×
Ad

ಪತಿಯ ಹಂತಕಿಯಿಂದ ಲೈಫ್ ಅಡ್ವೈಸರ್ ಆಗುವವರೆಗೆ...

Update: 2018-12-23 17:03 IST

#ಅಪರಾಧಕ್ಕಾಗಿ ಒಂದು ದಿನವೂ ಜೈಲುವಾಸ ಅನುಭವಿಸದ ಮಹಿಳೆ

ಉಷಾರಾಣಿ ಐದು ವರ್ಷಗಳ ಹಿಂದೆ ತಮ್ಮ ಮಾಜಿ ಪತಿಯನ್ನು ಹತ್ಯೆ ಮಾಡಿದ್ದರು. ಆದರೆ 49 ವರ್ಷದ ಈಕೆ ಈಗ ಮಧುರೈ ಬ್ಯಾಂಕ್‍ನಲ್ಲಿ ಹೂಡಿಕೆ ಸಲಹಾಗಾರ್ತಿ!

ಇಸ್ತ್ರಿ ಮಾಡಿದ ಗರಿ ಗರಿ ಸೀರೆಯುಟ್ಟು ಕತ್ತಲ್ಲಿ ಗುರುತಿನ ಚೀಟಿ ತೂಗುಹಾಕಿಕೊಂಡು ಶಿಸ್ತಿನ ಸಿಪಾಯಿಯಂತೆ ಕಾರ್ಯ ನಿರ್ವಹಿಸುವ ಈಕೆಯನ್ನು ನೋಡಿದರೆ, ಮಗನ ಬ್ಯಾಟ್‍ನಿಂದ ಹೊಡೆದು ಮಾಜಿ ಪತಿಯನ್ನು ಕೊಂದ ನಾಲ್ಕು ಮಕ್ಕಳ ತಾಯಿ ಎಂಬ ಕಲ್ಪನೆಯೂ ನಿಮಗೆ ಬರಲು ಸಾಧ್ಯವಿಲ್ಲ.

ಆ ಘಟನೆ ನಡೆದದ್ದು 2012ರ ಫೆಬ್ರವರಿ 9ರಂದು. ಆದರೆ ಈ ಅಪರಾಧಕ್ಕಾಗಿ ಉಷಾ ಒಂದು ದಿನವೂ ಜೈಲುವಾಸ ಅನುಭವಿಸಲಿಲ್ಲ. ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ವೃತ್ತಿನಿರತ ಮಹಿಳೆ ಮೇಲೆ ಹತ್ಯೆ ಪ್ರಕರಣ ದಾಖಲಾಗಲಿಲ್ಲ. ಆದರೆ ಯಾವ ಪರಿಸ್ಥಿತಿಯಲ್ಲಿ ಈಕೆ ಈ ಅಪರಾಧ ಎಸಗಿದ್ದರು ಎಂಬ ಅಂಶ ಸಾರ್ವಜನಿಕ ದೃಷ್ಟಿಕೋನವನ್ನೇ ಬದಲಿಸಿತು.

ಬಲವಂತದ ಮದುವೆ

ದಶಕದಿಂದ ಉಷಾ ಪೋಷಕರಿಗೆ ಪರಿಚಿತವಾಗಿದ್ದ ಕುಟುಂಬಕ್ಕೆ ಈಕೆಯನ್ನು ವಿವಾಹ ಮಾಡಿಕೊಟ್ಟಾಗ ಈಕೆಗೆ ಇನ್ನೂ 18 ವರ್ಷ. "ನನ್ನ ಪತಿಯ ಕುಟುಂಬ ಪಕ್ಕದಲ್ಲೇ ವಾಸವಿತ್ತು. ಬ್ಯಾಂಕರ್ ಆಗಿದ್ದ ನನ್ನ ತಂದೆಯ ಬಳಿಗೆ ಹಣಕಾಸು ಸಲಹೆಗಾಗಿ ಬರುತ್ತಿದ್ದರು. ಆ ಕುಟುಂಬ ಸ್ವಂತ ನೆಲೆ ಕಂಡುಕೊಳ್ಳಲು ನನ್ನ ಪೋಷಕರು ನೆರವಾಗಿದ್ದರು" ಎಂದು ಉಷಾ ಹೇಳುತ್ತಾರೆ.

ಮಗಳು ಹಾಗೂ ಮಗನನ್ನು ಸಮಾನವಾಗಿ ಕಾಣುತ್ತಿದ್ದ ಕುಟುಂಬದಲ್ಲಿ ಹುಟ್ಟಿದ ಉಷಾ ಎಂದೂ ಪುರುಷ ಪ್ರಧಾನ ವ್ಯವಸ್ಥೆಯ ಬಲಿಪಶುವಾದ ನಿದರ್ಶನವಿಲ್ಲ. 12ನೇ ತರಗತಿವರೆಗೂ ಓದಿದ್ದ ಈಕೆ ತನ್ನ ತಮ್ಮಂದಿರ ಜತೆ ಕಬಡ್ಡಿ ಆಡಿ, ಸೈಕಲ್ ಸವಾರಿಯನ್ನೂ ಮಾಡುತ್ತಿದ್ದಳು. ಆದರೆ ವಿವಾಹದ ವಿಚಾರ ಬಂದಾಗ ದಿಢೀರನೇ ಆಕೆಯ ಮಾತಿಗೆ ಮನ್ನಣೆ ಇರಲಿಲ್ಲ.

