ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ

Update: 2018-12-26 05:08 GMT

ಭಾರತದ ಪ್ರತಿಮೆಗಳ ರಾಜಕೀಯ ಕೇವಲ ಈ ದೇಶಕ್ಕಷ್ಟೇ ಸೀಮಿತಗೊಳ್ಳದೆ ಅಂತರ್‌ರಾಷ್ಟ್ರೀಯಗೊಂಡಿದೆ ಎನ್ನುವುದಕ್ಕೆ ಘಾನಾದಲ್ಲಿ ಮಹಾತ್ಮಾಗಾಂಧಿಯ ಪ್ರತಿಮೆಯ ವಿರುದ್ಧ ನಡೆಯುತ್ತಿರುವ ಬೆಳವಣಿಗೆ ಉದಾಹರಣೆಯಾಗಿದೆ. ಇತ್ತೀಚೆಗೆ ಕೆಲವು ಪ್ರಾಧ್ಯಾಪಕರ ಒತ್ತಡಕ್ಕೆ ಮಣಿದು ಘಾನಾ ವಿಶ್ವವಿದ್ಯಾನಿಲಯದ ಆವರಣದಲ್ಲಿದ್ದ ಎಮ್.ಕೆ. ಗಾಂಧಿಯವರ ಪ್ರತಿಮೆಯನ್ನು ಕಿತ್ತು ಹಾಕಲಾಗಿದೆ. ಭಾರತದಲ್ಲಿ ನಡೆಯುತ್ತಿರುವ ಪ್ರತಿಮೆ ರಾಜಕೀಯದ ಇನ್ನೊಂದು ಮುಖವೇ ಘಾನಾದಲ್ಲೂ ನಡೆದಿದೆ. ಭಾರತದಲ್ಲಿ ಬೃಹತ್ ಪಟೇಲ್ ಪ್ರತಿಮೆಯನ್ನು ಯಾಕೆ ನಿರ್ಮಿಸಲಾಯಿತು ಎನ್ನುವುದು ದೇಶಕ್ಕೇ ತಿಳಿದಿದೆ. ಪಟೇಲ್‌ರನ್ನು ಮುಂದಿಟ್ಟು ನೆಹರೂ ವರ್ಚಸ್ಸನ್ನು ಎದುರಿಸುವುದು ಬಿಜೆಪಿಯ ತಂತ್ರವಾಗಿದೆ. ಆದರೆ ನೆಹರೂ ಅವರ ದೂರಗಾಮಿ ಚಿಂತನೆ, ಅವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಒಂದು ಬೃಹತ್ ಪ್ರತಿಮೆಯನ್ನು ನಿರ್ಮಿಸುವುದರ ಮೂಲಕ ಇಲ್ಲವಾಗಿಸಬಹುದು ಎನ್ನುವುದೇ ಬಿಜೆಪಿಯ ಸಂಕುಚಿತ ಮನಸ್ಥಿತಿಯನ್ನು ಹೇಳುತ್ತದೆ. ಪಟೇಲ್ ಭಾರತಕ್ಕೆ ಸೀಮಿತವಾಗಿರುವ ನಾಯಕರು. ಆದರೆ ನೆಹರೂ ವಿಶ್ವಮಟ್ಟಕ್ಕೆ ಬೆಳೆದು ನಿಂತವರು. ಅವರ ಅಲಿಪ್ತ ನೀತಿ ತೃತೀಯ ಶಕ್ತಿಯ ಉಗಮಕ್ಕೆ ಕಾರಣವಾಯಿತು. ಅಭಿವೃದ್ಧಿಯಲ್ಲಿ ಸಂಪೂರ್ಣ ಎಡವಿರುವ ಬಿಜೆಪಿ, ರಾಮ, ಶಿವಾಜಿ, ಅಟಲ್ ಮೊದಲಾದವರ ಪ್ರತಿಮೆಗಳನ್ನು ನಿರ್ಮಿಸುವ ಮೂಲಕ ಜನರನ್ನು ಓಲೈಸುವ ಹತಾಶ ಪ್ರಯತ್ನ ಮಾಡುತ್ತಿದೆ.

