ಒಲಿಂಪಿಕ್ಸ್ ಪದಕ ವಿಜೇತರು ಸೇರಿ ಐವರ ತಾತ್ಕಾಲಿಕ ಅಮಾನತು
ಪ್ಯಾರಿಸ್, ಡಿ.24: ಉದ್ದೀಪನ ಮದ್ದು ಸೇವನೆ ಸಾಬೀತಾದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರೂ ಸೇರಿದಂತೆ ಐದು ಜನ ವೇಟ್‌ಲಿಫ್ಟರ್‌ಗಳನ್ನು ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಒಕ್ಕೂಟವು ತಾತ್ಕಾಲಿಕವಾಗಿ ಅಮಾನತು ಮಾಡಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟರ್‌ಗಳು ನೀಡಿದ ಮೂತ್ರದ ಮಾದರಿಯಲ್ಲಿ ಉದ್ದೀಪನ ಮದ್ದು ಇದ್ದದ್ದು ಮರುಪರೀಕ್ಷೆ ನಡೆಸಿದಾಗ ಸಾಬೀತಾಗಿದೆ.
2012ರ ಒಲಿಂಪಿಕ್ಸ್‌ನಲ್ಲಿ 105ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಉಕ್ರೇನ್‌ನ ಒಲೆಕ್ಸಿ ತೊರೊಕ್ತಿ ಹಾಗೂ 105 ಕೆ.ಜಿ. ತೂಕ ವಿಭಾಗದಲ್ಲಿಯೇ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ಉಝ್ಬೇಕಿಸ್ತಾನದ ರಸ್ಲಾನ್ ನುರುದಿನೊವ್ ಅವರ ಮೂತ್ರ ಮಾದರಿಯಲ್ಲಿ ಸಂಶ್ಲೇಷಿತ ಸ್ಟಿರಾಯ್ಡಿ ಅಂಶ ಪತ್ತೆಯಾಗಿದೆ.
ಇದರಿಂದ ತೊರೊಕ್ತಿ ಗೆದ್ದ ಪದಕವನ್ನು ಹಿಂಪಡೆಯಲಾಗುವುದು. ಪರೀಕ್ಷೆಯ ನಾಲ್ಕು ವರ್ಷಗಳ ನಂತರ ಬ್ರೆಜಿಲ್‌ನಲ್ಲಿ ಪದಕ ಗೆದ್ದ ಕಾರಣ ನುರುದಿನೊವ್ ಅವರ ಪದಕವನ್ನು ಹಿಂಪಡೆದಿಲ್ಲ. 2012 ಒಲಿಂಪಿಕ್ಸ್‌ನಲ್ಲಿ 56 ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದಿದ್ದ ಅಝರ್‌ಬೈಜಾನ್‌ನ ವೆಲೆಂಟಿನ್ ಹ್ರಿಸ್ಟೊವ್ ಉದ್ದೀಪನ ಮದ್ದು ಸೇವನೆ ಸಾಬೀತಾದ ಕಾರಣ ಅವರೂ ಪದಕವನ್ನು ಕಳೆದುಕೊಳ್ಳಲಿದ್ದಾರೆ. ಮದ್ದು ಸೇವಿಸಿ ಸಿಕ್ಕಿಬಿದ್ದ ಇನ್ನಿಬ್ಬರು ವೇಟ್‌ಲಿಫ್ಟರ್‌ಗಳೆಂದರೆ ಅರ್ಮೇನಿಯದ ಮೆಲೈನ್ ಡಲುಝಿನ್ ಹಾಗೂ ಬೆಲಾರಶ್ಯದ ಮಿಕಾಲೈ ನೊವಿಕಾವ್.