ಸಾಲಮನ್ನಾಕ್ಕೆೆ ಪರ್ಯಾಯ: ದೇಶಕ್ಕೆ ಕೇರಳ ಕಲಿಸಿದ ಪಾಠ

Update: 2018-12-28 18:49 GMT

ನಿದೀಶ್ ಎಂ. ಕೆ.

ಕೇರಳ 2006ರಲ್ಲೇ ಗಂಭೀರ ಪರಿಸ್ಥಿತಿ ಎದುರಿಸುವಂತಾಗಿತ್ತು. ವಿಚಿತ್ರವೆಂದರೆ ಕಮ್ಯುನಿಸ್ಟ್ ರಾಜಕಾರಣಿಗಳ ಪ್ರಾಬಲ್ಯವಿರುವ ರಾಜ್ಯದಲ್ಲಿ, ಕೃಷಿ ಕ್ಷೇತ್ರ ಪ್ರಮುಖವಾಗಿ ರಫ್ತು ಗಮನದ ನಗದು ಬೆಳೆಗಳಾದ ರಬ್ಬರ್ ಹಾಗೂ ಕಾಳುಮೆಣಸಿನದೇ ಬಿಗಿಹಿಡಿತ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಪಾತಾಳಕ್ಕೆ ಕುಸಿದಿತ್ತು. ಇದು ಸುಸ್ತಿ ಸಾಲ ಹೊಂದಿದ್ದ ಹಲವು ರೈತರ ಆತ್ಮಹತ್ಯೆಗೆ ಕಾರಣವಾಗಿತ್ತು. ಗ್ರಾಮೀಣ ಕೇರಳದ ಆಕ್ರಂದನ, ಕೂಗು ರಾಷ್ಟ್ರ ರಾಜಧಾನಿಯನ್ನು ತಲುಪಿತ್ತು. ಬೂಕರ್ ವಿಜೇತೆ ಲೇಖಕಿ ಅರುಂಧತಿ ರಾಯ್, ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವಾ ಪತ್ನಿಯರ ಜತೆ ರ್ಯಾಲಿ ನಡೆಸಿದ್ದರು.

ಇದು ಸ್ವತಃ ಹೋರಾಟಗಾರರು, ಕಾರ್ಮಿಕ ಪರ ಹಾಗೂ ಚಾಣಾಕ್ಷ ರಾಜಕಾರಣಿ ವಿ.ಎಸ್.ಅಚ್ಯುತಾನಂದ ನೇತೃತ್ವದ ಕಮ್ಯುನಿಸ್ಟ್ ಸರಕಾರದ ಹೊಸ ಕಾರ್ಯತಂತ್ರಕ್ಕೆ ಕಾರಣವಾಯಿತು. ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಹುದ್ದೆಗೆ ದಿಲ್ಲಿ ಮೂಲದ ಪ್ರಭಾತ್ ಪಟ್ನಾಯಕ್ ಅವರನ್ನು ಅಚ್ಯುತಾನಂದ ನೇಮಕ ಮಾಡಿದರು. ಈ ಎಡಪಂಥೀಯ ಅರ್ಥಶಾಸ್ತ್ರಜ್ಞ ಸಹಜವಾಗಿಯೇ ರಾಜ್ಯದ ಛಾಯಾ ಆರ್ಥಿಕ ಸಲಹೆಗಾರರಾದರು. ಕೇರಳ ತಲುಪಿದ ಪಟ್ನಾಯಕ್, ತಾವು ಏನಾದರೂ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದರು. ಒಂದು ಸಂವಾದದ ವೇಳೆ ಅವರ ಪತ್ನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞೆ ಉಷಾ ಪಟ್ನಾಯಕ್, ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ ಮಾದರಿಯೊಂದನ್ನು ಗಮನಕ್ಕೆ ತಂದರು. ಈ ಮಾದರಿ ಸಂಕಷ್ಟದಲ್ಲಿರುವ ರೈತರಿಗೆ ಮಹತ್ವದ ಪರಿಹಾರ ಒದಗಿಸಿತ್ತು. ಸರ್ ಚೋಟು ರಾಮ್ ಆಯೋಗದ ಸದಸ್ಯರು ಪಂಜಾಬ್‌ನಲ್ಲಿ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ, ಸಾಲದ ಬಾಧೆಯಿಂದ ಕಂಗೆಟ್ಟಿದ್ದ ರೈತರಿಂದ ಅರ್ಜಿಗಳನ್ನು ಪಡೆದು ಅವರಿಗೆ ಪರಿಹಾರ ಮಂಜೂರು ಮಾಡಿದ್ದರು.