ಘಾನಾದಲ್ಲಿ ಗಾಂಧಿ ಪ್ರತಿಮೆಯನ್ನು ತೆಗೆಸಿರುವುದರಲ್ಲೂ ರಾಜಕೀಯ ಓಲೈಕೆಗಳಿವೆ.ಗಾಂಧೀಜಿ ಜನಾಂಗೀಯವಾದಿಯಾಗಿದ್ದರು ಎನ್ನುವುದನ್ನು ಮುಂದಿಟ್ಟುಕೊಂಡು, ಅಲ್ಲಿನ ಕರಿಯ ಸಮುದಾಯದ ಒಂದು ಗುಂಪನ್ನು ಸಂತೃಪ್ತಿ ಪಡಿಸುವ ಪ್ರಕ್ರಿಯೆಯ ಭಾಗವಾಗಿ ಗಾಂಧಿಯ ಪ್ರತಿಮೆಯನ್ನು ಕಿತ್ತು ಹಾಕಲಾಯಿತು. ಘಾನಾದ ಸಾಮಾನ್ಯ ಜನರ ಮಟ್ಟಿಗೆ ಗಾಂಧಿಯವರ ರಾಜಕೀಯ ವ್ಯಕ್ತಿತ್ವ ಯಾವುದೇ ಸಾಮ್ರಾಜ್ಯಶಾಹಿ ವರ್ಣಭೇದವಾದಿ (ರೇಸಿಸ್ಟ್)ಗಿಂತ ಭಿನ್ನವಾಗೇನಿಲ್ಲ. ಗಾಂಧೀಜಿಯ ಕುರಿತಂತೆ ಹೇಗೆ ಭಾರತದಲ್ಲಿ ಪರ ವಿರೋಧಗಳಿವೆಯೋ ಹಾಗೆಯೇ ಆಫ್ರಿಕಾದಲ್ಲೂ ಅವರ ಕುರಿತಂತೆ ಒಲವಿರುವವರು ಜೊತೆಗೆ, ಅವರನ್ನು ದ್ವೇಷಿಸುವವರು ಇದ್ದಾರೆ. ಆರೆಸ್ಸೆಸ್ ಹೇಗೆ ಗಾಂಧಿಯನ್ನು ವಿರೋಧಿಸುತ್ತದೆಯೋ ಅಷ್ಟೇ ತೀವ್ರವಾಗಿ ಅಂಬೇಡ್ಕರ್ ವಾದಿಗಳೂ ಗಾಂಧಿಯನ್ನು ವಿರೋಧಿಸುತ್ತಾರೆ. ಯಾಕೆಂದರೆ ಗಾಂಧೀಜಿ ಜಾತಿ ವ್ಯವಸ್ಥೆಯನ್ನು ಬೆಂಬಲಿಸಿದ್ದರು, ಮಲಹೊರುವಂತಹ ವ್ಯವಸ್ಥೆಯನ್ನು ಸಮರ್ಥಿಸಿದ್ದರು. ಇದೇ ಸಂದರ್ಭದಲ್ಲಿ ಗಾಂಧೀಜಿ ಈ ದೇಶಕ್ಕೆ ಕಲಿಸಿಕೊಟ್ಟ ಸತ್ಯ, ಅಹಿಂಸೆ, ಸರಳತೆ ಇತ್ಯಾದಿಗಳನ್ನು ಭಾರತ ತಿರಸ್ಕರಿಸುವುದಕ್ಕೆ ಸಾಧ್ಯವೂ ಇಲ್ಲ. ಆಫ್ರಿಕಾದಲ್ಲಿ ಈ ಹಿಂದೆಯೂ ಗಾಂಧಿ ಪ್ರತಿಮೆಯನ್ನು ವಿರೋಧಿಸಲಾಗಿದೆ. 2015ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಪ್ರತಿಮೆಗೆ ಬಿಳಿಬಣ್ಣ ಮೆತ್ತುವುದರಿಂದ ಪ್ರಾರಂಭವಾಗಿ ಇತ್ತೀಚೆಗೆ ಭಾರತದ ರಾಷ್ಟ್ರಪತಿ ಮಾಲ್ವಾಯ್‌ಗೆ ಭೇಟಿ ನೀಡಿದಾಗ ಅಲ್ಲಿ ಸ್ಥಾಪಿಸಬೇಕೆಂದಿದ್ದ ಗಾಂಧಿ ಪ್ರತಿಮೆಯನ್ನು ತಡೆಗಟ್ಟುವತನಕ ಮುಂದುವರಿದುಕೊಂಡೇ ಬಂದಿದೆ.

