ರಾಜಕೀಯಗೊಂಡ ‘ಭಾರತ ರತ್ನ’

Update: 2018-12-24 18:32 GMT

ಮಹಾಚುನಾವಣೆಗೆ ಪಕ್ಷಗಳ ಸಿದ್ಧತೆ ಶುರುವಾಗಿದೆ. ಒಂದೆಡೆ ಬಿಜೆಪಿಯನ್ನು ಎದುರಿಸುವುದಕ್ಕೆ ಮಹಾಮೈತ್ರಿಯ ದಾರಿಗಳ ಹುಟುಕಾಟ ನಡೆಯುತ್ತಿದೆ. ರಾಹುಲ್ ಗಾಂಧಿ ಇದಕ್ಕಾಗಿ ಪ್ರಾದೇಶಿಕ ಪಕ್ಷಗಳ ನಾಯಕರ ಸಂಪರ್ಕದಲ್ಲಿದ್ದಾರೆ. ತೆಲಂಗಾಣದ ಚಂದ್ರಶೇಖರ್ ಮತ್ತು ಮಮತಾ ಬ್ಯಾನರ್ಜಿ ಒಂದಾಗಿ ಮಾತುಕತೆ ನಡೆಸಿದ್ದಾರೆ. ಎಡಪಂಥೀಯರು ಇನ್ನೂ ತಮ್ಮ ದಾರಿಯ ಕುರಿತಂತೆ ಅಸ್ಪಷ್ಟವಾಗಿದ್ದಾರೆ. ಶಿವಸೇನೆಯು ಬಿಜೆಪಿಗೆ ಮುಜುಗರ ಮಾಡುವುದಕ್ಕಾಗಿಯೇ ರಾಮಮಂದಿರಕ್ಕೆ ಪಟ್ಟು ಹಿಡಿದು ಕೂತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗೆ ಆಪ್ ಮೈತ್ರಿ ಮಾಡಿಕೊಳ್ಳುತ್ತದೆ ಎನ್ನುವ ವದಂತಿಗೆ ದಿಲ್ಲಿ ಸರಕಾರವೇ ಸ್ಪಷ್ಟವಾಗಿ ಉತ್ತರಿಸಿದೆ. 1984ರ ದಂಗೆಯನ್ನು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಪರೋಕ್ಷವಾಗಿ ಸಮರ್ಥಿಸಿರುವುದರಿಂದ ಅವರಿಗೆ ನೀಡಿರುವ ಭಾರತ ರತ್ನ ಗೌರವವನ್ನು ಹಿಂದೆಗೆದುಕೊಳ್ಳಬೇಕು ಎನ್ನುವ ಮನವಿಯೊಂದನ್ನು ದಿಲ್ಲಿ ಸರಕಾರ ಕೇಂದ್ರಕ್ಕೆ ಸಲ್ಲಿಸಿದೆ.