"ಪತಿ ಜ್ಯೋತಿಬಸು ಓದಿದ್ದು ಕೇವಲ ಎಂಟನೇ ತರಗತಿವರೆಗೆ. ಬಳಿಕ ಶಾಲೆ ಬಿಟ್ಟು, ಹಿರಿಮಗನಾಗಿದ್ದರಿಂದ ಕುಟುಂಬದ ಜವಾಬ್ದಾರಿ ಹೊತ್ತರು" ಎಂದು ಪರಿಸ್ಥಿತಿ ಅರ್ಥಮಾಡಿಕೊಂಡ ಉಷಾ ಹೇಳುತ್ತಾರೆ. "ಅವರು ನನ್ನ ಬೆಳವಣಿಗೆ ನೋಡಿದ್ದರು ಹಾಗೂ ಬೆಳೆಸಿದ ಬಗೆಯನ್ನೂ ನೋಡಿದ್ದರು. ಆದ್ದರಿಂದ ಅವರು ನಾನು ಹೊಂದಿದ್ದ ಸ್ವಾತಂತ್ರ್ಯವನ್ನು ಮುಂದೆಯೂ ನೀಡುತ್ತಾರೆ ಎನ್ನುವುದು ನನ್ನ ನಿರೀಕ್ಷೆಯಾಗಿತ್ತು" ಎಂದು ವಿವರಿಸುತ್ತಾರೆ.

ಆದರೆ ಆಕೆಯ ಬಾವಂದಿರ ಲೆಕ್ಕಾಚಾರವೇ ಬೇರೆಯಾಗಿತ್ತು.

ಜ್ಯೋತಿಬಸು ತನ್ನ ಸ್ವಂತ ವಹಿವಾಟು ಆರಂಭಿಸಲು ನೆರವಾಗುವಂತೆ ಈಕೆಯ ಹೆಸರಿನಲ್ಲಿ ತಂದೆ ಸಾಲ ಪಡೆಯುವಂತೆ ಮಾಡಿದರು. ಹಪ್ಪಳ ಉತ್ಪಾದನಾ ಘಟಕ ಅರಂಭಿಸಿದರು. ಆದರೆ ಜ್ಯೋತಿಬಸು ಸದಾ ಕುಡುಕನಾಗಿದ್ದು, ವ್ಯವಹಾರದ ಬಗ್ಗೆ ಗಮನ ಹರಿಸಲೇ ಇಲ್ಲ. "ನಾನು ಮನೆ ಮತ್ತು ವ್ಯವಹಾರ ನಿರ್ವಹಿಸುತ್ತಿದ್ದೆ. ಆದರೆ ಕುಟುಂಬಕ್ಕೆ ಅದು ಸಾಕಾಗುತ್ತಿರಲಿಲ್ಲ. ಅವರ ಯೋಜನೆ ದೊಡ್ಡದಿತ್ತು" ಎನ್ನುತ್ತಾರೆ ಉಷಾ.

ಆಕೆಯ ಭಾವಂದಿರು ಎಂಟನೇ ತರಗತಿ ಓದಿದ ತಮ್ಮ ತಂಗಿಯನ್ನು ಉಷಾಳ ತಮ್ಮನಿಗೆ ವಿವಾಹ ಮಾಡಿಕೊಡಲು ಬಯಸಿದ್ದರು. "ನನ್ನ ದೊಡ್ಡ ತಮ್ಮ ಬ್ಯಾಂಕ್ ಉದ್ಯೋಗಿಯಾಗಿದ್ದ ಹಾಗೂ ಆಗಷ್ಟೇ ನಿಶ್ಚಿತಾರ್ಥವಾಗಿತ್ತು. ಎರಡನೆಯವ ಎಂಫಿಲ್ ಮಾಡುತ್ತಿದ್ದ. ಆದ್ದರಿಂದ ಇಬ್ಬರೂ ಈ ಪ್ರಸ್ತಾವ ನಿರಾಕರಿಸಿದರು" ಎಂದು ಉಷಾ ಹೇಳುತ್ತಾರೆ.

