ಕಂದಾಯ ಸಂಗ್ರಹ ಹೆಚ್ಚಿದಂತೆ ಶೇ.12- 18ರ ನಡುವಿನ ಗರಿಷ್ಠ ಜಿಎಸ್‌ಟಿ ದರ ನಿಗದಿ: ಜೇಟ್ಲಿ

Update: 2018-12-24 17:25 GMT

 ಹೊಸದಿಲ್ಲಿ, ಡಿ.24: ಕಂದಾಯ ಸಂಗ್ರಹ ಹೆಚ್ಚಿದಂತೆ ಮುಂಬರುವ ದಿನಗಳಲ್ಲಿ ದೇಶದಲ್ಲಿ ಶೇ.0, ಶೇ.5 ಹಾಗೂ ಶೇ.12ರಿಂದ 18ರ ನಡುವಿನ ಪ್ರಮಾಣಿತ ದರ - ಈ ಮೂರು ಹಂತಗಳ ಜಿಎಸ್‌ಟಿ ತೆರಿಗೆ ಪದ್ಧತಿ ನಿಗದಿಗೊಳಿಸಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಆದರೆ ಐಷಾರಾಮಿ ವಸ್ತುಗಳು ಮತ್ತು ಕೇಡು ತರುವ(ಸಿಗರೇಟು, ಮದ್ಯ ಇತ್ಯಾದಿ) ವಸ್ತುಗಳ ಮೇಲಿನ ಅಧಿಕ ಜಿಎಸ್‌ಟಿ ದರ ಮುಂದುವರಿಯಲಿದೆ . ಶೇ.28ರ ತೆರಿಗೆ ಹಂತ ಈಗ ಸಾಯುತ್ತಿರುವ ಶ್ರೇಣಿಯಾಗಿದೆ ಎಂದವರು ಹೇಳಿದ್ದಾರೆ.

 ಜಿಎಸ್‌ಟಿ ಪರಿವರ್ತನೆ ಪೂರ್ಣಗೊಂಡಿದ್ದು ನಾವೀಗ ಪ್ರಥಮ ಹಂತದ ದರಗಳನ್ನು ತರ್ಕಸಮ್ಮತಗೊಳಿಸಿದ್ದೇವೆ(ಐಷಾರಾಮಿ ಮತ್ತು ಕೇಡು ತರುವ ವಸ್ತುಗಳನ್ನು ಹೊರತುಪಡಿಸಿ , ಶೇ.28ರ ತೆರಿಗೆ ಶ್ರೇಣಿಯನ್ನು ಕೈಬಿಡುವುದು). ಮುಂದಿನ ಗಮನ, ಶೇ.12 ಮತ್ತು 18ರ ಬದಲು ಏಕರೀತಿಯ ಪ್ರಮಾಣಿತ ದರವನ್ನು ಹೊಂದುವುದಾಗಿದೆ . ಈ ಎರಡರ ನಡುವಿನ ದರ ಇದಾಗಿರುತ್ತದೆ . ಮುಂದಿನ ದಿನಗಳಲ್ಲಿ ಶೂನ್ಯ ದರ, ಶೇ.5ರ ದರ ಹಾಗೂ ಏಕರೀತಿಯ ಪ್ರಮಾಣಿತ ದರದ ತೆರಿಗೆ ಇರಲಿದೆ ಎಂದವರು ತಿಳಿಸಿದ್ದಾರೆ.

 ಶೀಘ್ರದಲ್ಲೇ ಸಿಮೆಂಟ್ ಕೂಡಾ ಶೇ.12 ಮತ್ತು 18ರ ಹಂತಕ್ಕೆ ಬರಲಿದೆ. ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಈಗಾಗಲೇ ಶೇ.28ರಿಂದ 12-18ರ ಹಂತಕ್ಕೆ ವರ್ಗಾಯಿಸಲಾಗಿದೆ. ಶೇ.28ರ ಹಂತ ನಿಧಾನಕ್ಕೆ ಕಣ್ಮುಚ್ಚುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ. ಶೇ.28ರ ಹಂತದಲ್ಲಿದ್ದ 23 ವಸ್ತುಗಳನ್ನು ಕಳೆದ ಶನಿವಾರ ಕೆಳಗಿನ ಹಂತಕ್ಕೆ ಇಳಿಸಲಾಗಿದೆ.

ಜಿಎಸ್‌ಟಿ ಜಾರಿಗೂ ಮುನ್ನ ದೇಶದಲ್ಲಿ ಬಹುತೇಕ ವಸ್ತುಗಳಿಗೆ ಶೇ.31ರಷ್ಟು ತೆರಿಗೆಯ ಭಾರವಿತ್ತು. ಆಗ ಅಧಿಕ ದರ ನೀಡುವುದು ಅಥವಾ ತೆರಿಗೆ ತಪ್ಪಿಸುವುದು - ಈ ಎರಡು ಆಯ್ಕೆ ಮಾತ್ರವಿತ್ತು. ದೇಶವನ್ನು ಶೇ.31ರ ತೆರಿಗೆಯ ಭಾರದಡಿ ಅದುಮಿದವರು ಜಿಎಸ್‌ಟಿಯನ್ನು ಕಡೆಗಣಿಸುತ್ತಿದ್ದಾರೆ. ಬೇಜವಾಬ್ದಾರಿಯ ಸರಕಾರ ಹಾಗೂ ಬೇಜವಬ್ದಾರಿಯ ಅರ್ಥವ್ಯವಸ್ಥೆಯಿದ್ದರೆ ಕೆಳಗಿನ ಹಂತಕ್ಕೆ ಓಟ ಮಾತ್ರ ಸಾಧ್ಯವಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News