ಸರಕಾರಿ ಸಮಿತಿಯ ಸೂಚನೆ ಕಡೆಗಣಿಸಿ ಬುಲೆಟ್ ರೈಲಿಗೆ ಹಸಿರುನಿಶಾನೆ ತೋರಿಸಿದ ಫಡ್ನವೀಸ್

Update: 2018-12-25 17:40 GMT

ಹೊಸದಿಲ್ಲಿ, ಡಿ.25: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತನ್ನದೇ ಸರಕಾರದ ಸೂಚನೆಯನ್ನು ಕಡೆಗಣಿಸಿ,ಬಹುಕೋಟಿ ವೆಚ್ಚದ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ಅನುಮೋದನೆ ನೀಡಿದ್ದಾರೆಂದು ಆರ್‌ಟಿಐ ವರದಿಯೊಂದು ಬಹಿರಂಗಪಡಿಸಿದೆ.

ಈ ಮಹತ್ವಾಕಾಂಕ್ಷಿ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ನಿರ್ಧರಿಸಲು ಮಹಾರಾಷ್ಟ್ರ ಸರಕಾರವು ಫಡ್ನವೀಸ್ ನೇತೃತ್ವದಲ್ಲೇ ಉಪಸಮಿತಿಯೊಂದನ್ನು ರಚಿಸಿತ್ತು. 2017ರ ಫೆಬ್ರವರಿಯಲ್ಲಿ ಸ್ಥಾಪನೆಗೊಂಡಿದ್ದ ಈ ಸಮಿತಿಯು ಕೇವಲ ಒಂದು ಸಲ ಅಂದರೆ ಸೆಪ್ಟೆಂಬರ್ 17ರಂದು ಸಭೆ ಸೇರಿತ್ತು ಹಾಗೂ ಬುಲೆಟ್ ರೈಲು ಯೋಜನೆಗೆ ಹಸಿರು ನಿಶಾನೆ ತೋರಿಸಿತ್ತು.

ಈ ಬೃಹತ್ ವೆಚ್ಚದ ಯೋಜನೆಯ ಕಾರ್ಯಸಾಧ್ಯತೆ ಅಥವಾ ರಾಜ್ಯದ ಹಿತಾಸಕ್ತಿಗಳನ್ನು ಗಮನಿಸದೆಯೇ ಮಹಾರಾಷ್ಟ್ರ ಸರಕಾರವು ಕೇಂದ್ರದ ಒತ್ತಡಕ್ಕೆ ಮಣಿದು ಈ ಯೋಜನೆಗೆ ಅವಸರಸರವಾಗಿ ಅನುಮೋದನೆ ನೀಡಿದೆ. ವಸ್ತುಶಃ ಮಹಾರಾಷ್ಟ್ರ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲದ ಈ ಬೃಹತ್ ಯೋಜನೆಗೆ ಅನುಮೋದನೆ ನೀಡಲು ಮಹಾರಾಷ್ಟ್ರ ಸರಕಾರವು ತನ್ನದೇ ಆದೇಶಗಳನ್ನು ಕಡೆಗಣಿಸಿರುವುದು ತೀರಾ ಆಶ್ಚರ್ಯಕರವಾಗಿದೆ. ಈಗಾಗಲೇ ಸಾಲದಿಂದ ಬಸವಳಿದಿರುವ ರಾಜ್ಯದ ಅರ್ಥಿಕ ಒತ್ತಡವನ್ನು ಈ ಯೋಜನೆಯು ಇನ್ನಷ್ಟು ಹೆಚ್ಚಿಸಲಿದೆ’’ ಎಂದು ಆರ್‌ಟಿಐ ಕಾರ್ಯಕರ್ತ ಜೀತೇಂದ್ರ ಘಾಟ್ಗೆ ಹೇಳಿದ್ದಾರೆ.

ಈ ಯೋಜನೆಗೆ ಮುಂಬೈ ಮಹಾನಗರ ಪ್ರಾಂತ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ಸೇರಿದಂತೆ ಮಹಾರಾಷ್ಟ್ರ ಸರಕಾರದ ಹಲವಾರು ಇಲಾಖೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಆದರೆ ಅವುಗಳ ಅಕ್ಷೇಪವನ್ನು ತಳ್ಳಿಹಾಕಿದ ರಾಜ್ಯ ಸರಕಾರವು ಬಾಂದ್ರಾ ಕುರ್ಲಾ ಸಂಕೀರ್ಣದ ಭೂಮಿಯನ್ನು ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಟರ್ಮಿನಸ್ ನಿರ್ಮಾಣಕ್ಕೆ ಮಂಜೂರು ಮಾಡಿತ್ತು. ಇದರಿಂದ ಎಂಎಂಆರ್‌ಡಿಎ 48 ಸಾವಿರ ಕೋಟಿ ರೂ. ಆದಾಯದ ನಷ್ಟವುಂಟಾಗಲಿದೆಯೆಂದು ಅಂದಾಜಿಸಲಾಗಿದೆ.

ಬುಲೆಟ್ ರೈಲು ಯೋಜನೆಯಿಂದ ಕೇವಲ ಗುಜರಾತ್ ರಾಜ್ಯಕ್ಕೆ ಹಾಗೂ ಮುಂಬೈನಲ್ಲಿ ವಾಸಿಸುವ ಗುಜರಾತಿ ಜನತೆಗೆ ಮಾತ್ರವೇ ಪ್ರಯೋಜನವಾಗಲಿದೆ. ಆದರೆ ಮಹಾರಾಷ್ಟ್ರ ಕೂಡಾ ಈ ಯೋಜನೆಯ ವೆಚ್ಚವನ್ನು ಸರಿಸಮಾನವಾಗಿ ಭರಿಸಬೇಕಾಗಿದೆ. ಇದು ಮಹಾರಾಷ್ಟ್ರದ ತೆರಿಗೆಪಾವತಿದಾರರಿಗೆ ಮಾಡುವ ಅನ್ಯಾಯವಾಗಿದೆಯೆಂದು ಆರ್‌ಟಿಐ ಕಾರ್ಯಕರ್ತರಾದ ಜಿತೇಂದ್ರ ಘಾಟ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News