ಬ್ರಿಟಿಷ್ ಅವಧಿಯ ಈ ವಿನೂತನ ಯೋಜನೆಯ ಅಂಶಗಳನ್ನು ಅಧ್ಯಯನ ಮಾಡಿದ ಪಟ್ನಾಯಕ್ ಹಾಗೂ ಇತರರು ಇದನ್ನು ಹೊಸ ಮಾದರಿಯಾಗಿ ಪರಿವರ್ತಿಸಿದರು. ಇದು ಕೇರಳ ರಾಜ್ಯ ರೈತರ ಸಾಲ ಪರಿಹಾರ ಆಯೋಗದ ರಚನೆಗೆ ಕಾರಣವಾಯಿತು. 2007ರ ಜನವರಿಯಲ್ಲಿ ಇದಕ್ಕೆ ಸಂಬಂಧಿಸಿದ ಕಾನೂನು ಜಾರಿಗೆ ಬಂತು.

ಪೂರ್ವಾನ್ವಯವಾದ ಈ ಕೇರಳದ ಪ್ರಾಯೋಗಿಕ ಮಾದರಿ, ದೇಶದಲ್ಲಿ ಹೆಚ್ಚುತ್ತಲೇ ಇರುವ ದೊಡ್ಡ ಮೊತ್ತದ ಸಾಲ ಮನ್ನಾ ಯೋಜನೆಗೆ ಭರವಸೆಯ ಪರ್ಯಾಯ ಕ್ರಮವಾಗಿದೆ (ಕಳೆದ ಎಪ್ರಿಲ್‌ನಿಂದೀಚೆಗೆ ಎಂಟು ರಾಜ್ಯಗಳು ಈಗಾಗಲೇ 19 ಸಾವಿರ ಕೋಟಿ ರೂಪಾಯಿ ಕೃಷಿ ಸಾಲ ಮನ್ನಾ ಮಾಡುವ ಭರವಸೆ ನೀಡಿವೆ). ಕೇರಳ ಉಪಕ್ರಮದಲ್ಲಿ ಏಳು ಮಂದಿ ರೈತರು, ಕಾನೂನು ತಜ್ಞರು, ಕೃಷಿ ಅರ್ಥಶಾಸ್ತ್ರಜ್ಞರು, ರಾಜಕಾರಣಿಗಳಿಂದ ನೇಮಕಗೊಂಡ ಸದಸ್ಯರು ಗ್ರಾಮ ಗ್ರಾಮಗಳಿಗೆ ತೆರಳಿ, ರೈತರ ಜತೆ ಮಾತುಕತೆ ನಡೆಸಿ, ಅವರ ಸಾಲದ ಮಾಹಿತಿಗಳನ್ನು ಪರಿಶೀಲಿಸಿ, ಅವರಿಗೆ ನೀಡುವ ಪರಿಹಾರ ಮೊತ್ತದ ಪ್ರಮಾಣವನ್ನು ನಿರ್ಧರಿಸಿದರು.

ಪಟ್ನಾಯಕ್ ಈ ಪರಿಹಾರ ಸೂಚಿಸುವ ವೇಳೆಗೆ ರಾಜ್ಯದಲ್ಲಿ 1,500 ಮಂದಿ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿಕ ಸಂಘಗಳು ಹೇಳಿದ್ದವು. ಆದರೆ ಅಧಿಕೃತ ಅಂಕಿ ಸಂಖ್ಯೆ ಇದಕ್ಕಿಂತ ತೀರಾ ಕಡಿಮೆ ಇತ್ತು. ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪ್ರಮಾಣ ಮಹಾರಾಷ್ಟ್ರದ ವಿದರ್ಭ ಪ್ರದೇಶಕ್ಕೆ ಹೋಲಿಸಿದರೆ ಕಡಿಮೆ; ಆದರೆ ಇಷ್ಟಾಗಿಯೂ ಈ ಸಂಖ್ಯೆ ದೊಡ್ಡ ಪ್ರಮಾಣದಲ್ಲಿತ್ತು.

