್ಕಾಗಿ ‘ಬೋನಸ್ ಕಾ ಬಾದ್‌ಶಹಾ’ ಎಂದೇ ಖ್ಯಾತಿ ಪಡೆದರು. ಎರಡು ಬಾರಿ ಏಶ್ಯನ್ ಗೇಮ್ಸ್ ಚಿನ್ನ ಗೆದ್ದಾಗ ಅನೂಪ್ ಭಾರತ ತಂಡದ ನಾಯಕತ್ವ ವಹಿಸಿದ್ದರು.
ಎದುರಾಳಿಯ ಕೋರ್ಟ್‌ನಲ್ಲಿ ರೈಡಿಂಗ್ ಮಾಡುವಾಗ ಅನೂಪ್ ಅತ್ಯಮೂಲ್ಯ ಬೋನಸ್ ಅಂಕ ಹೇಗೆ ಗಳಿಸುತ್ತಾರೆಂದು ನೋಡುತ್ತಿರುವಾಗಲೇ ಅವರು ತೊಡೆ ತಟ್ಟಿ ಅಂಕ ಗಳಿಸಿರುವುದನ್ನು ಖಚಿತಪಡಿಸುತ್ತಿದ್ದರು.
ಈ ಯುವಕ ಸೋಲು ಬಯಸುವುದಿಲ್ಲ. 2016ರಲ್ಲಿ ಭಾರತ ತಂಡ ವಿಶ್ವಕಪ್ ಕಬಡ್ಡಿ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು. ಅನೂಪ್ ಕುಮಾರ್ ತಂಡದ ನಾಯಕತ್ವ ವಹಿಸಿದ್ದರು. ದಕ್ಷಿಣ ಕೊರಿಯಾ ವಿರುದ್ಧ ಭಾರತ ತಂಡ ಸೋತಿರುವುದು ನಾಯಕ ಅನೂಪ್‌ಗೆ ಸಾಕಷ್ಟು ಆಘಾತ ಉಂಟು ಮಾಡಿತ್ತು. ಭಾರತ ವಿಶ್ವಕಪ್ ಗೆದ್ದರೂ ಕೂಡ ಆ ನೋವು ಅವರನ್ನು ಕಾಡಿರುವುದು ಸ್ಪಷ್ಟವಾಗಿತ್ತು. ನಾಯಕನಾಗಿ ತಾನು ಜವಾಬ್ದಾರಿಯುತವಾಗಿ ಆಡಿಲ್ಲ ಎಂಬುದನ್ನು ಅವರು ಅಂದೂ ಹೇಳಿದ್ದರು, ನಿವೃತ್ತಿ ಘೋಷಿಸಿದ ನಂತರವೂ ನೆನಪಿಸಿಕೊಂಡಿದ್ದರು. ಅನೂಪ್ ಅವರ ಪ್ರಕಾರ ಆಡುವುದೇ ಗೆಲ್ಲುವುದಕ್ಕಾಗಿ. ಸೋಲು ಅನಿವಾರ್ಯವಾಗಿರುತ್ತದೆ, ಆದರೆ ಅನಿವಾರ್ಯವೇ ಉದ್ದೇಶ ಆಗಬಾರದು. ಒಲಿಂಪಿಕ್ಸ್‌ನ 100 ಮೀ. ಓಟದಲ್ಲಿ ಜಮೈಕಾದ ಓಟಗಾರ ಹುಸೈನ್ ಬೋಲ್ಟ್ ಅವರೇ ಚಿನ್ನ ಗೆಲ್ಲುತ್ತಾರೆಂಬುದು ಜಗತ್ತಿಗೇ ಗೊತ್ತಿದೆ, ಆದರೆ ಜಗತ್ತಿನ ಇತರ ಸ್ಪರ್ಧಿಗಳೂ ಓಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರ ಉದ್ದೇಶವೂ ಗೆಲ್ಲುವುದಾಗಬೇಕೇ ವಿನಃ ಅದು ಸೋಲಿನಲ್ಲಿ ಅಂತ್ಯಗೊಳ್ಳವುದಾಗಬಾರದು ಎಂಬುದು ಅನೂಪ್ ಅವರ ನಿಲುವು.