ಈ ನಿರಾಕರಣೆಯಷ್ಟೇ ಉಷಾಗೆ ಚಿತ್ರಹಿಂಸೆ ನೀಡಲು ಆ ಕುಟುಂಬಕ್ಕೆ ಸಾಕಾಯಿತು. ಆ ವೇಳೆಗಾಗಲೇ ಉಷಾ ನಾಲ್ಕು ಮಕ್ಕಳ ತಾಯಿಯಾಗಿದ್ದರು. "ನನ್ನ ಸಹೋದರರ ಮನಸ್ಸಿನಲ್ಲಿ ಬಾವಂದಿರ ವಿರುದ್ಧ ಭಾವನೆ ಮೂಡಿಸುತ್ತಿದ್ದೇನೆ ಎಂಬ ನಿರ್ಧಾರಕ್ಕೆ ಅವರು ಬಂದಿದ್ದರು. ಪ್ರತಿದಿನ ನನ್ನನ್ನು ನಿಂದಿಸಿ ಹೊಡೆಯುತ್ತಿದ್ದರು" ಎಂದು ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವ ವೇಳೆ ಆಕೆಯ ಧ್ವನಿ ಕಠಿಣವಾಯಿತು.

ಮಕ್ಕಳ ಶಿಕ್ಷಣ

ಉದ್ಯಮಶೀಲ ಮಹಿಳೆಯಾಗಿ ಏಕಾಂಗಿಯಾಗಿ ಉಷಾರಾಣಿ ಗೃಹ ಕೈಗಾರಿಕೆಯನ್ನು ನಿರ್ವಹಿಸುತ್ತಿದ್ದರೂ, ಈ ಯುವತಾಯಿಗೆ ಪ್ರತಿದಿನ ಕಿರುಕುಳ, ವರದಕ್ಷಿಣೆಗಾಗಿ ಆಗ್ರಹ ತಪ್ಪಲಿಲ್ಲ. "ಆದರೆ ನನ್ನ ದೊಡ್ಡ ಮಗಳಿಗೆ 14 ವರ್ಷವಾದಾಗ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು" ಎಂದು ನೆನಪಿಸಿಕೊಳ್ಳುತ್ತಾರೆ.

"ಈ ಹದಿಹರೆಯದ ಬಾಲಕಿ ಶಿಕ್ಷಣ ನಿಲ್ಲಿಸಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಬಂಧಿಕ ಹುಡುಗನ ಜತೆ ವಿವಾಹವಾಗಬೇಕು ಎನ್ನುವುದು ಭಾವಂದಿರ ಬಯಕೆಯಾಗಿತ್ತು. ಆಕೆ ಮತ್ತಷ್ಟು ಓದಿದರೆ ಈ ವಿವಾಹಕ್ಕೆ ಆಕೆ ನಿರಾಕರಿಸುತ್ತಾಳೆ ಎಂಬ ಭೀತಿ ಅವರದ್ದು. ಇದಕ್ಕೆ ನಾನು ಅವಕಾಶ ನೀಡಲಿಲ್ಲ. ಮಗಳಿಗೆ ಓದುವ ಬಯಕೆ ಇತ್ತು ಹಾಗೂ ಆಕೆಯ ಶಾಲೆಯ ಮುಖ್ಯ ಶಿಕ್ಷಕಿ ಜತೆ ಉದ್ದೇಶವನ್ನು ವಿವರಿಸಿದೆ. ಶಾಲೆಯಲ್ಲಿ ಈಕೆಯ ಶಿಕ್ಷಣ ಮುಂದುವರಿಸಲು ನೆರವಾಗುವುದಾಗಿ ಅವರು ಭರವಸೆ ನೀಡಿದರು" ಎಂದು ಉಷಾ ಹೇಳುತ್ತಾರೆ.

ಮಗಳ ನಿರ್ಧಾರದ ಬಗ್ಗೆ ತಿಳಿಸಿದಾಗ ಬಾವಂದಿರು ವ್ಯಗ್ರರಾದರು. "ನನ್ನ ಪತಿ ಹಾಗೂ ಬಾವಂದಿರು ಒಟ್ಟಾಗಿ ಮನೆಗೆ ಬಂದು ಹೊಡೆದರು. ನನ್ನ ಕಾಲು ಮುರಿದದ್ದರಿಂದ ನಾನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಕ್ತಸ್ರಾವದಿಂದ ಪ್ರಜ್ಞೆ ಕಳೆದುಕೊಂಡ ನನ್ನನ್ನು ಹಜಾರದಲ್ಲಿ ಅದೇ ಸ್ಥಿತಿಯಲ್ಲಿ ಬಿಟ್ಟುಹೋದರು" ಎಂದು ಹೇಳುವಾಗ ಧ್ವನಿ ಮೊದಲ ಬಾರಿಗೆ ಗದ್ಗದಿತವಾಯಿತು.

"ನನ್ನ ಎರಡು ವರ್ಷದ ಮಗ ಇದನ್ನು ನೋಡುತ್ತಿದ್ದ. ತಡೆಯಲು ಮುಂದಾಗ ಆತನನ್ನು ಗೋಡೆಯತ್ತ ಎಸೆದರು"

ಚೀರಾಟ ಕೇಳಿ ನೆರವಿಗೆ ಬಂದ ನೆರೆಯವರು ಹಜಾರದಲ್ಲಿ ತೆವಳುತ್ತಿದ್ದ ಈಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರು. ಪೊಲೀಸರು ಬಂದಾಗ ಏನು ನಡೆಯಿತು ಎನ್ನುವುದನ್ನು ಪುಟ್ಟ ಕಂದ ವಿವರಿಸಿದ. ಬಾವಂದಿರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಯಿತು.

