ಮಾಜಿ ಪತ್ನಿಯ ಹತ್ಯೆ ಮಾಡಿ ಆನ್‌ಲೈನ್‌ನಲ್ಲಿ ಜೀವಂತವಿಟ್ಟಿದ್ದ ವೈದ್ಯ!

Update: 2018-12-24 03:58 GMT

ಗೋರಖ್‌ಪುರ, ಡಿ.24: ಡಾ.ಧರ್ಮೇಂದ್ರ ಪ್ರತಾಪ್ ಸಿಂಗ್ ಎಂಬ ಇಲ್ಲಿನ ಖ್ಯಾತ ವೈದ್ಯ ಕಳೆದ ಜೂನ್ ತಿಂಗಳಲ್ಲಿ ತನ್ನ ಮಾಜಿ ಪತ್ನಿ ರಾಖಿ ಶ್ರೀವಾಸ್ತವ ಅಲಿಯಾಸ್ ರಾಜೇಶ್ವರಿ ಎಂಬಾಕೆಯನ್ನು ನೇಪಾಳದ ಪೊಖ್ರಾದಲ್ಲಿ ಪ್ರಪಾತಕ್ಕೆ ತಳ್ಳಿ ಹತ್ಯೆ ಮಾಡಿ, ಯಾರಿಗೂ ಅನುಮಾನ ಬಾರದಂತೆ ಆನ್‌ಲೈನ್‌ನಲ್ಲಿ ಆಕೆಯನ್ನು ಜೀವಂತವಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಏಳು ತಿಂಗಳಿಂದ ಆಕೆ ಅಸ್ಸಾಂನಲ್ಲಿ ವಾಸವಿದ್ದಾಳೆ ಎಂದು ಬಿಂಬಿಸುವ ರೀತಿಯಲ್ಲಿ ಆಕೆಯ ಸಾಮಾಜಿಕ ಜಾಲತಾಣ ಖಾತೆಗಳಿಂದ ಪೋಸ್ಟ್ ಮಾಡುತ್ತಿದ್ದ ವಿಚಾರ ಬಹಿರಂಗವಾಗಿದೆ. ಈ ಸಂಬಂಧ ವೈದ್ಯ ಹಾಗೂ ಆತನ ಇಬ್ಬರು ಸಹಚರರಾದ ಪ್ರಮೋದ್ ಕುಮಾರ್ ಸಿಂಗ್ ಹಾಗೂ ದೇಶದೀಪಕ್ ನಿಶಾದ್ ಅವರನ್ನು ದಾವೂದ್‌ಪುರದಲ್ಲಿ ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ.

ಕಳೆದ ಜೂನ್‌ನಲ್ಲಿ ರಾಖಿ ನಾಪತ್ತೆ ಬಗ್ಗೆ ಆಕೆಯ ಕುಟುಂಬದವರು ದೂರು ನೀಡಿದ ಹಿನ್ನೆಲೆಯಲ್ಲಿ ಆಕೆಯ ಎರಡನೇ ಪತಿ ಮನೀಶ್ ಸಿನ್ಹಾ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಲಾಗಿತ್ತು. ಆದರೆ ಅಂತಿಮವಾಗಿ ವಿಶೇಷ ಕಾರ್ಯಪಡೆ, ಖ್ಯಾತ ವೈದ್ಯ ಹಾಗೂ ಆಕೆಯ ಮೊದಲ ಪತಿ ಡಾ.ಸಿಂಗ್‌ನನ್ನು ವಿಚಾರಣೆಗೆ ಗುರಿಪಡಿಸಿದಾಗ ಸತ್ಯಾಂಶ ಬಯಲಾಯಿತು.

ರಾಖಿ ಜೂನ್ 1ರಂದು ನೇಪಾಳಕ್ಕೆ ಮನೀಶ್ ಜತೆ ಹೋಗಿದ್ದು ತನಿಖೆ ವೇಳೆ ತಿಳಿದುಬಂದಿತ್ತು. ಆದರೆ ಮನೀಶ್ ವಾಪಸ್ಸಾದ ಬಳಿಕವೂ ಆಕೆ ಅಲ್ಲೇ ಉಳಿದಿದ್ದಳು. ಡಾ.ಸಿಂಗ್ ಅವರ ಚಲನವಲನಗಳ ಬಗ್ಗೆಯೂ ನಿಗಾ ಇಟ್ಟಿದ್ದ ಎಂಬುದು ಪೊಲೀಸರು ಆತನ ಕರೆ ದಾಖಲೆಗಳನ್ನು ಪಡೆದು ಪರಿಶೀಲಿಸಿದಾಗ, ರಾಖಿ ನಾಪತ್ತೆಯಾದ ಅವಧಿಯಲ್ಲಿ ಆತನೂ ನೇಪಾಳದಲ್ಲಿದ್ದುದು ದೃಢಪಟ್ಟಿತ್ತು. ಜೂನ್ 1 ರಿಂದ 4ರವರೆಗೆ ಆಕೆಯ ಫೋನ್ ಪೊಖ್ರಾದಲ್ಲಿ ಚಾಲನೆಯಲ್ಲಿತ್ತು. ಪೊಲೀಸ್ ತಂಡ ಅಲ್ಲಿಗೆ ಭೇಟಿ ನೀಡಿದಾಗ ಆಕೆಯ ಮೃತದೇಹ ಜೂನ್ ಮೊದಲ ವಾರದಲ್ಲಿ ಪತ್ತೆಯಾಗಿದ್ದನ್ನು ಸ್ಥಳೀಯ ಪೊಲೀಸರು ತಿಳಿಸಿದರು.

ಇದರಿಂದ ಸಿಂಗ್ ಮೇಲಿನ ಅನುಮಾನ ಬಲವಾಯಿತು. ಅಂತಿಮವಾಗಿ ರಾಖಿ ಆಸ್ತಿ ಹಾಗೂ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಪ್ರಪಾತಕ್ಕೆ ತಳ್ಳಿ ಕೊಂದಿರುವುದನ್ನು ಒಪ್ಪಿಕೊಂಡ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಬಳಿಕ ಆಕೆಯ ಮೊಬೈಲ್ ಫೋನ್ ಬಳಸಿ ಆಕೆಯ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸುತ್ತಿದ್ದ. ಅಕ್ಟೋಬರ್ 4ರಂದು ಆಕೆಯ ಮೊಬೈಲ್ ಗುವಾಹತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದು ತಿಳಿದುಬಂದಿತ್ತು. ತನ್ನ ಸಹಚರರ ಮೂಲಕ ಆಕೆಯ ಮೊಬೈಲನ್ನು ಅಲ್ಲಿಗೆ ಕಳುಹಿಸಿ ಅಲ್ಲಿಂದ ಅಪ್‌ಡೇಟ್ ಮಾಡಲಾಗುತ್ತಿತ್ತು ಎಂದು ಸಿಂಗ್ ಒಪ್ಪಿಕೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News