ಬಿಜೆಪಿಯೂ ಆಪ್‌ನ ಜೊತೆಗೆ ಧ್ವನಿಗೂಡಿಸಿದೆ. ದಿಲ್ಲಿ ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಯಾಕೆ ಅಂಗೀಕರಿಸಲಾಯಿತು ಎನ್ನುವುದನ್ನು ಊಹಿಸುವುದು ಬಲು ಸುಲಭ. ಪಂಜಾಬ್‌ನ್ನು ಗುರಿಯಾಗಿರಿಸಿಕೊಂಡು ಆಪ್, ರಾಜೀವ್‌ಗಾಂಧಿಯ ಭಾರತರತ್ನ ಗೌರವದ ವಿರುದ್ಧ ನಿರ್ಧಾರ ತಳೆದಿದೆ. ಆಮ್ ಆದ್ಮಿ ಪಕ್ಷಕ್ಕೆ ದಿಲ್ಲಿ ಬಿಟ್ಟರೆ ಅತ್ಯಂತ ಆಶಾದಾಯಕ ರಾಜ್ಯ ಪಂಜಾಬ್. ಸಿಖ್ ಸಮುದಾಯದ ಗಮನವನ್ನು ತನ್ನೆಡೆಗೆ ಸೆಳೆಯಲು ಅದು ಹೊರಟಿದೆ. ಅಂದರೆ ಸಿಖ್ ಹತ್ಯಾಕಾಂಡವನ್ನು ಮುಂದಿಟ್ಟು ಅದು ಪಂಜಾಬ್‌ನಲ್ಲಿ ಚುನಾವಣೆಯನ್ನು ಎದುರಿಸಲಿದೆ. ವಿಪರ್ಯಾಸವೆಂದರೆ ಒಂದು ಹತ್ಯಾಕಾಂಡವನ್ನು ಸಮರ್ಥಿಸಿದ ಪ್ರಧಾನಿಯ ಮುಂದೆಯೇ ಕೇಜ್ರಿವಾಲ್ ಸರಕಾರ ತನ್ನ ನಿರ್ಣಯವನ್ನು ಮುಂದಿಟ್ಟಿರುವುದು. ಗುಜರಾತ್ ಹತ್ಯಾಕಾಂಡದಲ್ಲಿ ನೇರವಾಗಿಯೂ ಪರೋಕ್ಷವಾಗಿಯೂ ಪಾತ್ರವಹಿಸಿದವರು ಮತ್ತು ಅದಕ್ಕಾಗಿ ಕ್ಷಮೆಯನ್ನು ಯಾಚಿಸುವುದಿರಲಿ, ಪಶ್ಚಾತ್ತಾಪವನ್ನೇ ಪಡೆದವರಿಂದ ದಿಲ್ಲಿ ಸರಕಾರ ಸಿಖ್ ಹತ್ಯಾಕಾಂಡದ ಸಂತ್ರಸ್ತರ ಪರವಾಗಿ ನ್ಯಾಯವನ್ನು ನಿರೀಕ್ಷಿಸುತ್ತಿದೆ.

ಸಿಖ್ ಹತ್ಯಾಕಾಂಡ ನಡೆದಿರುವ ಹೊತ್ತಿಗೆ ಇನ್ನೂ ರಾಜೀವ್ ಗಾಂಧಿ ದೇಶದ ಚುಕ್ಕಾಣಿಯನ್ನು ಹಿಡಿದಿರಲಿಲ್ಲ. ಹತ್ಯಾಕಾಂಡದ ಬಳಿಕ ‘‘ದೊಡ್ಡ ಮರವೊಂದು ಬಿದ್ದಾಗ ಸಣ್ಣ ಪುಟ್ಟ ಹಾನಿಯಾಗುವುದು ಸಹಜ’’ ಎಂಬ ಹೇಳಿಕೆಯನ್ನು ಅವರು ನೀಡಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಸಿಖ್ ಹತ್ಯಾಕಾಂಡದಲ್ಲಿ ಭಾಗಿಯಾದ ನಾಯಕರನ್ನು ರಕ್ಷಿಸಿದ್ದಾರೆ ಎಂಬ ಆರೋಪವೂ ಇದೆ. ಆದರೆ ಹತ್ಯಾಕಾಂಡದಲ್ಲಿ ರಾಜೀವ್ ಗಾಂಧಿಯವರು ಎಂದೂ ನೇರವಾಗಿ ಪಾತ್ರವಹಿಸಿರಲಿಲ್ಲ. ಆದರೆ ಗುಜರಾತ್ ಹತ್ಯಕಾಂಡದ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಅಮಿತ್ ಶಾ ಆ ರಾಜ್ಯದ ಗೃಹ ಸಚಿವರಾಗಿದ್ದರು. ಸರಕಾರ ಹತ್ಯಾಕಾಂಡಕ್ಕೆ ಹೇಗೆ ವೇದಿಕೆಯನ್ನು ಒದಗಿಸಿಕೊಟ್ಟಿತು ಎನ್ನುವುದು ಪದೇ ಪದೇ ಮಾಧ್ಯಮಗಳಲ್ಲಿ ಜಾಹೀರಾಗಿದೆ. ಗುಜರಾತ್ ಹತ್ಯಾಕಾಂಡದ ಮೂಲಕವೇ ದೇಶದ ಪ್ರಧಾನಿಯಾಗಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಕೇಂದ್ರದಲ್ಲಿದ್ದಾರೆ. ಬಿಜೆಪಿ ಮತ್ತು ಮೋದಿಯ ವಿರುದ್ಧ ಸತತವಾಗಿ ಗುದ್ದಾಡುತ್ತಾ ಬಂದಿರುವ ಕೇಜ್ರಿವಾಲ್‌ಗೆ ಇದು ತಿಳಿಯದ ಸಂಗತಿಯೇನೂ ಅಲ್ಲ. ದಿಲ್ಲಿ ಸರಕಾರದ ನಿರ್ಧಾರವನ್ನು ಮುಂದಿಟ್ಟುಕೊಂಡು ಕೇಂದ್ರದ ಬಿಜೆಪಿ ನಾಯಕರೂ ರಾಜೀವ್‌ಗಾಂಧಿಯ ವಿರುದ್ಧ ಕೆಸರರೆಚಲು ಹೊರಟಿದ್ದಾರೆ.