 ಘಾನಾದಲ್ಲಿ ಅಲ್ಲಿನ ರಾಜಕೀಯ ನಾಯಕರು ಜನಸಾಮಾನ್ಯರ ಒತ್ತಡದ ಮೇರೆಗೆ ಗಾಂಧಿ ಪ್ರತಿಮೆಯನ್ನು ತೆಗೆದಿರುವುದೇನೋ ಸರಿ. ಆದರೆ ಇಲ್ಲಿ ಒಂದು ಸೂಕ್ಷ್ಮವಿದೆ. ಅಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿದ್ದು ಸರಕಾರ ಸ್ವಯಂ ನಿರ್ಧಾರದಿಂದಲ್ಲ. ಭಾರತ ಮತ್ತು ಆ ದೇಶಗಳ ನಡುವಿನ ರಾಜತಾಂತ್ರಿಕ ಮೈತ್ರಿಯ ಭಾಗವಾಗಿ ಗಾಂಧೀಜಿಯ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಭಾರತದ ರಾಷ್ಟ್ರಪತಿ 2016ರಲ್ಲಿ ಕೈಗೊಂಡಿದ್ದ ಮೂರು ರಾಷ್ಟ್ರಗಳ ಪ್ರವಾಸದ ನೆನಪಿನ ದ್ಯೋತಕವಾಗಿ ಗಾಂಧಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಒಂದು ಸಂಕೇತ ಮಾತ್ರವಾಗಿತ್ತು. ಆ ಮೂಲಕ ಎರಡು ದೇಶಗಳು ರಾಜತಾಂತ್ರಿಕ ಸಂಬಂಧವನ್ನು ಉತ್ತಮ ಪಡಿಸುವ ಉದ್ದೇಶ ಹೊಂದಿದ್ದವು. ಭಾರತ ಮತ್ತು ಆಫ್ರಿಕಾ ದೇಶಗಳ ಪ್ರಭುತ್ವಗಳೆರಡೂ ತಮ್ಮ ಮೃದು ರಾಜತಾಂತ್ರಿಕ ನೀತಿಗೆ ಪೂರಕವಾದ ಕ್ರಮಗಳನ್ನು ಅನುಸರಿಸುತ್ತವೆ. ಆದರೆ ಸಮಯ ಬಂದಾಗ ಇದೇ ಪ್ರತಿಮೆಗಳೇ ಆಫ್ರಿಕಾದ ಪ್ರಭುತ್ವಗಳಿಗೆ ತಮ್ಮ ತಮ್ಮ ರಾಷ್ಟ್ರ ಪ್ರಭುತ್ವದ ಅಸ್ಮಿತೆಯ ರಾಜಕೀಯದಾಟಗಳಿಗೆ ಪೂರಕವಾಗಿಯೂ ಬಳಕೆಯಾಗುತ್ತವೆ. ಘಾನಾದಲ್ಲಿ ನಡೆದಿರುವ ಘಟನೆ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಇದೀಗ ಗಾಂಧಿ ಪ್ರತಿಮೆ ನೆಲಕ್ಕುರುಳುವ ಮೂಲಕ, ರಾಜತಾಂತ್ರಿಕ ಸಂಬಂಧಗಳ ಮೇಲೂ ಅದು ತನ್ನ ಪರಿಣಾಮವನ್ನು ಬೀರಲಿಲ್ಲವೇ?