ಹಣಕಾಸು ಸ್ವಾತಂತ್ರ್ಯ

2003ರಲ್ಲಿ ಈ ಘಟನೆ ನಡೆದ ಬಳಿಕ ಉಷಾ ತವರುಮನೆಗೆ ವಾಪಸ್ಸಾದರು ಹಾಗೂ ಇಡೀ ಕುಟುಂಬ ಅವರ ನಿರ್ಧಾರವನ್ನು ಬೆಂಬಲಿಸಿತು. "ನಾನು ಸುಶಿಕ್ಷಿತೆ. ನನ್ನ ಆದಾಯವನ್ನು ಗಳಿಸಿಕೊಳ್ಳುವ ಸಾಮರ್ಥ್ಯವಿದೆ ಎಂದು ಸಹೋದರರು ನೆನಪಿಸಿದರು. ಆ ಭಯಾನಕ ನರಕಕ್ಕೆ ಮತ್ತೆ ಹೋಗದಂತೆ ಸಲಹೆ ಮಾಡಿದರು. ಆಗ ನಾನು ಆರ್ಥಿಕ ಸ್ವಾತಂತ್ರ್ಯ ಗಳಿಸಿಕೊಳ್ಳಬೇಕಿತ್ತು"

ವಿಚ್ಛೇದನ ಅರ್ಜಿ ಸಲ್ಲಿಸಲು ಮತ್ತು ವರದಕ್ಷಿಣೆಯಾಗಿ ನೀಡಿದ್ದ ಹಣ ಮತ್ತು ಆಭರಣವನ್ನು ಕುಟುಂಬ ಮರಳಿಸಬೇಕು ಎಂಬ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಬಾವಂದಿರು "ಈಕೆ ನಮ್ಮ ವ್ಯವಹಾರದ ಹಣವನ್ನು ನುಂಗಿಹಾಕಿದ್ದಾಳೆ ಹಾಗೂ ಈಕೆಯ ನಡತೆಯೂ ಸರಿ ಇಲ್ಲ" ಎಂಬ ವಾದ ಮುಂದಿಟ್ಟರು.

ಇದರಿಂದ ಅಧೀರರಾದ ಉಷಾ ಮಧುರೈ ಸರ್ಕಾರಿ ಆಸ್ಪತ್ರೆಯ ಕ್ಯಾಶ್ ಕೌಂಟರ್‍ನಲ್ಲಿ ಉದ್ಯೋಗಕ್ಕೆ ಸೇರಿದರು. ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಕ್ಷಿಪ್ರವಾಗಿ ಕಲಿತುಕೊಂಡರು. ಬಳಿಕ ತಮಿಳುನಾಡು ಮುಕ್ತ ವಿವಿಯಲ್ಲಿ 2007ರಲ್ಲಿ ಅಡ್ಮಿನಿಸ್ಟ್ರೇಟರ್ ಹುದ್ದೆ ಗಳಿಸಿದರು. ಇವರ ಕಠಿಣ ಪರಿಶ್ರಮ ಹಾಗೂ ಯಶಸ್ಸು ಗಳಿಸಬೇಕು ಎಂಬ ಹುಮ್ಮಸ್ಸು ವಿವಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಮನಃಶಾಸ್ತ್ರ ಕಲಿಯಲು ಪ್ರೇರಣೆಯಾಯಿತು.

"ಶುಲ್ಕವನ್ನು ನನ್ನ ವೇತನದಿಂದ ಕಂತಿನಲ್ಲಿ ಪಡೆಯಲಾಗುತ್ತಿತ್ತು. ಕೆಲಸ ಮಾಡುವುದು, ಮಕ್ಕಳ ಕಾಳಜಿ ವಹಿಸುವುದು ಮತ್ತು ಅಧ್ಯಯನ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು" ಎಂದು ನೆನಪಿಸಿಕೊಳ್ಳುತ್ತಾರೆ.

ಹಲ್ಲೆಯ ಕಾರಣದಿಂದ ಕಾಲು ಮುರಿದಿದ್ದ ಉಷಾ ಫಿಸಿಯೊಥೆರಪಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆಕೆಗೆ ನಡೆಯುವುದು ಕಷ್ಟವಾದರೂ, ನಡೆಯುವ ಅಭ್ಯಾಸ ಬಿಡಲಿಲ್ಲ. ಆರಂಭದಲ್ಲಿ ಊರುಗೋಲು ಬಳಸುತ್ತಿದ್ದ ಅವರು ಕ್ರಮೇಣ ಬಾಹ್ಯ ಬೆಂಬಲ ಇಲ್ಲದೇ ನಡೆಯಲು ಆರಂಭಿಸಿದರು.