ಪ್ರೊ. ಕಬಡ್ಡಿ ಲೀಗ್‌ನಲ್ಲಿ ಯೂ ಮುಂಬಾ ತಂಡದ ಯಶಸ್ಸಿಗೆ ಅನೂಪ್ ಕುಮಾರ್ ಅವರೇ ಕಾರಣ. ಆದರೆ ಇತ್ತೀಚೆಗೆ ಅವರ ರೈಡಿಂಗ್‌ನಲ್ಲಿ ಬಲ ಇರಲಿಲ್ಲ. ಬೋನಸ್‌ಗಳು ಸಿಗುತ್ತಿರಲಿಲ್ಲ. ಸುಲಭವಾಗಿ ಎದುರಾಳಿ ತಂಡದ ಡಿಫೆನ್ಸ್ ವಿಭಾಗದಲ್ಲಿ ಸಿಲುಕಿಕೊಳ್ಳುತ್ತಿದ್ದರು. ಉತ್ತಮ ಆಟಗಾರರೆಂದು ಅಭಿಷೇಕ್ ಬಚ್ಚನ್ ತಮ್ಮ ತಂಡವಾದ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಈ ಬಾರಿಯ ಹರಾಜಿನಲ್ಲಿ ಸೇರಿಸಿಕೊಂಡರು. ಆದರೆ ಅನೂಪ್ ಅವರಿಗೆ ತಮ್ಮ ಹಿಂದಿನ ಸಾಮರ್ಥ್ಯವನ್ನು ತೋರಲಾಗಲಿಲ್ಲ. ಪರಿಣಾಮ ಅವರ ಮನಸ್ಸು ವಿಶ್ರಾಂತಿ ಬಯಸಲು ಹೇಳಿತು. ದೇಹವು ಕೂಡ ಇಂದಿನ ಯುವ ಆಟಗಾರರಿಗೆ ಸವಾಲೊಡ್ಡುವಲ್ಲಿ ವಿಫಲವಾಯಿತು. ಇದರಿಂದ ದೇಶ ಕಂಡ ಉತ್ತಮ ಕಬಡ್ಡಿ ಆಟಗಾರ ಅನೂಪ್ ಕುಮಾರ್ ವಿದಾಯ ಘೋಷಿಸಿದರು.


ಬರಿಗಾಲಿನಲ್ಲಿ ಕಬಡ್ಡಿ ಆಡಲು ಆರಂಭಿಸಿದ ಅನೂಪ್ ಕುಮಾರ್, ಸತತ 15 ವರ್ಷಗಳ ಕಾಲ ಕಬಡ್ಡಿ ಅಂಗಣದಲ್ಲಿ ಮಿಂಚಿದರು. ಅರ್ಜುನ ಪ್ರಶಸ್ತಿ ಗೌರವಕ್ಕೂ ಪಾತ್ರರಾದರು. ಅನೂಪ್ ಕಬಡ್ಡಿ ಆಡಲು ಆರಂಭಿಸಿದಾಗಿನಿಂದ ದೇಶಕ್ಕಾಗಿ ಚಿನ್ನ ಗೆಲ್ಲಬೇಕೆಂಬ ಕನಸು ಕಂಡವರು. ಆ ಕನಸನ್ನು ನನಸು ಮಾಡಲು ಹಗಲಿರುಳು ಶ್ರಮಿಸಿದವರು. ಅದೇ ರೀತಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಚಿನ್ನ ಗೆದ್ದು ತಂದವರು. ಧೂಳಿನ ಅಂಗಣದಲ್ಲಿ ಕಂಡ ಆರಂಭ ಜಗಮಗಿಸುವ ನಿಯಾನ್ ಬೆಳಕು, ಸಂಗೀತದ ಹಿನ್ನೆಲೆ, ದೇಶದ ಸ್ಟಾರ್ ಆಟಗಾರರ ಸಮಾಗಮದಲ್ಲಿ ಕೊನೆಗೊಂಡಿತು. ಒಂದು ಗ್ರಾಮೀಣ ಕ್ರೀಡೆಯಲ್ಲಿ ಮಿಂಚಿ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಆಟಗಾರನಿಗೆ ಇದಕ್ಕಿಂತ ಗೌರವ ಇನ್ನೇನುಬೇಕು?. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಅನೂಪ್ ತಾಯಿಗೋಸ್ಕರ ಮನೆಯಿಂದ ದೂರ ಸರಿದವರಲ್ಲ. ತನ್ನ ದುಡಿಮೆಯಿಂದ ತಾಯಿಯನ್ನು ಸಾಕುತ್ತ ಬಂದವರು. ಮನೆಯ ಕೆಲಸದಲ್ಲೂ ಅವರಿಗೆ ನೆರವಾಗುತ್ತಿದ್ದರು. ಕಬಡ್ಡಿ ತನಗೆ ಒಂದು ದಿನ ಆರ್ಥಿಕ ನೆರವನ್ನು ನೀಡುತ್ತದೆ ಎಂದು ಕನಸು ಕಂಡವರಲ್ಲ. ಆದರೆ ಅದೇ ಕಬಡ್ಡಿ ಅವರಿಗೆ ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿದ್ದು ನಿಜ. ಹವ್ಯಾಸಕ್ಕಾಗಿ ಹುಟ್ಟಿಕೊಂಡ ಕಬಡ್ಡಿ ಅನೂಪ್‌ಗೆ ಹಲವು ಪ್ರಖ್ಯಾತಿಯನ್ನೇ ತಂದುಕೊಟ್ಟಿತು.