ಸರಿ, ರಾಜೀವ್ ಗಾಂಧಿಗೆ ನೀಡಿರುವ ಗೌರವವನ್ನು ಹಿಂದೆಗೆಯೋಣ. ಅದರ ಜೊತೆಗೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ನೀಡಿದ ಭಾರತರತ್ನವನ್ನು ಹಿಂದೆಗೆಯಲು ಬಿಜೆಪಿ ಸಿದ್ಧವಿದೆಯೇ? ಯಾಕೆಂದರೆ ಗುಜರಾತ್ ಹತ್ಯಾಕಾಂಡ ನಡೆದಿದ್ದಾಗ ಅಟಲ್ ಬಿಹಾರಿ ವಾಜಪೇಯಿಯವರು ಅಧಿಕಾರದಲ್ಲಿದ್ದರು. ‘ರಾಜಧರ್ಮ ಪಾಲಿಸಿ’ ಎಂದು ಮೋದಿಗೆ ಕರೆಕೊಟ್ಟ ಬೆನ್ನಿಗೇ, ಗೋವಾದ ನೆಲದಲ್ಲಿ ನಿಂತು ಹತ್ಯಾಕಾಂಡವನ್ನು ಅಟಲ್ ಸಮರ್ಥಿಸಿ ಮಾತನಾಡಿದರು. ಕೇಂದ್ರ ತಕ್ಷಣ ಸ್ಪಂದಿಸಿದ್ದಿದ್ದರೆ ಗುಜರಾತ್ ಹತ್ಯಾಕಾಂಡವನ್ನು ತಪ್ಪಿಸಬಹುದಾಗಿತ್ತು ಎನ್ನುವುದು ಹಿರಿಯ ಪೊಲೀಸ್ ಅಧಿಕಾರಿಗಳ ಅನಿಸಿಕೆಯಾಗಿದೆ. ಅಷ್ಟೇ ಅಲ್ಲ, ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ, ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿಸಿಕೊಟ್ಟ ಆರೋಪವನ್ನೂ ವಾಜಪೇಯಿ ಎದುರಿಸುತ್ತಿದ್ದಾರೆ. ಕನಿಷ್ಠ ರಾಜೀವ್‌ಗಾಂಧಿಯ ಜೊತೆಗೆ ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನೂ ಸೇರಿಸಿದ್ದಿದ್ದರೆ ದಿಲ್ಲಿ ಸರಕಾರದ ನಿರ್ಣಯಕ್ಕೆ ಒಂದಿಷ್ಟು ತೂಕವಿರುತ್ತಿತ್ತೋ ಏನೋ. ರಾಜೀವ್ ಗಾಂಧಿ ಕುಟುಂಬಕ್ಕೆ ಈ ದೇಶದ ಜೊತೆಗೆ ತಾಯಿ ಬೇರು ಸಂಬಂಧವಿದೆ. ಮೋತಿಲಾಲ್ ನೆಹರೂ ಸ್ವಾತಂತ್ರ ಹೋರಾಟಕ್ಕಾಗಿ ತನ್ನೆಲ್ಲ ಸಂಪತ್ತನ್ನು ತ್ಯಾಗ ಮಾಡಿದವರು. ಅವರ ಪುತ್ರ ಜವಾಹರಲಾಲ್ ನೆಹರೂ ಸ್ವಾತಂತ್ರಕ್ಕಾಗಿ ಹೋರಾಡಿದ್ದು ಮಾತ್ರವಲ್ಲ, ಸ್ವಾತಂತ್ರಾನಂತರ ಪ್ರಧಾನಿಯಾಗಿ ಈ ದೇಶದವನ್ನು ಅಭಿವೃದ್ಧಿಯತ್ತ ಒಯ್ದರು.