ಆ ವೇಳೆಗೆ ಅಧಿಕೃತವಾಗಿ ವಿಚ್ಛೇದನ ಸಿಕ್ಕಿತು ಹಾಗೂ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಉಷಾ ಮುಂದಾದರು. ಹಿರಿಯ ಪುತ್ರಿ ನಗರದಿಂದ ಹೊರಗೆ ವ್ಯಾಸಂಗ ಮಾಡುತ್ತಿದ್ದರೆ, ಇಬ್ಬರು ಕಿರಿಯ ಹೆಣ್ಣುಮಕ್ಕಳು ಜತೆಗಿದ್ದರು. ಮಗ 10ನೇ ತರಗತಿಯಲ್ಲಿ ಓದುತ್ತಿದ್ದ.

"ನಾನು ಆಗ ಸಂತೋಷವಾಗಿದ್ದೆ. ನನ್ನ ಮಗ ಒಳ್ಳೆಯ ಬದುಕಿಗೆ ನಿದರ್ಶನವಾಗಬೇಖು ಎಂಬ ಬಯಕೆ ನನ್ನದಾಗಿತ್ತು. ಆ ಕಾರಣದಿಂದ ನಾನು ಪತಿಯನ್ನು ಬಿಟ್ಟುಬಂದಿದ್ದೆ"

ಕಥೆ ಇಷ್ಟಕ್ಕೆ ಮುಗಿಯಲಿಲ್ಲ...

ಆದರೆ ಕಾನೂನಾತ್ಮಕವಾಗಿ ಉಷಾ ಜ್ಯೋತಿಬಸುವನ್ನು ತೊರೆದರೂ, ಆಕೆಯ ಬದುಕಿನಲ್ಲಿ ಆತ ಇನ್ನೂ ಇದ್ದ. ಉಷಾ ತೊರೆದ ಬಳಿಕ ಆತನ ಪೋಷಕರು ಕಾನೂನು ಹೋರಾಟ ಎದುರಿಸುತ್ತಿದ್ದು, ವ್ಯಾಪಾರ ಕುಸಿಯಿತು. ಉಷಾ ಕೆಲಸ ಮಾಡುವಲ್ಲೆಲ್ಲ ಹಿಂಬಾಲಿಸಿ ರಂಪಾಟ ನಡೆಸುತ್ತಿದ್ದ. "ನಾನು ಕೆಲಸ ಮಾಡುತ್ತಿದ್ದ ವಿಶ್ವವಿದ್ಯಾನಿಲಯದಲ್ಲಿ ಮೇಲಧಿಕಾರಿಯೊಂದಿಗೆ ನನಗೆ ಅಕ್ರಮ ಸಂಬಂಧವಿದೆ ಎಂದು ಆತ ಎಲ್ಲರ ಬಳಿಯೂ ಹೇಳುತ್ತಿದ್ದ. ನಾನು ನೆಮ್ಮದಿಯಿಂದ ಇರಲು ಬಿಡಲೇ ಇಲ್ಲ. ನನ್ನ ಮಕ್ಕಳನ್ನು ಅತನಿಂದ ರಕ್ಷಿಸುವ ಸಲುವಾಗಿ ನಾಲ್ಕು ಮನೆ ಬದಲಿಸಿದೆ" ಎಂದು ಉಷಾ ಹೇಳುತ್ತಾರೆ.

2010ರಲ್ಲಿ ಜ್ಯೋತಿಬಸು ಮನೆಗೆ ಬಂದು ಉಷಾಳ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸುವಂತೆ ಹಾಗೂ ಕುಟುಂಬದ ಜತೆ ವಾಸ ಮಾಡಲು ಅವಕಾಶ ನೀಡುವಂತೆ ಗೋಗರೆದಾಗ ಇಡೀ ಕುಟುಂಬಕ್ಕೆ ನಿಜಕ್ಕೂ ಆಘಾತವಾಯಿತು. ತೀರಾ ಅಸ್ವಸ್ಥನಾಗಿದ್ದ ಹಾಗೂ ನೆರವು ಇಲ್ಲದಿದ್ದರೆ ಆತ ಉಳಿಯುವ ಸ್ಥಿತಿಯಲ್ಲಿರಲಿಲ್ಲ.

"ಆತನಿಗೆ ಒಂದು ಅವಕಾಶ ನೀಡುವಂತೆ ಮಕ್ಕಳು ಸಲಹೆ ಮಾಡಿದರು. ಆದರೆ ಇದರ ಹಿಂದೆ ಪಿತೂರಿ ಇದೆ ಎನ್ನುವುದನ್ನು ನಾನು ನೆನಪಿಸಿದೆ. ಆದರೆ ಮಕ್ಕಳು ಒತ್ತಾಯಿಸಿದಾಗ ಮಕ್ಕಳ ತಂದೆಯಾಗಿ ವಾಸವಿರಲು ಅವಕಾಶ ಕೊಟ್ಟೆ. ಆದರೆ ಮತ್ತೆ ನನ್ನ ಪತಿಯಾಗಿ ಅಲ್ಲ"

ಕೆಲವೇ ಸಮಯದಲ್ಲಿ ಉಷಾಳ ಅನುಮಾನ ನಿಜವಾಯಿತು.

"ಆತನ ಪೋಷಕರ ವಿರುದ್ಧದ ಪ್ರಕರಣ ವಾಪಾಸು ಪಡೆಯುವ ಪತ್ರಕ್ಕೆ ಸಹಿ ಮಾಡುವಂತೆ ಬಲವಂತ ಮಾಡಲಾರಂಭಿಸಿದ. ಆತನ ಉದ್ದೇಶ ಮಕ್ಕಳಿಗೆ ಮನವರಿಕೆಯಾದಾಗ, ಎಲ್ಲ ಆಭರಣಗಳನ್ನು ಮತ್ತು ಹಣ ಮರಳಿಸಿದರೆ ಪತ್ರಕ್ಕೆ ಸಹಿ ಮಾಡುವುದಾಗಿ ಸ್ಪಷ್ಟಪಡಿಸಿದಳು"

ಆದರೆ ಜ್ಯೋತಿಬಸು ಹತ್ಯೆಗೆ ಈ ವಿಶ್ವಾಸದ್ರೋಹ ಕಾರಣವಾಗಲಿಲ್ಲ.

ಐದಡಿ ಎತ್ತರದ ಕೃಶವಾಗಿದ್ದ ಉಷಾ ತಾನು ವಿವಾಹವಾಗಿ ವಿಚ್ಛೇದನ ನೀಡಿದ್ದ ಈ ವ್ಯಕ್ತಿಯಿಂದ ಇಂಥ ನಡವಳಿಕೆ ನಿರೀಕ್ಷಿಸಿದ್ದರು.

"ಮಗಳು ಹೀಗೆ ಹೇಳಿದ ಬಳಿಕ, ಮನೆ ಬಿಡುವಂತೆ ಹಾಗೂ ಮತ್ತೆಂದೂ ಮನೆಗೆ ಬರದಂತೆ ಸೂಚಿಸಿದೆವು. ಆದರೆ ಮರುದಿನವೇ ಆ ದಾಖಲೆಪತ್ರಗಳೊಂದಿಗೆ ಆತ ಮನೆಗೆ ಬಂದ ಹಾಗೂ ಪಾನಮತ್ತನಾಗಿದ್ದ. ತೀರಾ ಹೊಟ್ಟೆ ಹಸಿದಿದೆ ಎಂದು ಹೇಳಿದ. ಆತನ ಬಗ್ಗೆ ಕನಿಕರದಿಂದ ಊಟ ಸಿದ್ಧಪಡಿಸಲು ಮುಂದಾದೆ. ಆಗ ತನಗೆ ಇರುವುದು ಅಂಥ ಹಸಿವಲ್ಲ ಎಂದು ನನ್ನ ಸೀರೆ ಎಳೆಯಲು ಮುಂದಾದ"

ಪತಿಯನ್ನು ತೊರೆದ ಬಳಿಕ ಮೊದಲ ಬಾರಿಗೆ ಉಷಾ ಮನಸ್ಸಿನಲ್ಲಿ ಭೀತಿ ಆವರಿಸಿತು. ಮನೆಗೆ ಬಂದ ತಂದೆಯ ಅಸ್ವಸ್ಥತೆಯ ಕಾರಣ ಆಕೆಗೆ ಗೊತ್ತಿದ್ದರೂ ಮಕ್ಕಳಿಗೆ ಅದನ್ನು ಹೇಳಿರಲಿಲ್ಲ. ವೈದ್ಯರ ಬಳಿ ಕೆಲ ತಿಂಗಳ ಹಿಂದೆ ಕರೆದೊಯ್ದಾಗ ಆತನಿಗೆ ಏಡ್ಸ್ ಇರುವುದು ಗೊತ್ತಾಗಿತ್ತು.

"ನಮ್ಮ ವಿವಾಹವಾದಾಗಲೂ ಬೇರೆ ಮಹಿಳೆಯರ ಜತೆ ಆತನಿಗೆ ಸಂಬಂಧವಿದ್ದಿರಬಹುದು. ಇಷ್ಟಾಗಿಯೂ ಆತ ಕೆಲ ತಿಂಗಳ ಹಿಂದೆ ನಮ್ಮ ಜತೆಗಿದ್ದಾಗ ಆತನ ಕಾಳಜಿ ವಹಿಸಿ, ಆತನ ಗಾಯಕ್ಕೆ ಮುಲಾಮು ಹಚ್ಚಿದ್ದೆ" ಎಂದು ನಡುಗುವ ಧ್ವನಿಯಲ್ಲಿ ಹೇಳಿದರು.