ಅನೂಪ್ ಕ್ರೀಡಾ ಹಾಸ್ಟೆಲ್‌ನಲ್ಲಿದ್ದಾಗ ಇತರ ಅಥ್ಲೀಟ್‌ಗಳೊಂದಿಗೆ ಜಗಳವಾಡಿದ ಕಾರಣ ಹಾಸ್ಟೆಲ್‌ನಿಂದ ಹೊರ ನಡೆಯಬೇಕಾಯಿತು. ಆದರೆ 2001ರಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಅನೂಪ್ ಅಚ್ಚರಿ ಮೂಡಿಸಿದರು. ನಂತರ ಜೂನಿಯರ್ ವಿಭಾಗದ ಸ್ಪರ್ಧೆಗಳಲ್ಲಿ ಅವರು ಪಾಲ್ಗೊಳ್ಳುತ್ತಿರಲಿಲ್ಲ. ಇದರಿಂದಾಗಿ ರಾಷ್ಟ್ರೀಯ ತಂಡದಲ್ಲಿ ಅವರು ಮತ್ತೆ ಕಾಣಿಸಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 2004ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಅನೂಪ್ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಇದರಿಂದ ದೋಹ-ಖತರ್‌ನಲ್ಲಿ ನಡೆದ ಚಾಲೆಂಜ್ ಟ್ರೋಫಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರು. ಅಲ್ಲಿಂದ ಅನೂಪ್ ಮತ್ತೆ ಹಿಂದಿರುಗಿ ನೋಡಲಿಲ್ಲ.
ಇತ್ತೀಚಿನ ದಿನಗಳಲ್ಲಿ ನಡೆದ ಪಂದ್ಯದಲ್ಲಿ ಅನೂಪ್ ಕುಮಾರ್‌ಗೆ ಹೆಚ್ಚಿನ ಗೌರವ ಸಿಗುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಯುವ ಆಟಗಾರರು ಮಿಂಚುತ್ತಿದ್ದರು. ಅನೂಪ್ ಅವರ ರಣತಂತ್ರಗಳು ಪಿಂಕ್ ಪ್ಯಾಂಥರ್ಸ್ ತಂಡದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಪಂದ್ಯಗಳನ್ನು ನೋಡುತ್ತಿರುವ ಮಾಲಕ ಅಭಿಷೇಕ್ ಬಚ್ಚನ್ ಕೂಡ ಅನೂಪ್ ಆಟದ ಬಗ್ಗೆ ಕೆಲವೊಮ್ಮೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ಅವರು ಈ ವಿಷಯವನ್ನು ಅಲ್ಲಿಗೇ ಬಿಡುತ್ತಿದ್ದರು. ಯುವ ಆಟಗಾರರು ಕೂಡ ಅನೂಪ್ ಅವರ ನಿಲುವಿಗೆ ತಂಡದಲ್ಲಿ ಸಮ್ಮತಿ ನೀಡುತ್ತಿರಲಿಲ್ಲ. ಈ ಎಲ್ಲವನ್ನೂ ಗಮನಿಸಿದ ಅನೂಪ್ ನಿವೃತ್ತಿಯ ನಂತರ ಹೇಳಿದ ಒಂದು ಮಾತು ಅವರ ಮನಸ್ಸಿಗೆ ನೋವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ‘‘ಕಬಡ್ಡಿ ಅಂಗಣದಲ್ಲಿ ಹಿರಿಯರನ್ನು ಗೌರವಿಸಿ’’ ಎಂದಿದ್ದಾರೆ ಅವರು. ಅಂಗಣದಲ್ಲಿ ಸಾಮರ್ಥ್ಯ ಇರುವವರೆಗೂ ಆಡಬೇಕು. ನಮ್ಮಿಂದ ಅದು ಅಸಾಧ್ಯ ಎಂದಾಗ ನಿರ್ಗಮಿಸಬೇಕು. ಆ ಕೆಲಸವನ್ನು ಅನೂಪ್ ಒಬ್ಬ ಚಾಂಪಿಯನ್ ಆಟಗಾರನಾಗಿ ಮಾಡಿದ್ದಾರೆ. ಗ್ರಾಮೀಣ ಕ್ರೀಡೆಯೊಂದಕ್ಕೆ ಜೀವ ತುಂಬುವಲ್ಲಿ ಅವರ ಕೊಡುಗೆಯೂ ಅಪಾರವಾದುದು. ಅವರ ಅನುಭವ ಭಾರತದ ಕಬಡ್ಡಿಗೆ ಸಿಗುವಂತಾದರೆ ನಾವು ಅನೂಪ್ ಅವರಿಗೆ ಗೌರವ ನೀಡಿದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News