ಕೇಂದ್ರ ಸರಕಾರದ ಪ್ರಸ್ತಾವಕ್ಕೆ ಗೂಗಲ್, ಫೇಸ್ ಬುಕ್, ವಾಟ್ಸ್ಯಾಪ್ ನಿಂದ ವಿರೋಧ

Update: 2018-12-25 14:30 GMT

ಹೊಸದಿಲ್ಲಿ, ಡಿ.25: ಗೂಗಲ್, ಫೇಸ್ ಬುಕ್ ಮುಂತಾದ ಅಂತರ್ಜಾಲ ಸಂಸ್ಥೆಗಳು ಸಾಮಾಜಿಕ ಜಾಲತಾಣ ಬಳಕೆದಾರರು ಏನು ಮಾಡುತ್ತಾರೆಂಬ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ನೀಡಲು ಒಪ್ಪುವ ಸಾಧ್ಯತೆಯಿಲ್ಲ ಎನ್ನಲಾಗಿದೆ.  ಕೇಂದ್ರ ಸರಕಾರ ತಾನು ರಚಿಸಿರುವ ಹೊಸ ಕರಡು ನಿಯಮಗಳನ್ನು ಸಾಮಾಜಿಕ ಜಾಲತಾಣಗಳೊಂದಿಗೆ ಹಂಚಿಕೊಂಡಿದ್ದರೂ ಕಂಪನಿಗಳು ಇವುಗಳಿಗೆ ಹಲವಾರು ಆಕ್ಷೇಪಗಳನ್ನೆತ್ತಿವೆ.

ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಸೆಬಿ ಹಾಗೂ ಗೂಗಲ್, ಫೇಸ್ ಬುಕ್, ವಾಟ್ಸ್ಯಾಪ್, ಅಮೆಝಾನ್, ಯಾಹೂ, ಟ್ವಿಟರ್, ಶೇರ್ ಚಾಟ್ ಅಧಿಕಾರಿಗಳ ಜತೆ  ಸರಣಿ ಸಭೆಗಳನ್ನು ಇತ್ತೀಚೆಗೆ ನಡೆಸಿದ್ದರೂ ಸಭೆಗಳು ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬಾರದೆ ಅಂತ್ಯಗೊಂಡಿವೆ.  ದಿ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಮತ್ತು ಇಂಟರ್ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಶ್ ಆಫ್ ಇಂಡಿಯಾ ಪ್ರತಿನಿಧಿಗಳೂ ಸಭೆಯಲ್ಲಿ ಭಾಗವಹಿಸಿದ್ದರು.

ಡಿಸೆಂಬರ್ 21ರಂದು ಸಚಿವಾಲಯವು ಇ ಸಂಸ್ಥೆಗಳ ಜತೆ ಗೌಪ್ಯ ನಿಯಮಗಳ ಕರಡು ಪ್ರತಿ ``ದಿ ಇನ್ಫಾರ್ಮೇಶನ್ ಟೆಕ್ನಾಲಜಿ [ಇಂಟರ್ ಮೀಡಿಯರೀಸ್ ಗೈಡ್ ಲೈನ್ಸ್ (ಅಮೆಂಡ್ಮೆಂಟ್ ರೂಲ್ಸ್)] 2019'' ಇದನ್ನು  ಕಳುಹಿಸಿ 2011ರ ನಿಯಮಗಳ ಬದಲು ಈ ನಿಯಮಗಳ ಜಾರಿ ಬಗ್ಗೆ  ಅಭಿಪ್ರಾಯ ಕೇಳಿತ್ತು.

ಸಂಸ್ಥೆಗಳು  ಯೂಸರ್-ಶೇರ್ಡ್ ಮಾಹಿತಿಗಳಲ್ಲಿ ಎನ್ಕ್ರಿಪ್ಶನ್ ಮುರಿಯಬೇಕೆಂದು ಈ ಪ್ರಸ್ತಾವಿತ ನಿಯಮಗಳು ಹೇಳುತ್ತವೆಯಲ್ಲದೆ ಅಂತರ್ಜಾಲ ಸಂಸ್ಥೆಗಳು ಭಾರತದಲ್ಲಿಯೇ ಕಚೇರಿಗಳು ಹಾಗೂ ದೂರು  ನಿವಾರಣಾ ಅಧಿಕಾರಿಗಳನ್ನು ಹೊಂದಬೇಕೆಂದು ಹೇಳಿವೆ.

ತಮ್ಮ ಆಕ್ಷೇಪಗಳೇನಾದರೂ ಇದ್ದಲ್ಲಿ ಅವುಗಳನ್ನು ಸಲ್ಲಿಸಲು ಕಂಪೆನಿಗಳಿಗೆ ಜನವರಿ 7ರ ತನಕ ಅವಕಾಶವಿದೆ. ಭಾರತ ಮೂಲದ ಶೇರ್‍ ಚಾಟ್ ಮುಂತಾದ ಸಂಸ್ಥೆಗಳಿಗೆ ಯಾವುದೇ ಸಮಸ್ಯೆಯಾಗದೇ ಇದ್ದರೂ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಹೊಂದಿರುವ ವಾಟ್ಸ್ಯಾಪ್ ಮತ್ತು ಟೆಲಿಗ್ರಾಂ ಸಂಸ್ಥೆಗಳಿಗೆ ಈ ನಿಯಮಗಳಿಂದ ಸಮಸ್ಯೆಯಾಗಬಹುದೆಂದು ಸಭೆಗಳಲ್ಲಿ ಹಾಜರಿದ್ದ ಮೂಲಗಳಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News