ನೆಹರೂ ಅವರ ಪುತ್ರಿ ಇಂದಿರಾಗಾಂಧಿ ಬಡವರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾದರು. ಬಾಂಗ್ಲಾಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಅವರು ತೋರಿಸಿದ ದಿಟ್ಟತನಕ್ಕೆ ವಿಶ್ವವೇ ಬೆರಗಾಯಿತು. ಪಂಜಾಬ್‌ನಲ್ಲಿ ಹರಡಿ ನಿಂತ ಉಗ್ರವಾದವನ್ನು ನಾಶ ಮಾಡುವಲ್ಲಿ ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಇಂದಿರಾಗಾಂಧಿ ಸಿಖ್ಖರ ಜೊತೆಗೆ ಎಂದಿಗೂ ವೈಷಮ್ಯವನ್ನು ಹೊಂದಿರಲಿಲ್ಲ. ವೈಷಮ್ಯ ಹೊಂದಿದ್ದರೆ, ಆಪರೇಷನ್ ಬ್ಲೂ ಸ್ಟಾರ್ ಬಳಿಕವೂ ತನ್ನ ಅಂಗರಕ್ಷಕರಾಗಿ ಸಿಖ್ಖರನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಇಂತಹದೊಂದು ಕೌಟುಂಬಿಕ ಹಿನ್ನೆಲೆ ರಾಜೀವ್‌ಗಾಂಧಿಯವರಿಗಿದ್ದರೆ, ಅಟಲ್ ಬಿಹಾರಿಯವರನ್ನು ಹಿಂಬಾಲಿಸುವುದು ಕ್ವಿಟ್ ಇಂಡಿಯಾ ಸಂದರ್ಭದಲ್ಲಿ ಅವರು ಬ್ರಿಟಿಷರ ಪರವಾಗಿ ಮಾಡಿದ ಕೆಲಸ ಕಾರ್ಯಗಳು ಮಾತ್ರ. ರಾಜೀವ್ ಗಾಂಧಿ ಪ್ರಧಾನಿಯಾದ ಬಳಿಕ ಯುವ ಸಮೂಹ ಮುನ್ನೆಲೆಗೆ ಬಂತು.

ಕಂಪ್ಯೂಟರ್ ಯುಗ ತೆರೆದುಕೊಂಡದ್ದು ರಾಜೀವ್‌ಗಾಂಧಿಯ ದೂರದೃಷ್ಟಿಯ ಫಲವಾಗಿ. ಇಂದು ನಾವು ಎರಡೆರಡು ಮೊಬೈಲ್‌ಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರೆ ಅದರ ಹಿಂದೆ ರಾಜೀವ್ ಗಾಂಧಿ ಕಂಡ ಕನಸಿದೆ. ‘ಮಿ. ಕ್ಲೀನ್’ ಎಂಬ ಬಿರುದಾಂಕಿತ ರಾಜೀವ್ ಅವರನ್ನು ಬೊಫೋರ್ಸ್ ಹಗರಣ ಭೂತದಂತೆ ಹಿಂಬಾಲಿಸಿತು. ಆದರೆ ಅವರ ನಿಧನಾನಂತರ ಅವರ ಪಾತ್ರವನ್ನೇ ನ್ಯಾಯಾಲಯ ನಿರಾಕರಿಸಿತು. ತನ್ನ ತಾಯಿಯಂತೆಯೇ ಅವರೂ ದೇಶಕ್ಕಾಗಿ ಪ್ರಾಣವನ್ನು ಬಲಿಕೊಟ್ಟರು. ಯುವ ಸಮೂಹಕ್ಕೆ ಆದರ್ಶವಾಗಬೇಕಾದ ರಾಜೀವ್ ಗಾಂಧಿಯ ವಿರುದ್ಧ ಕೇಜ್ರಿವಾಲ್ ನೇತೃತ್ವದ ಸರಕಾರ ಇಂತಹದೊಂದು ನಿರ್ಣಯವನ್ನು ಜಾರಿಗೊಳಿಸಿದ್ದು ಅತ್ಯಂತ ಕೆಳಮಟ್ಟದ ರಾಜಕೀಯವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರ ಭಾವನೆಗಳ ಜೊತೆಗೆ ಚೆಲ್ಲಾಡುವುದರಲ್ಲಿ ತಾನೇನೂ ಕಡಿಮೆಯಿಲ್ಲ ಎಂಬ ಸೂಚನೆಯನ್ನು ಈ ಮೂಲಕ ಕೇಜ್ರಿವಾಲ್ ದೇಶಕ್ಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News