ಏಕಾಏಕಿ ಚೌಕಾಶಿ ಮಾಡುವ ಶಕ್ತಿ ಪಡೆದ ಬಿಜೆಪಿ ಮಿತ್ರಪಕ್ಷಗಳು!
ಹೊಸದಿಲ್ಲಿ, ಡಿ.24: ಬಿಜೆಪಿ ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಸೋತ ಹಿನ್ನೆಲೆಯಲ್ಲಿ ಆ ಪಕ್ಷದ ಮಿತ್ರಪಕ್ಷಗಳು ಏಕಾಏಕಿ ಚೌಕಾಶಿ ಮಾಡುವ ಶಕ್ತಿ ಪಡೆದುಕೊಂಡಿವೆ.
ರವಿವಾರ ಬಿಹಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಎನ್‌ಡಿಎ ಸೀಟು ಹಂಚಿಕೆ ಸೂತ್ರದಲ್ಲಿ ಈ ಅಂಶ ಪ್ರತಿಫಲಿಸಿದೆ. ಎಲ್‌ಜೆಪಿ ಪಕ್ಷದ ರಾಮ್‌ವಿಲಾಸ್ ಪಾಸ್ವಾನ್ ರಾಜ್ಯಸಭಾ ಸದಸ್ಯತ್ವವಲ್ಲದೆ 6 ಲೋಕಸಭಾ ಸೀಟುಗಳನ್ನು ಗಿಟ್ಟಿಸಿಕೊಳ್ಳಲು ಸಫಲವಾಗಿದ್ದಾರೆ.
ಮತ್ತೊಂದೆಡೆ ಬಿಜೆಪಿ ತನ್ನ ಐವರು ಹಾಲಿ ಸಂಸದರನ್ನು ಸ್ಪರ್ಧೆಯಿಂದ ಹೊರಗಿಡಬೇಕಾದ ಸ್ಥಿತಿಯಲ್ಲಿದೆ. ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 22 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಈ ಬಾರಿ ಕೇವಲ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. 17 ಕ್ಷೇತ್ರಗಳಲ್ಲಿ ಜೆಡಿಯು ಸ್ಪರ್ಧಿಸಲಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಎದುರಾಳಿಗಳಾಗಿ ಸ್ಪರ್ಧಿಸಿದ್ದವು.
ಸೀಟು ಹಂಚಿಕೆ ಸೂತ್ರದಲ್ಲಿ ಪಾಸ್ವಾನ್ ಹೆಚ್ಚು ಲಾಭ ಪಡೆದಿದ್ದಾರೆ. ಪಾಸ್ವಾನ್ ಮೊದಲಿಗೆ 4 ಲೋಕಸಭಾ ಹಾಗೂ ಒಂದು ರಾಜ್ಯಸಭಾ ಸೀಟಿಗೆ ಒಪ್ಪಿಕೊಂಡಿದ್ದರು. ಉಪೇಂದ್ರ ಕುಶ್ವಾಹ ಎನ್‌ಡಿಎ ಮೈತ್ರಿಕೂಟ ತ್ಯಜಿಸಿದ ಹಿನ್ನೆಲೆಯಲ್ಲಿ ಪಾಸ್ವಾನ್ ಬಿಜೆಪಿ-ಜೆಡಿಯುನೊಂದಿಗೆ ಚೌಕಾಸಿಗೆ ಇಳಿದರು. ಕುಶ್ವಾಹ ನೇತೃತ್ವದ ಪಕ್ಷ 2014ರಲ್ಲಿ 3 ಕ್ಷೇತ್ರಗಳಲ್ಲಿ ಜಯಶಾಲಿಯಾಗಿತ್ತು.
ನೋಟು ನಿಷೇಧವಾಗಿ ಎರಡು ವರ್ಷ ಕಳೆದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶಿಸುವ ಮೂಲಕ ನಿತೀಶ್‌ಕುಮಾರ್ ಹಾಗೂ ಪಾಸ್ವಾನ್ ಲಾಭ ಮಾಡಿಕೊಂಡಿದ್ದಾರೆ. ಬಿಜೆಪಿ ತನ್ನ ಕೈಯನ್ನು ತಿರುಚಿಸಿಕೊಂಡಿದೆ ಎಂದು ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.