×
Ad

ಆಸ್ಟ್ರೇಲಿಯ, ಕಿವೀಸ್ ಸರಣಿಗೆ ಭಾರತ ತಂಡ ಪ್ರಕಟ

Update: 2018-12-24 23:29 IST

ಹೊಸದಿಲ್ಲಿ, ಡಿ.24: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಮುಂದಿನ ನ್ಯೂಝಿಲೆಂಡ್ ಪ್ರವಾಸದಲ್ಲಿ ನಡೆಯಲಿರುವ ಟಿ20 ಸರಣಿಗೆ ವಾಪಸ್ ಕರೆಸಲಾಗಿದೆ. ಕಳೆದ ಆರು ಟಿ20 ಪಂದ್ಯಗಳಿಂದ ಹೊರ ಗುಳಿದಿದ್ದ ಧೋನಿ, ನ್ಯೂಝಿಲೆಂಡ್ ಪ್ರವಾಸ ಮತ್ತು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಮತ್ತೆ ವಿಕೆಟ್ ಹಿಂದೆ ತನ್ನ ಕೌಶಲ್ಯ ಪ್ರದರ್ಶಿಸಲಿದ್ದಾರೆ. ಸದ್ಯ ಆಯ್ಕೆ ಮಾಡಲಾಗಿರುವ ಏಕದಿನ ತಂಡವನ್ನು ಮುಂದಿನ ವರ್ಷ ಮೇನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2019 ಐಸಿಸಿ ವಿಶ್ವಕಪ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ತಂಡವೆಂದೇ ಪರಿಗಣಿಸಲಾಗುತ್ತಿದೆ. ಆಸ್ಟ್ರೇಲಿಯದಲ್ಲಿ ಭಾರತ ಜನವರಿ 12 (ಸಿಡ್ನಿ), 15(ಅಡಿಲೇಡ್) ಮತ್ತು 18(ಮೆಲ್ಬೋರ್ನ್) ಹೀಗೆ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ನ್ಯೂಝಿಲೆಂಡ್‌ನಲ್ಲಿ ಜನವರಿ 23,26,28,31 ಮತ್ತು ಫೆಬ್ರವರಿ 3 ಹೀಗೆ ಒಟ್ಟು ಐದು ಏಕದಿನ ಪಂದ್ಯಗಳು ಮತ್ತು ಫೆಬ್ರವರಿ 6,8 ಮತ್ತು 10ರಂದು ಮೂರು ಟಿ 20 ಪಂದ್ಯಗಳನ್ನು ಆಡಲಿದೆ. ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಆಡಿ ಸ್ವದೇಶಕ್ಕೆ ಮರಳಿದ ನಂತರ ರಿಷಭ್ ಪಂತ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎ ತಂಡದ ಪರ ಆಡಲಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಿಂದ ಹೊರಗುಳಿದಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಮರಳಲಿದ್ದಾರೆ. ಮನೀಷ್ ಪಾಂಡೆ ಅವರು ಪಾಂಡ್ಯಾಗೆ ಸ್ಥಾನ ತೆರವು ಮಾಡಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ನೀಡಿದ ಕಳಪೆ ಪ್ರದರ್ಶನದ ಕಾರಣ ವೇಗದ ಬೌಲರ್ ಉಮೇಶ್ ಯಾದವ್‌ರನ್ನು ಏಕದಿನ ತಂಡಕ್ಕೆ ಪರಿಗಣಿಸಲಾಗಿಲ್ಲ. ಅವರ ಬದಲಿಗೆ ಆಸೀಸ್ ವಿರುದ್ಧದ ಪರ್ತ್ ಟೆಸ್ಟ್‌ನಲ್ಲಿ 6 ವಿಕೆಟ್ ಕಬಳಿಸಿದ್ದ ಮುಹಮ್ಮದ್ ಶಮಿಗೆ ಸ್ಥಾನ ಕಲ್ಪಿಸಲಾಗಿದೆ.

ನ್ಯೂಝಿಲೆಂಡ್ ವಿರುದ್ಧ ಟಿ20 ಸರಣಿಗೆ ತಂಡ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಮ್.ಎಸ್, ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್,ಭುವನೇಶ್ವರ್ ಕುಮಾರ್, ಜಸ್‌ಪ್ರಿತ್ ಬುಮ್ರಾ ಮತ್ತು ಖಲೀಲ್ ಅಹ್ಮದ್.

ಆಸ್ಟ್ರೇಲಿಯ ಹಾಗೂ ಕಿವೀಸ್ ವಿರುದ್ಧ ಏಕದಿನ ಸರಣಿಗೆ ತಂಡ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಮ್.ಎಸ್,ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಜಸ್‌ಪ್ರಿತ್ ಬುಮ್ರಾ, ಖಲೀಲ್ ಅಹ್ಮದ್ ಮತ್ತು ಮುಹಮ್ಮದ್ ಶಮಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News