ಉದ್ಯೋಗಿಗಳು ತೆರೆದ ಸ್ಥಳಗಳಲ್ಲಿ ನಮಾಝ್ ಮಾಡುವುದನ್ನು ತಡೆಯಿರಿ: ಕಂಪೆನಿಗಳಿಗೆ ಉ. ಪ್ರದೇಶ ಪೊಲೀಸರ ನೋಟಿಸ್

Update: 2018-12-25 09:23 GMT

ನೋಯ್ಡಾ, ಡಿ.25: ಮುಸ್ಲಿಂ ಉದ್ಯೋಗಿಗಳು ಪಾರ್ಕ್ ಸಹಿತ ಇತರ ತೆರೆದ ಸ್ಥಳಗಳಲ್ಲಿ ಶುಕ್ರವಾರದ ನಮಾಝ್ ಸಲ್ಲಿಸುವುದನ್ನು ತಡೆಯಬೇಕೆಂದು ಉತ್ತರ ಪ್ರದೇಶ ಪೊಲೀಸರು ನೋಯ್ಡಾದ ಎಲ್ಲಾ ಕಚೇರಿ ಹಾಗೂ ಕಂಪೆನಿಗಳಿಗೆ  ನೀಡಿರುವ ಸೂಚನೆ ಸಾಕಷ್ಟು ಆತಂಕ ಹಾಗೂ ವಿವಾದಕ್ಕೂ ಕಾರಣವಾಗಿದೆ.

ನೋಯ್ಡಾದ ಎಲ್ಲಾ ಪೊಲೀಸ್ ಠಾಣೆಗಳು ಕಳೆದ ವಾರ ಈ ನೋಟಿಸ್ ಜಾರಿಗೊಳಿಸಿದ್ದು, ಸೆಕ್ಟರ್ 58ರ ಕೈಗಾರಿಕಾ ಪ್ರದೇಶದಲ್ಲಿರುವ ಸಂಸ್ಥೆಗಳು ಹಾಗೂ ಕಂಪೆನಿಗಳಿಗೂ ಈ ಸೂಚನೆ ಅನ್ವಯವಾಗುವುದು ಈ ಪ್ರದೇಶದಲ್ಲಿ ಹಲವು ಖ್ಯಾತ ಐಟಿ ಕಂಪೆನಿಗಳಾದ ಎಚ್‍ಸಿಎಲ್ ಟೆಕ್ನಾಲಜೀಸ್, ಪೊಲಾರಿಸ್, ಅಡೋಬ್ ಇಂಟರ್ ನ್ಯಾಷನಲ್, ಸ್ಯಾಮ್ಸಂಗ್, ಟಿಸಿಎಸ್ ತಮ್ಮ ಕಚೇರಿಗಳನ್ನು ಹೊಂದಿವೆ.

ಉದ್ಯೋಗಿಗಳು ಈ  ಸೂಚನೆ ಉಲ್ಲಂಘಿಸಿದ್ದೇ ಆದಲ್ಲಿ ಕಂಪೆನಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಅದರಲ್ಲಿ ಹೇಳಲಾಗಿರುವುದು ಕಂಪೆನಿಗಳ ಆಡಳಿತಕ್ಕೆ ಸಾಕಷ್ಟು ಕಳವಳ ಉಂಟು ಮಾಡಿದೆ. ಈಗಾಗಲೇ ಈ ನೋಟಿಸ್ ಬಗ್ಗೆ ಸ್ಪಷ್ಟೀಕರಣ ಕೋರಿ ಕಂಪೆನಿಗಳು ಆಡಳಿತಗಳು ನೋಯ್ಡಾದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ  ಭೇಟಿಗೆ ಅವಕಾಶ ಕೋರಿವೆ. ಈ ಆದೇಶವನ್ನು ಇತರ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆಯ ಬಗ್ಗೆ ಆತಂಕವೂ ಉಂಟಾಗಿದೆ.

ಆದರೆ ನೋಯ್ಡಾ ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರಲ್ಲದೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಹಲವಾರು ಕಂಪೆನಿಗಳ ಉದ್ಯೋಗಿಗಳು ಶುಕ್ರವಾರ ಅಪರಾಹ್ನ ತೆರೆದ ಸ್ಥಳಗಳಲ್ಲಿ ನಮಾಝ್ ಸಲ್ಲಿಸುತ್ತಿರುವ ಬಗ್ಗೆ ನಮಗೆ ಹಲವಾರು ದೂರುಗಳು ಬಂದಿವೆ. ಉದ್ಯೋಗಿಗಳು ಮಸೀದಿ, ಈದ್ಗಾಗಗಳಲ್ಲಿ ನಮಾಝ್ ಸಲ್ಲಿಸಲು ಸೂಚಿಸುವಂತೆ ಆ ಕಂಪೆನಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News