ತಾಯಿಯನ್ನು ಈ ಸ್ಥಿತಿಯಲ್ಲಿ ಕಂಡ ಎರಡನೇ ಮಗಳು ತಂದೆಯನ್ನು ಹೊರಕ್ಕೆ ಎಳೆಯಲು ಮುಂದಾದಳು. "ತಾಯಿ ಬಾರದಿದ್ದರೆ ಬೇಡ; ನೀನು ಬಾ ಎಂದು ಮಗಳನ್ನು ಕೊಠಡಿಗೆ ಕರೆದೊಯ್ದು ಕಿರುಕುಳ ನೀಡಲು ಮುಂದಾದ" ಎಂದು ಉಷಾ ಹೇಳುತ್ತಾರೆ.

"ಮಗಳ ಚೀರಾಟ ಕೇಳುತ್ತಿತ್ತು. ಆ ಬಳಿಕ ಏನಾಯಿತು ಎಂದು ಗೊತ್ತಿಲ್ಲ. ತಕ್ಷಣ ಮಗನ ಬ್ಯಾಟ್ ತೆಗೆದುಕೊಂಡು ಕೊಠಡಿಯ ಕಿಟಕಿ ಮುರಿದು ಒಳಕ್ಕೆ ನುಗ್ಗಿ, ಮಗಳ ದುಪ್ಪಟ ಬಿಡುವವರೆಗೂ ಆತನಿಗೆ ಹೊಡೆದೆ. ಆತನ ಚಲನೆ ನಿಲ್ಲುವವರೆಗೂ ಹೊಡೆದೆ"

ಉಷಾ ಠಾಣೆಗೆ ಧಾವಿಸಿದಾಗ ಪರಿಸ್ಥಿತಿ ಪೊಲೀಸರಿಗೂ ಅರ್ಥವಾಗಿತ್ತು. ಹತ್ಯೆ ಪ್ರಕರಣ ದಾಖಲಿಸುವ ಬದಲು ಭಾರತೀಯ ದಂಡಸಂಹಿತೆಯ ಸೆಕ್ಷನ್ 100ರ ಅನ್ವಯ ಪ್ರಕರಣ ದಾಖಲಿಸಿದರು. ಪ್ರಕರಣದ ತನಿಖೆ ನಡೆಸಿದ ಅಧಿಕಾರಿಯೊಬ್ಬರು ಹೇಳಿದಂತೆ ತಮಿಳುನಾಡಿನಲ್ಲಿ ಈ ಸೆಕ್ಷನ್ ಅಡಿ ದಾಖಲಿಸಿದ ಮೊಟ್ಟಮೊದಲ ಪ್ರಕರಣ ಅದು!

ಈ ಸೆಕ್ಷನ್ ಅನ್ವಯ ತನ್ನ ರಕ್ಷಣೆಯ ಪ್ರಕ್ರಿಯೆಯಲ್ಲಿ (ಅತ್ಯಾಚಾರ ಅಥವಾ ಹತ್ಯೆಯ ಪ್ರಯತ್ನ ತಡೆಯುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ) ಎದುರಿನ ವ್ಯಕ್ತಿಯ ಸಾವು ಸಂಭವಿಸಿದಾಗ, ಇದನ್ನು ಹತ್ಯೆಯೆಂದು ಪರಿಗಣಿಸುವಂತಿಲ್ಲ. ಉಷಾ ಹಾಗೂ ಅವರ ಮಕ್ಕಳು ಒಂದು ಬಾರಿ ಮಾತ್ರ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಬೇಕಿತ್ತು.

"ಆದರೆ ನಾನೆಂದೂ ನ್ಯಾಯಾಲಯಕ್ಕೆ ಹೋಗಲಿಲ್ಲ. ನನಗೆ ಹೊಸ ಜೀವನ ಸಿಕ್ಕಿತು. ದೇವರು ನನ್ನೊಂದಿಗೆ ಇದ್ದಾನೆ ಎನ್ನುವುದು ನನಗೆ ಗೊತ್ತಿತ್ತು"

ಈ ಘಟನೆ ಬಳಿಕ ಉಷಾ ಹಿಂದಿರುಗಿ ನೋಡಲೇ ಇಲ್ಲ

"ನಾನು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲ ಕಾಲ ವಿಶ್ವವಿದ್ಯಾನಿಲಯದಲ್ಲೇ ಕೆಲಸ ಮಾಡಿದೆ. ಬಳಿಕ ಈ ವರ್ಷ ಬ್ಯಾಂಕ್ ಪರೀಕ್ಷೆ ತೆಗೆದುಕೊಂಡೆ. ಆರಂಭದಲ್ಲಿ ನನಗೆ ಸ್ವಲ್ಪ ಹೆದರಿಕೆ ಇತ್ತು. ಆದರೆ ಬ್ಯಾಂಕ್ ಪರೀಕ್ಷೆಗೆ ತರಬೇತಿ ಪಡೆದಿದ್ದರಿಂದ ಉತ್ತೀರ್ಣಳಾಗುವುದು ಕಷ್ಟವಾಗಲಿಲ್ಲ" ಎಂದು ವಿವರಿಸುತ್ತಾರೆ. ಈಗ ಬ್ಯಾಂಕ್‍ನಲ್ಲಿ "ಲೈಫ್ ಅಡ್ವೈಸರ್" ಆಗಿ ನೇಮಕಗೊಂಡಿದ್ದಾರೆ.