ಗಾಂಧಿ ಜನಾಂಗೀಯವಾದಿ ಎಂದು ಅಲ್ಲಿನ ಪ್ರಜೆಗಳಿಗೆ ಅನ್ನಿಸಿದರೆ ಅದನ್ನು ಬೀಳಿಸುವ ಅಧಿಕಾರ ಅವರಿಗೆ ಖಂಡಿತಾ ಇದೆ. ಆದರೆ ರಾಜತಾಂತ್ರಿಕ ಸಂಬಂಧಗಳನ್ನು ಬೆಸೆಯುವ ಸಂದರ್ಭದಲ್ಲಿ ಯಾವುದೇ ಪ್ರತಿಮೆ ನಿರ್ಮಾಣ ಮಾಡುವಾಗಲೂ ಅದು ಮುಂದೆ ಜನರ ನಡುವೆ ಬೀರಬಹುದಾದ ಪರಿಣಾಮಗಳ ಬಗ್ಗೆ ಉಭಯ ಸರಕಾರಗಳೂ ಆಲೋಚಿಸುವುದು ಅತ್ಯಗತ್ಯವಾಗುತ್ತದೆ. ಒಂದು ಪ್ರತಿಮೆ ಕೇವಲ ಎರಡು ಸರಕಾರಗಳ ಮುಖ್ಯಸ್ಥರ ನಡುವಿನ ಒಪ್ಪಂದವಲ್ಲ. ಆ ಪ್ರತಿಮೆ ಆ ದೇಶದ ಜನರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತಂತೆ ಅಲ್ಲಿನ ಸರಕಾರಕ್ಕೆ ಮುಂದಾಲೋಚನೆಯಿರಬೇಕಾಗುತ್ತದೆ. ಉಭಯ ದೇಶಗಳ ಮೈತ್ರಿಗೆ ಪ್ರತಿಮೆಗಳ ಕೊಡುಕೊಳ್ಳುವಿಕೆಯ ಅನಿವಾರ್ಯವೇನೂ ಇಲ್ಲ. ಬದಲಿಗೆ ಇದರಾಚೆಗೂ ಹತ್ತುಹಲವು ದಾರಿಗಳಿವೆ. ಸೌಹಾರ್ದ ವಿನಿಮಯಗಳಿಗಾಗಿ ಪ್ರತಿಮೆಗಳಂತಹ ಸ್ಥಾವರಗಳನ್ನು ಆಯ್ಕೆ ಮಾಡಿಕೊಂಡಾಗ ಭವಿಷ್ಯದಲ್ಲಿ ಸಮಸ್ಯೆ ಎದುರಾಗುವುದು ಸಹಜವೇ ಆಗಿದೆ.

ಇದಕ್ಕೆ ಇನ್ನೊಂದು ಉದಾಹರಣೆಯಾಗಿ ಭಾರತದ ರಾಜಸ್ಥಾನದ ಹೈಕೋರ್ಟ್ ಮುಂದಿರುವ ಮನುವಿನ ಪ್ರತಿಮೆಯನ್ನು ತೆಗೆದುಕೊಳ್ಳಬಹುದು. ತಲೆ ತಲಾಂತರಗಳಿಂದ ಈ ದೇಶದ ದಲಿತರು, ಶೂದ್ರರು ಮನುವಿನ ಅಸಮಾನ ಸಿದ್ಧಾಂತದ ವಿರುದ್ಧ ಹೋರಾಡುತ್ತಾ ಬಂದರು. ಈ ದೇಶದ ಪಾಲಿಗೆ ಸ್ವಾತಂತ್ರವೆಂದರೆ ಬ್ರಿಟಿಷರನ್ನು ಓಡಿಸುವುದು ಮಾತ್ರವಾಗಿರಲಿಲ್ಲ, ಮನುವಾದಿ ಚಿಂತನೆಗಳನ್ನು ಓಡಿಸುವುದು ಕೂಡ ಸ್ವಾತಂತ್ರದ ಭಾಗವಾಗಿತ್ತು. ಮನು ಸಿದ್ಧಾಂತದ ಜಾಗದಲ್ಲಿ ಸಂವಿಧಾನ ಅಸ್ತಿತ್ವವನ್ನು ಪಡೆಯಿತು. ಆದರೆ ದುರಂತವೆಂದರೆ, ರಾಜಸ್ಥಾನದಲ್ಲಿ ಹೈಕೋರ್ಟ್ ಮುಂದೆಯೇ ಮನು ಮಹರ್ಷಿಯ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಇದರ ವಿರುದ್ಧ ದೇಶದ ದಲಿತರು ಮತ್ತು ಶೂದ್ರರು ಈಗಲೂ ಅಸಮಾಧಾನದಿಂದ ಭುಸುಗುಟ್ಟುತ್ತಲೇ ಇದ್ದಾರೆ. ಹಿಂದುತ್ವದ ವಿಸ್ಮತಿಯ ತಳಹದಿಯಲ್ಲಿ ಹೈಕೋರ್ಟ್ ಮುಂದೆ ಈ ಮನುವಿನ ಪ್ರತಿಮೆ ನಿಂತಿತು. ಆದರೆ ಈ ವಿಸ್ಮತಿ ಶಾಶ್ವತವಾಗಿ ಇರಬೇಕು ಎಂದೇನೂ ಇಲ್ಲ. ನಾಳೆ ಈ ವಿಸ್ಮತಿ ಹರಿದಾಗ ಜನರು ಒಂದು ಗೂಡಿ ಪ್ರತಿಮೆಯನ್ನು ಧ್ವಂಸಗೊಳಿಸಬಹುದು. ರಾಜಸ್ಥಾನದಲ್ಲಿ ದಲಿತ ನೇತೃತ್ವದ ಸರಕಾರವೇನಾದರೂ ಅಸ್ತಿತ್ವಕ್ಕೆ ಬಂದರೆ, ಜನಸಾಮಾನ್ಯರನ್ನು ಮೆಚ್ಚಿಸುವುದಕ್ಕಾಗಿಯೇ ಈ ಪ್ರತಿಮೆಯನ್ನು ನಾಶ ಪಡಿಸಬಹುದು. ಸಂವಿಧಾನದ ಮೇಲೆ ನಂಬಿಕೆಯಿರುವವರಿಗೆ ಈ ಪ್ರತಿಮೆ ಇಂದಿಗೂ ಒಂದು ಸವಾಲಾಗಿಯೇ ಉಳಿದಿದೆ.

ನಾಯಕರ ಚಿಂತನೆಗಳನ್ನು ಪ್ರತಿಮೆಗಳ ರೂಪದಲ್ಲಿ ಸ್ಥಾವರಗೊಳಿಸುವುದು ಅಪಾಯಕಾರಿ. ಇಂದು ನಮಗೆ ನಾಯಕನಾಗಿ ಕಂಡವನು ನಾಳೆ ಖಳನಾಯಕನಾಗಬಹುದು. ಆಗ ಪ್ರತಿಮೆ ಉರುಳುವುದಕ್ಕೆ ಹೆಚ್ಚು ಸಮಯ ಬೇಡ. ತ್ರಿಪುರದಲ್ಲಿ ಲೆನಿಲ್ ಪ್ರತಿಮೆಯನ್ನು ಉರುಳಿಸಿರುವುದನ್ನೂ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ನಾಳೆ ಮತ್ತೆ ಎಡ ಪಂಥೀಯ ಸರಕಾರ ಅಧಿಕಾರಕ್ಕೆ ಬಂದರೆ ಅಲ್ಲಿ ಉರುಳಬಹುದಾದ ಪ್ರತಿಮೆಗಳು ಯಾವುದಾಗಿರಬಹುದು ಎನ್ನುವುದನ್ನೂ ನಾವು ಈಗಲೇ ಊಹಿಸಬಹುದು. ಆ ನಿರ್ಜೀವ ಪ್ರತಿಮೆಗಳು ಏಕತೆಯನ್ನು ಸೃಷ್ಟಿಸಲಾರವು. ಬದಲಿಗೆ ಇರುವ ಏಕತೆಯನ್ನೂ ಅದು ಒಡೆದು ಹಾಕಬಹುದು. ಯಾವುದೇ ಸರಕಾರ ಈ ಪ್ರತಿಮೆಗಳ ರಾಜಕೀಯಗಳನ್ನು ನಿಲ್ಲಿಸಬೇಕು. ಪ್ರತಿಮೆಗಳಿಗಾಗಿ ವ್ಯಯಿಸುವ ಹಣವನ್ನು ಜನಸಾಮಾನ್ಯರಿಗಾಗಿ ವ್ಯಯಿಸಬೇಕು ಅಥವಾ ಆ ನಾಯಕರ ಸದ್ ಚಿಂತನೆಗಳನ್ನು ಹರಡುವುದಕ್ಕೆ ಬಳಸಬೇಕು. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎನ್ನುವ ಶರಣರ ಮಾತುಗಳನ್ನು ಈ ಸಂದರ್ಭದಲ್ಲಿ ನೆನೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News