ರಣಜಿ ಕ್ರಿಕೆಟ್: ಕರ್ನಾಟಕದ ಬಿಗಿಹಿಡಿತದಲ್ಲಿ ರೈಲ್ವೇಸ್
ಶಿವಮೊಗ್ಗ, ಡಿ.24: ದೇಗಾ ನಿಶ್ಚಲ್ ಅವರ ಅಮೋಘ ಶತಕ , ಸಿದ್ಧಾರ್ಥ್ ಹಾಗೂ ದೇವದತ್ತ್ ಪಡಿಕ್ಕಲ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ ರೈಲ್ವೇಸ್ ಎದುರಿನ ರಣಜಿ ಗುಂಪು ‘ಎ’ ಪಂದ್ಯದಲ್ಲಿ ಗೆಲುವಿನ ಕನಸು ಕಾಣುತ್ತಿದೆ. ಎರಡನೇ ಇನಿಂಗ್ಸ್‌ನಲ್ಲಿ 290 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿರುವ ಆತಿಥೇಯರು ಒಟ್ಟು 362ರನ್‌ಗಳ ಗೆಲುವಿನ ಗುರಿಯನ್ನು ರೈಲ್ವೇಸ್ ಮುಂದಿಟ್ಟಿದ್ದಾರೆ. ಗುರಿ ಬೆನ್ನತ್ತಿರುವ ರೈಲ್ವೇಸ್ 44 ರನ್ ಗಳಿಸಿ ಮೊದಲ ವಿಕೆಟ್‌ನ್ನು ಈಗಾಗಲೇ ಕಳೆದುಕೊಂಡಿದೆ.
ಇಲ್ಲಿಯ ಕೆಎಸ್‌ಸಿಎ ನವುಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಾಟದಲ್ಲಿ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿವಿಕೆಟ್ ನಷ್ಟವಿಲ್ಲದೆ 41ರನ್ ಗಳಿಸಿದ್ದ ಕರ್ನಾಟಕ ಸೋಮವಾರ ತನ್ನ ಮೂರನೇ ದಿನದಾಟ ಆರಂಭಿಸಿತು. ರವಿವಾರ ಅಜೇಯರಾಗುಳಿದ್ದ ದೇವದತ್ತ್ ಪಡಿಕ್ಕಲ್ ಹಾಗೂ ಡಿ.ನಿಶ್ಚಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 150 ರನ್‌ಗಳನ್ನು ಜಮೆ ಮಾಡಿದರು. ದೇವದತ್ತ್ ಪಡಿಕ್ಕಲ್ ಸೊಗಸಾದ ಅರ್ಧಶತಕ (75) ಬಾರಿಸಿ ಮೊದಲ ವಿಕೆಟ್ ಆಗಿ ನಿರ್ಗಮಿಸಿದರು. ಇನ್ನೊಂದು ತುದಿಯಲ್ಲಿದ್ದ ನಿಶ್ಚಲ್ 232 ಎಸೆತಗಳನ್ನು ಎದುರಿಸಿ 7 ಬೌಂಡರಿಗಳ ನೆರವಿನಿಂದ ಬರೋಬ್ಬರಿ 101 ರನ್ ಗಳಿಸಿ ಎರಡನೆಯವರಾಗಿ ವಿಕೆಟ್ ಕೈಚೆಲ್ಲಿದರು. ಈ ವೇಳೆ ಕರ್ನಾಟಕದ ಸ್ಕೋರ್ 244ಕ್ಕೆ ತಲುಪಿತ್ತು. ಕೃಷ್ಣಮೂರ್ತಿ ಸಿದ್ಧಾರ್ಥ್ ಹಾಗೂ ನಾಯಕ ಮನೀಷ್ ಪಾಂಡೆ ವಿಕೆಟ್ ಪತನವಾಗದಂತೆ ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಆಕ್ರಮಣಕಾರಿ ಆಟವಾಡಿದ ಸಿದ್ಧಾರ್ಥ್ ಭರ್ಜರಿ ಅರ್ಧಶತಕ(ಅಜೇಯ 84) ಗಳಿಸಿ ಮಿಂಚಿದರು. ನಾಯಕ ಪಾಂಡೆ(ಅಜೇಯ 18) ಸಿದ್ಧಾರ್ಥ್ ಅವರಿಗೆ ಉತ್ತಮ ಸಾಥ್ ನೀಡಿದರು. ರೈಲ್ವೇಸ್ ಪರ ಹರ್ಷ ತ್ಯಾಗಿ ಮಾತ್ರ ವಿಕೆಟ್ (78ಕ್ಕೆ 2) ಗಳಿಕೆಯಲ್ಲಿ ಯಶಸ್ವಿಯಾದರು. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಅಮಿತ್ ಮಿಶ್ರಾ ಸೇರಿದಂತೆ ರೈಲ್ವೇಸ್‌ನ ಬೌಲರ್‌ಗಳು ಹೈರಾಣಾದರು.
ಕರ್ನಾಟಕದ ಬೃಹತ್ ಮೊತ್ತವನ್ನು ಬೆನ್ನತ್ತಿರುವ ರೈಲ್ವೇಸ್ ದಾಂಡಿಗರು ಎಚ್ಚರಿಕೆಯ ಆಟಕ್ಕೆ ಮೊರೆ ಹೋಗಿದ್ದಾರೆ.ಆದರೂ ಮೊದಲ ವಿಕೆಟ್‌ನ್ನು ರೈಲ್ವೇಸ್ ಕಳೆದುಕೊಂಡಿದೆ. ಪ್ರಸಿದ್ಧ್ ಕೃಷ್ಣ ಪ್ರವಾಸಿ ತಂಡದ ಪ್ರಶಾಂತ್ ಗುಪ್ತಾ(4) ವಿಕೆಟ್ ಉರುಳಿಸಿದ್ದಾರೆ. ವಾಕಸ್ಕರ್ ಹಾಗೂ ನಿತಿನ್ ಭಿಲ್ಲೆ ಕ್ರೀಸ್ ಕಾಯ್ದುಕೊಂಡಿದ್ದು, ಇನ್ನೂ 318 ರನ್‌ಗಳನ್ನು ಗಳಿಸಬೇಕಿದೆ. ಕರ್ನಾಟಕದ ಬೌಲರ್‌ಗಳಿಗೆ ಈ ಜೋಡಿ ಸವಾಲಾಗಲಿದೆಯೇ ಕಾದು ನೋಡಬೇಕಿದೆ. ಜಯದ ಸವಿಯುನ್ನಲು ಕರ್ನಾಟಕಕ್ಕೆ 9 ವಿಕೆಟ್‌ಗಳ ಅಗತ್ಯವಿದೆ.