ಏಕಾಂಗಿಯಾಗಿ ನಾಲ್ಕು ಮಕ್ಕಳನ್ನು ಯಶಸ್ವಿಯಾಗಿ ಬೆಳೆಸಿರುವ ಉಷಾ, ತಮ್ಮ ಹೂಡಿಕೆಯ ಅಗತ್ಯವಿರುವ ವ್ಯಕ್ತಿಗಳಿಗೆ ಹಣಕಾಸು ಸಲಹೆ ನೀಡುತ್ತಾರೆ. ಜನ ವಿಮಾ ಪಾಲಿಸಿ ಆಯ್ಕೆ ಮಾಡಿಕೊಳ್ಳಲು, ಜಾಣ ಹೂಡಿಕೆಗೆ ಹಾಗೂ ಬ್ಯಾಂಕಿನ ಜತೆ ಒಳ್ಳೆಯ ಸಂಬಂಧ ಉಳಿಸಿಕೊಳ್ಳಲು ಸಲಹೆ ಮಾಡುವ ಕೆಲಸ ಇವರದ್ದು.

"ನಾವು ಮಾಡಬಹುದಾದ ದೊಡ್ಡ ಸಹಾಯವೆಂದರೆ, ಹಣಕ್ಕಾಗಿ ನೀವು ಇತರರನ್ನು ಅವಲಂಬಿಸಬೇಕಾಗಿಲ್ಲ ಎಂದು ಮನವರಿಕೆ ಮಾಡಿಕೊಡುವುದು. ನಾನು ಜೀವನದಲ್ಲಿ ಈ ಕಷ್ಟಕರ ಹಂತ ದಾಟಿ ಬಂದಿದ್ದೇನೆ ಎಂದರೆ, ಹಣಕಾಸು ಸ್ವಾತಂತ್ರ್ಯ ಹಾಗೂ ದೇವರ ದಯೆಯಿಂದ" ಎಂದು ಉಷಾ ದೃಢವಾಗಿ ಹೇಳುತ್ತಾರೆ.

"ನನ್ನ ಮಕ್ಕಳಿಗೆ 18 ತುಂಬಿದಾಗ, ಅವರೆಲ್ಲರ ಹೆಸರಿನಲ್ಲೂ ನಾನು ಬ್ಯಾಂಕ್ ಖಾತೆ ತೆರೆದು ಅವರಿಗೆ ಪಾಸ್ ಪುಸ್ತಕ ಕೊಟ್ಟಿದ್ದೇನೆ. ಜೀವನದಲ್ಲಿ ಆರಂಭಿಕ ಹಂತದಲ್ಲೇ ಉಳಿಸಲು ಮತ್ತು ಹೂಡಿಕೆ ಮಾಡಲು ಕಲಿತಾಗ ಜೀವನ ಸರಳವಾಗುತ್ತದೆ"

ಪ್ರತಿದಿನ ಕಿರುಕುಳಕ್ಕೆ ಒಳಗಾಗುವ ಅಸಂಖ್ಯಾತ ಭಾರತೀಯ ಮಹಿಳೆಯರ ಬಗ್ಗೆ ಕೇಳಿದಾಗ, ತಿರುಕ್ಕುರಳ್‍ ನ ವಾಕ್ಯವನ್ನು ಉದ್ಧರಿಸುತ್ತಾರೆ: "ಪ್ರವಾಹ ಏರಿದಾಗ ಕಮಲದ ಹೂವಿನ ದಂಡು ಸುರುಳಿ ಬಿಚ್ಚುತ್ತದೆ. ವ್ಯಕ್ತಿಯ ಘನತೆಯನ್ನು ಆತನ ಮನಸ್ಸಿನಿಂದ ಅಳೆಯಬಹುದು" ಎಂಬ ಅರ್ಥ.

"ನೀರು ಹೂವಿನ ಎಲ್ಲ ದಂಟುಗಳು ನೀರಿನ ಆಳಕ್ಕೆ ಅನುಗುಣವಾಗಿರುತ್ತವೆ. ಅಂತೆಯೇ ಜನರ ಶ್ರೇಷ್ಠತೆ ಅವರ ಮನಸ್ಸಿಗೆ ಅನುಗುಣವಾಗಿರುತ್ತದೆ" ಎಂದು ಉಷಾ ವಿವರಿಸುತ್ತಾರೆ. "ನಮ್ಮನ್ನು ತಳ್ಳುವ ಪ್ರಯತ್ನಕ್ಕೆ ವಿರುದ್ಧವಾಗಿ ಬೆಳೆಯುವ ಮೂಲಕ ನಾವು ನಮಗೆ ನೆರವಾಗಬಹುದು" ಎನ್ನುವುದು ಅವರ ಸ್ಪಷ್ಟ ಅಭಿಮತ.

Similar News