ಅಮೆರಿಕ ಸರಕಾರ ಬಂದ್ ಕ್ರಿಸ್ಮಸ್ ರಜೆಯಲ್ಲೂ ಮುಂದುವರಿಕೆ

Update: 2018-12-23 17:43 GMT

ವಾಶಿಂಗ್ಟನ್, ಡಿ. 23: ಮೆಕ್ಸಿಕೊ ಗಡಿ ಗೋಡೆ ಕಟ್ಟಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇಳಿರುವ 5 ಬಿಲಿಯ ಡಾಲರ್ (ಸುಮಾರು 35,000 ಕೋಟಿ ರೂಪಾಯಿ) ಮೊತ್ತಕ್ಕೆ ಸಂಬಂಧಿಸಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೆ ಸೆನೆಟ್ ಶನಿವಾರ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ, ಅಮೆರಿಕ ಸರಕಾರದ ಆಂಶಿಕ ಬಂದ್ ಕ್ರಿಸ್ಮಸ್ ರಜೆಯಲ್ಲಿ ಮುಂದುವರಿಯುವ ಸಾಧ್ಯತೆಗಳು ಗೋಚರಿಸಿವೆ.

ಸರಕಾರ ನಡೆಸಲು ಹಣ ನೀಡುವ ಮಸೂದೆಯ ಬಗ್ಗೆ ಯಾವುದೇ ಒಮ್ಮತ ಮೂಡಿಬರದ ಹಿನ್ನೆಲೆಯಲ್ಲಿ ಸೆನೆಟ್ ರಿಪಬ್ಲಿಕನ್ ನಾಯಕ ಮಿಚ್ ಮೆಕಾನೆಲ್ ಗುರುವಾರದವರೆಗೆ ಸದನವನ್ನು ಮುಂದೂಡಿದರು.

ಯಾವುದಾದರೂ ಒಪ್ಪಂದ ಏರ್ಪಟ್ಟರೆ ನಿಮ್ಮನ್ನು ವಾಪಸ್ ಕರೆಯುತ್ತೇನೆ ಎಂದು ಅವರು ಹೇಳಿದರಾದರೂ, ಸರಕಾರಿ ಯಂತ್ರದ ಆಂಶಿಕ ಮುಚ್ಚುಗಡೆ ಗುರುವಾರದವರೆಗೆ ಮುಂದುವರಿಯುವುದು ಬಹುತೇಕ ನಿಶ್ಚಿತ ಎಂದು ಹೇಳಲಾಗಿದೆ.

ಮೆಕ್ಸಿಕೊ ಗೋಡೆಗೆ ಹಣ ಬೇಕೆಂದು ರಿಪಬ್ಲಿಕನ್ ಪಕ್ಷದ ಟ್ರಂಪ್ ಕೇಳಿದರೆ, ಹಣ ಕೊಡುವುದಿಲ್ಲ ಎಂಬುದಾಗಿ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ಹೇಳುತ್ತಿದ್ದಾರೆ. ಇಬ್ಬರೂ ತಮ್ಮ ತಮ್ಮ ನಿಲುವಿಗೆ ಅಂಟಿ ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News