ಸಾಲ ಪರಿಹಾರ ಆಯೋಗವನ್ನು ನೇಮಿಸಿದ ತಕ್ಷಣ, ಕೇಂದ್ರ ಕಚೇರಿ ತಿರುವನಂತಪುರದಲ್ಲಿ 25ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಪರಿಹಾರ ಕೋರಿ ಸಲ್ಲಿಸಿದ ಅರ್ಜಿಯ ವಿಲೇವಾರಿ ಮಾಡುವಲ್ಲಿ ನಿರತರಾದರು. ಎರಡು ವರ್ಷಗಳ ಒಳಗಾಗಿ, ರೈತರ ಆತ್ಮಹತ್ಯೆ ಗಣನೀಯವಾಗಿ ಇಳಿಯಿತು. ಇದಾಗಿ 11 ವರ್ಷ ಕಳೆದಿದ್ದು, ಸಮಸ್ಯೆ ಬಹುತೇಕ ಮಾಯವಾಗಿದೆ.

ನಿರಂತರ ತೊಡಗಿಸಿಕೊಳ್ಳುವಿಕೆ
ಯುಪಿಎ ಸರಕಾರ 2008ರಲ್ಲಿ ಘೋಷಿಸಿದ ದೊಡ್ಡ ಮೊತ್ತದ ಸಾಲಮನ್ನಾ ಪ್ಯಾಕೇಜ್ ಹಾಗೂ ರಾಜ್ಯಮಟ್ಟದಲ್ಲಿ ಕೈಗೊಂಡ ಕ್ರಮಗಳು ಪ್ರಮುಖ ಪಾತ್ರ ವಹಿಸಿದ್ದರೂ, ಇದರ ಯಶಸ್ಸಿನ ಕೀರ್ತಿ ಭಾಗಶಃ ಆಯೋಗಕ್ಕೆ ಸಲ್ಲಬೇಕು.

ಆಯೋಗ ನೀಡಿದ್ದು ಬೇಷರತ್ ಪರಿಹಾರವನ್ನಲ್ಲ. ಇದು ಸಹಕಾರ ಸಂಸ್ಥೆಗಳಿಂದ ಪಡೆದ ಸಾಲವಾಗಿರಬೇಕು. ಸಾಮಾನ್ಯವಾಗಿ ರೈತರಿಗೆ ದೊಡ್ಡ ಮೊತ್ತದ ಸಾಲವನ್ನು ಸಹಕಾರ ಸಂಸ್ಥೆಗಳು ನೀಡುತ್ತವೆ. ಅರ್ಜಿದಾರರು ಸಣ್ಣ ಅಥವಾ ಅತಿಸಣ್ಣ ರೈತರಾಗಿರಬೇಕು ಅಂದರೆ ಐದು ಎಕರೆಗಿಂತ ಕಡಿಮೆ ಜಮೀನಿನ ಮಾಲಕನಾಗಿರಬೇಕು ಅಥವಾ ಐದು ಎಕರೆಗಿಂತ ಕಡಿಮೆ ಜಮೀನನ್ನು ಕೃಷಿ ಉದ್ದೇಶಕ್ಕಾಗಿ ಭೋಗ್ಯಕ್ಕೆ ಪಡೆದಿರಬೇಕು. ಅರ್ಜಿದಾರನ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಿಂತ ಅಧಿಕ ಇರಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಆಯೋಗ ಹಲವು ತಿಂಗಳ ಕಾಲ ಹಲವು ದಿನಗಳನ್ನು ಗ್ರಾಮಗಳಲ್ಲಿ ಕಳೆಯಿತು. ಆ ಒಂದು ವರ್ಷದಲ್ಲೇ 11,354 ರೈತರು ಫಲಾನುಭವಿಗಳಾಗಿ ಇದರ ಪ್ರಯೋಜನ ಪಡೆದರು ಹಾಗೂ 11 ಸಾವಿರ ಕೋಟಿ ರೂಪಾಯಿ ಮೊತ್ತದ ಪರಿಹಾರ ಲಭ್ಯವಾಯಿತು.

