ಸಾಲಮನ್ನಾ: ಬ್ಯಾಂಕ್‌ಗಳ ನೆರವಿಗೆ ಬಂದ ನಬಾರ್ಡ್

Update: 2018-12-24 04:07 GMT

ಹೊಸದಿಲ್ಲಿ, ಡಿ.24: ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ಸಾಲಮನ್ನಾ ಗಿಮಿಕ್ ನಡೆದಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಮೇಲೆ ಆಗಬಹುದಾದ ಸಂಭಾವ್ಯ ಪರಿಣಾಮವನ್ನು ಊಹಿಸಿದ ನಬಾರ್ಡ್, ಸಾಲಮನ್ನಾ ಮಾಡುವ ವೇಳೆ ಬ್ಯಾಂಕ್‌ಗಳ ಎಲ್ಲ ಬಾಕಿಯನ್ನು ತಕ್ಷಣವೇ ಪಾವತಿಸಬೇಕು ಹಾಗೂ ಈ ಮೂಲಕ ಸಾಲ ಆವರ್ತಕ್ಕೆ ಯಾವುದೇ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಿದೆ.

ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಸಾಲದಾರ ಬ್ಯಾಂಕ್‌ಗಳಿಗೆ ಸರ್ಕಾರಗಳಿಂದ ದೊಡ್ಡ ಮೊತ್ತದ ಬಾಕಿ ಇರುವ ಬಗ್ಗೆ ಹಲವು ಬ್ಯಾಂಕಿಂಗ್ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್‌ಗಳು ರೈತರ ಸಾಲಮನ್ನಾ ಮಾಡಿದ್ದರೂ, ಸರ್ಕಾರಗಳಿಂದ ಈ ಬ್ಯಾಂಕ್‌ಗಳಿಗೆ ಹಣ ಬಿಡುಗಡೆಯಾಗದೇ ಸಮಸ್ಯೆ ಎದುರಾಗಿದೆ.

ಉದಾಹರಣೆಗೆ 2016ರಲ್ಲಿ ತಮಿಳುನಾಡು ಸರ್ಕಾರ 6,000 ಕೋಟಿ ರೂ. ಸಾಲಮನ್ನಾ ಘೋಷಿಸಿತ್ತು. ಐದು ವರ್ಷಗಳಲ್ಲಿ ಸಹಕಾರಿ ಸಂಸ್ಥೆಗಳ 3,200 ಕೋಟಿ ರೂಪಾಯಿಯನ್ನು ತೀರಿಸಲು ಸರ್ಕಾರ ನಿರ್ಧರಿಸಿತ್ತು. ಹಲವು ರಾಜ್ಯಗಳು ತಮ್ಮ ಹಣಕಾಸು ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೇ ಸಾಲಮನ್ನಾ ಘೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಬಾರ್ಡ್‌ನ ಈ ಸೂಚನೆ, ಬಜೆಟ್‌ನಲ್ಲಿ ಹಣಕಾಸು ಲಭ್ಯತೆ ಅಗತ್ಯತೆಯನ್ನು ಕಡ್ಡಾಯಪಡಿಸಲಿದೆ.

ದೊಡ್ಡ ಮೊತ್ತದ ಹಣವನ್ನು ಸರ್ಕಾರಗಳು ಬ್ಯಾಂಕ್‌ಗಳಿಗೆ ಪಾವತಿಸಬೇಕಿರುವ ಹಿನ್ನೆಲೆಯಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ಒದಗಿಸಲು ಬ್ಯಾಂಕ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಸಾಲ ಆವರ್ತಕ್ಕೇ ಧಕ್ಕೆಯಾಗುತ್ತಿದೆ ಎಂದು ಬ್ಯಾಂಕಿಂಗ್ ಮೂಲಗಳು ಹೇಳುತ್ತಿವೆ.

12 ರಾಜ್ಯ ಸರ್ಕಾರಗಳು ಕಳೆದ ಐದು ವರ್ಷಗಳಲ್ಲಿ 2.3 ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಘೋಷಿಸಿವೆ. ಇತ್ತೀಚೆಗೆ ನೂತನವಾಗಿ ಅಧಿಕಾರಕ್ಕೆ ಬಂದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಕಾಂಗ್ರೆಸ್ ಸರ್ಕಾರಗಳು ಇದಕ್ಕೆ ಹೊಸ ಸೇರ್ಪಡೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News