2,000 ವರ್ಷ ಹಿಂದಿನ 99 ಗೋರಿಗಳು ಪತ್ತೆ
ಹೊಹ್ಹಟ್ (ಮಂಗೋಲಿಯ), ಡಿ. 23: ಉತ್ತರ ಚೀನಾದ ‘ಒಳ ಮಂಗೋಲಿಯ ಸ್ವಾಯತ್ತ ವಲಯ’ದಲ್ಲಿ 2,000 ವರ್ಷಗಳಿಗೂ ಹಿಂದಿನ 99 ಪ್ರಾಚೀನ ಗೋರಿಗಳ ಸಮೂಹವನ್ನು ಪತ್ತೆಹಚ್ಚಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ಸಾಂಸ್ಕೃತಿಕ ಅವಶೇಷಗಳು ಮತ್ತು ಪುರಾತತ್ವ ಶಾಸ್ತ್ರ ಇಲಾಖೆಯ ತಂಡವೊಂದು ಜುಂಗರ್ ಬನ್ನೆರ್ ಎಂಬಲ್ಲಿ ಈ ಗೋರಿಗಳ ಸಂಕೀರ್ಣವನ್ನು ಪತ್ತೆಹಚ್ಚಿದೆ. ಇಲ್ಲಿ 99 ಗೋರಿಗಳು ಮತ್ತು ಒಂದು ಬಲಿಪೀಠ ಇದೆ. ಅವುಗಳು ‘ರಾಜ್ಯಗಳು ಪರಸ್ಪರ ಯುದ್ಧ ಮಾಡುತ್ತಿದ್ದ ಕಾಲ’ (ವಾರಿಂಗ್ ಸ್ಟೇಟ್ಸ್ ಪೀರಿಯಡ್- ಕ್ರಿಸ್ತ ಪೂರ್ವ 475-221)ದ ಕೊನೆಯ ಭಾಗ ಮತ್ತು ಪಶ್ಚಿಮದ ಹಾನ್ ರಾಜ ಮನೆತನ (ಕ್ರಿಸ್ತಪೂರ್ವ 202- ಕ್ರಿಸ್ತಶಕ 80)ದ ಆರಂಭಿಕ ಅವಧಿಯ ನಡುವಿನ ಕಾಲಘಟ್ಟಕ್ಕೆ ಸೇರಿದ್ದೆಂದು ಭಾವಿಸಲಾಗಿದೆ.
ಇಲ್ಲಿನ ಹೆಚ್ಚಿನ ಗೋರಿಗಳಲ್ಲಿ ದೇಹಗಳನ್ನು ಶವಪೆಟ್ಟಿಗೆಯಲ್ಲಿ ಇಡಲಾಗಿಲ್ಲ. ಗೋರಿಗಳು ವಿವಿಧ ಗಾತ್ರಗಳಲ್ಲಿವೆ. ಅವುಗಳ ಪೈಕಿ ಅತ್ಯಂತ ದೊಡ್ಡದು ಸುಮಾರು 5 ಮೀಟರ್ ಉದ್ದ, 3 ಮೀಟರ್ ಅಗಲ ಮತ್ತು 3 ಮೀಟರ್ ಎತ್ತರವಿದೆ. ಅತ್ಯಂತ ಚಿಕ್ಕದು ಬಹುತೇಕ ಮಾನವ ದೇಹದಷ್ಟೇ ದೊಡ್ಡದಿದೆ. ಸುಮಾರು ಮೂರನೇ ಒಂದು ಭಾಗದಷ್ಟು ಗೋರಿಗಳಲ್ಲಿ ಪ್ರಾಣಿಗಳನ್ನು ಬಲಿಕೊಟ್ಟ ಗುರುತುಗಳಿವೆ. ಅಲ್ಲಿ ಆಡುಗಳು, ದನಕರುಗಳು ಮತ್ತು ನಾಯಿಗಳ ಅಸ್ಥಿಪಂಜರಗಳು ಪತ್ತೆಯಾಗಿವೆ.
ವಾರಿಂಗ್ ಸ್ಟೇಟ್ಸ್ ಅವಧಿಯಲ್ಲಿ ಚೀನಾದ ಮಹಾಗೋಡೆಯುದ್ದಕ್ಕೂ ವಾಸಿಸುತ್ತಿದ್ದ ನಿವಾಸಿಗಳು ಮೃತರನ್ನು ಹೂಳುವಾಗ ಪ್ರಾಣಿಗಳನ್ನು ಸಾಮಾನ್ಯವಾಗಿ ಬಲಿಕೊಡುತ್ತಿದ್ದರು.
ಪ್ರಾಚೀನ ಪಾತ್ರೆಗಳೂ ಪತ್ತೆ
ವಾರಿಂಗ್ ಸ್ಟೇಟ್ಸ್ ಅವಧಿಯ ಅಡುಗೆ ಪಾತ್ರೆಗಳೂ ಈ ಗೋರಿಗಳಲ್ಲಿ ಪತ್ತೆಯಾಗಿವೆ. ಮಣ್ಣಿನ ಕೆಟಲ್ (ಹೂಜಿ)ಗಳು ಅವುಗಳಲ್ಲಿ ಮುಖ್ಯವಾದವು.
ಪಶ್ಚಿಮ ಹಾನ್ ರಾಜ ಮನೆತನದ ಕಂಚಿನ 10 ಸರಕಾರಿ ಮುದ್ರೆಗಳೂ ಇಲ್ಲಿ ಸಿಕ್ಕಿವೆ.
‘‘ಇದು ಪಶ್ಚಿಮ ಹಾನ್ ರಾಜ ಮನೆತನದ ಆರಂಭಿಕ ಅವಧಿಯಲ್ಲಿ, ಗೋರಿಗಳು ಇರುವ ಸ್ಥಳವು ಕೇಂದ್ರ ಸರಕಾರದ ನಿಯಂತ್ರಣದಲ್ಲಿತ್ತು ಎಂಬುದನ್ನು ತೋರಿಸುತ್ತದೆ’’ ಎಂದು ಪುರಾತತ್ವ ತಂಡದ ಮುಖ್ಯಸ್ಥ ಹು ಚುನ್‌ಬೈ ಹೇಳುತ್ತಾರೆ.