ದೊಡ್ಡ ರಾಜ್ಯಗಳಿಗೆ ಹೋಲಿಸಿದರೆ ಇದು ಸೀಮಿತ ವ್ಯವಸ್ಥೆಯಾಗಿದ್ದು, ಅವುಗಳ ನಿರೀಕ್ಷೆಗೆ ಹೋಲಿಸಿದರೆ ಇದು ತೀರಾ ಕಡಿಮೆ ಇರಬಹುದು. 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಸಾಲ ಹೊಂದಿದ್ದವರಿಗೆ ನೀಡುವ ಪರಿಹಾರ ಒಂದು ಲಕ್ಷ ರೂಪಾಯಿಗೆ ಸೀಮಿತವಾಗಿತ್ತು. ಈ ಯೋಜನೆಗೆ ನಿಗದಿಯಾದ 355 ಕೋಟಿ ರೂಪಾಯಿಗಳ ಪೈಕಿ ಇದುವರೆಗೆ ಕೇವಲ 213 ಕೋಟಿ ರೂಪಾಯಿ ಮಾತ್ರ ವಿತರಣೆಯಾಗಿದೆ.

ಆಯೋಗದ ಸದಸ್ಯ ಮತ್ತು ಕೃಷಿ ತಜ್ಞ ಜೆ.ಜನಾರ್ದನನ್ ಹೇಳುವಂತೆ ‘‘ಕೃಷಿ ಬಿಕ್ಕಟ್ಟಿನ ತೀವ್ರತೆ ಕಡಿಮೆಯಾಗಿದ್ದು, ಆಯೋಗದ ಚಟುವಟಿಕೆಗಳು ಕೂಡಾ ನಿಧಾನವಾಗಿವೆ. ಆದಾಗ್ಯೂ ಇದು, ದೇಶಾದ್ಯಂತ ವಿಸ್ತರಿಸಬಹುದಾದ ಉತ್ತಮ ಮಾದರಿ.’’
ಈ ವರ್ಷದ ಆರಂಭದಲ್ಲಿ ರಾಜಸ್ಥಾನದಿಂದ ಆಗಮಿಸಿದ ತಂಡ ಕೇರಳದಲ್ಲಿ ಪ್ರವಾಸ ಕೈಗೊಂಡು, ಸಾಲ ಮನ್ನಾ ಘೋಷಣೆಗೆ ಮುನ್ನ ಈ ಮಾದರಿಯನ್ನು ಅಧ್ಯಯನ ಮಾಡಿತ್ತು.

ಸಾರಾಸಗಟಾಗಿ ಸಾಲ ಮನ್ನಾ ಮಾಡುವ ಬದಲು, ಇದು ನಿರಂತರ ಚಟುವಟಿಕೆ. ವರ್ಷವಿಡೀ ಒಬ್ಬರಲ್ಲದಿದ್ದರೆ ಒಬ್ಬರು ರೈತರ ಜತೆ ಸಂವಾದ ನಡೆಸುತ್ತಾರೆ ಹಾಗೂ ಅವರು ಎಂಥ ಕಷ್ಟದಲ್ಲಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ರಾಜ್ಯ ಇವರಿಗೆ ಹೇಗೆ ನೆರವಾಗಬಹುದು ಎಂದು ಯೋಚಿಸುತ್ತಾರೆ ಎಂದು ಜನಾರ್ದನನ್ ಹೇಳುತ್ತಾರೆ. ಈ ಸಭೆಗಳು ಅನೌಪಚಾರಿಕವಾಗಿರುತ್ತವೆ. ನಾವು ನಮ್ಮ ಕಾರ್ಯಸೂಚಿಯನ್ನು ಮೀರಿ, ರೈತರಿಗೆ ಆಗಿರುವ ಸಾಲ ಹೆಣ್ಣುಮಕ್ಕಳ ಶಿಕ್ಷಣ ಅಥವಾ ವೈದ್ಯಕೀಯ ವೆಚ್ಚದ ಕಾರಣದಿಂದ ಆಗಿದ್ದರೂ, ರೈತರಿಗೆ ಸೂಕ್ತ ಸಲಹೆಗಳನ್ನೂ ನೀಡುತ್ತೇವೆ. ಎಷ್ಟೋ ಮಂದಿಗೆ ಅವರಿಗೆ ಯಾವೆಲ್ಲ ಸವಲತ್ತುಗಳು ಲಭ್ಯ ಇವೆ ಎಂಬ ಮಾಹಿತಿಯೂ ಇಲ್ಲ. ಉದಾಹರಣೆಗೆ ನೈಸರ್ಗಿಕ ವಿಕೋಪದಿಂದ ಬೆಳೆ ಹಾನಿಯಾಗಿದ್ದರೂ, ಅದಕ್ಕೆ ಯಾವ ಪರಿಹಾರ ಸಿಗುತ್ತದೆ ಎಂಬ ಕಲ್ಪನೆ ಇಲ್ಲ. ಇಂಥ ಪ್ರಕರಣಗಳಲ್ಲಿ ನಾವು ಅವರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ ಎಂದು ವಿವರಿಸುತ್ತಾರೆ.

