ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬುಮ್ರಾ ಮ್ಯಾಜಿಕ್: ಸಂಕಷ್ಟದಲ್ಲಿ ಆಸಿಸ್

Update: 2018-12-28 03:54 GMT

ಮೆಲ್ಬೋರ್ನ್, ಡಿ.28: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸುವ ಲಕ್ಷಣವಿದ್ದು, ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಅದ್ಭುತ ಪ್ರದರ್ಶನದಿಂದ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿದೆ.

ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ ಆರು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಆಟ ಮುಂದುವರಿಸಿದೆ. 12 ರನ್ ಗಳಿಸಿದ ಪಿಜೆ ಕಮಿನ್ಸ್ ಹಾಗೂ ನಾಯಕ ಟಿಮ್ ಪೈನ್ (19) ಕ್ರೀಸ್‌ನಲ್ಲಿದ್ದಾರೆ.

ಗಾವಸ್ಕರ್- ಬಾರ್ಡರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್‌ನ ಮೂರನೇ ದಿನ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 443 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಆಸ್ಟ್ರೇಲಿಯಾದ ಸ್ಕೋರ್ 24 ಆಗಿದ್ದಾಗ ಭಾರತದ ವೇಗಿ ಇಶಾಂತ್ ಶರ್ಮಾ ಅರೊನ್ ಫಿಂಚ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ದೊರಕಿಸಿಕೊಟ್ಟರು. ಸ್ವಲ್ಪ ಹಿತ್ತಿನಲ್ಲೇ ಮತ್ತೊಬ್ಬ ಆರಂಭಿಕ ಆಟಗಾರ ಮಾರ್ಕ್ಯೂಸ್ ಹ್ಯಾರಿಸ್‌ಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಅಪಾಯಕಾರಿ ದಾಂಡಿಗ ಉಸ್ಮಾನ್ ಖ್ವಾಜಾ, ರವೀಂದ್ರ ಜಡೇಜಾ ಎಸೆತದಲ್ಲಿ ಮಯಾಂಕ್ ಅಗರ್‌ವಾಲ್‌ಗೆ ಕ್ಯಾಚ್ ನೀಡಿ ಔಟ್ ಆದಾಗ ತಂಡದ ಸ್ಕೋರ್ 53 ಆಗಿತ್ತು. ಈ ಹಂತದಲ್ಲಿ ಇನಿಂಗ್ಸ್ ಆಧರಿಸಿದ ಶಾನ್ ಮಾರ್ಷ್ ಅಪಾಯಕಾರಿಯಾಗುತ್ತಿದ್ದಾಗ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ ನೀಡಿದ ಬುಮ್ರಾ, ಶಾನ್ ಮಾರ್ಷ್ (19) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಭೋಜನ ವಿರಾಮ ಬಳಿಕ ಟ್ರಾವಿಸ್ ಹೆಡ್ (20) ಅವರನ್ನು ಬುಮ್ರಾ ಬೌಲ್ಡ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News