ಕೊಲ್ಲಂ ಜಿಲ್ಲೆಯಲ್ಲಿ ಸುಮಾರು 30 ವರ್ಷಗಳಿಂದ ಅರ್ಬನ್ ಕೋ ಅಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕೆ.ಆರ್.ಚಂದ್ರಮೋಹನ್ ಹೇಳುವಂತೆ, ಪ್ರಾಯೋಗಿಕವಾಗಿ ಸಾಲ ಪರಿಹಾರ ಆಯೋಗ, ಬ್ಯಾಂಕ್‌ಗಳ ಸಾಲ ಪರಿಹಾರ ಆಯೋಗವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಪ್ರತಿ ಸಹಕಾರ ಬ್ಯಾಂಕ್‌ಗಳಲ್ಲಿ ದೊಡ್ಡ ಮೊತ್ತದ ಸುಸ್ತಿದಾರರಿರುತ್ತಾರೆ. ರೈತರು ಹಾಗೂ ಸಾಲದಾತರ ನಡುವಿನ ಸಂಧಾನ ಮಾತುಕತೆಗಳಿಗೆ ಸರಕಾರ ಮಧ್ಯವರ್ತಿಯಾಗಿ ಸಹಕರಿಸಿ, ಅನುತ್ಪಾದಕ ಆಸ್ತಿಯ ಸಮಸ್ಯೆ ನಿವಾರಿಸಲು ನೆರವಾಗುತ್ತದೆ.

ಇದು ದೇಶಾದ್ಯಂತ ವಿಸ್ತರಿಸಬಹುದಾದ ಉತ್ತಮ ಮಾದರಿ ಎನ್ನುವುದು ಪಟ್ನಾಯಕ್ ಅವರ ಅಭಿಮತ. ಇದರ ಪ್ರಮುಖ ಅಂಶವೇ ರೈತರತ್ತ ನೋಡುವುದು. ಕೃಷಿ ಎನ್ನುವುದು ರೈತರ ಜೀವನಾಧಾರ. ಅವರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸದಿದ್ದರೆ, ಅವರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವ ಸ್ಥಿತಿಯಲ್ಲೂ ಇಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಸಾಲ ಪರಿಹಾರ ಆಯೋಗವು ಬಸವನಹುಳ ವೇಗದಲ್ಲಿ ಕಾರ್ಯನಿರ್ವಹಿಸಿದರೂ, ಬಹುತೇಕ ರೈತರಿಗೆ ಪ್ರಯೋಜನ ಒದಗಿಸಿದೆ ಎನ್ನುವುದು ಪಾಲಕ್ಕಾಡ್ ಜಿಲ್ಲೆಯ ಭತ್ತ ಬೆಳೆಗಾರ ಪಿ.ವಿ.ರಾಜಪ್ಪನ್ ಅವರ ಸ್ಪಷ್ಟ ಅಭಿಪ್ರಾಯ. 2008ರ ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ರಾಜಪ್ಪನ್, ಈ ಕಾರಣದಿಂದಾಗಿ ಸಹಕಾರ ಬ್ಯಾಂಕ್‌ಗೆ 50 ಸಾವಿರ ರೂಪಾಯಿ ಸುಸ್ತಿ ಬಾಕಿ ಉಳಿಸಿಕೊಳ್ಳಬೇಕಾಯಿತು.

‘‘ಮೂವರು ರೈತರು ಸೇರಿ ಸಾಲ ಪಡೆದಿದ್ದೆವು. ಆದರೆ ಬರಗಾಲದಿಂದಾಗಿ ನಾವು ಮರುಪಾವತಿಸಲು ಸಾಧ್ಯವಾಗಲಿಲ್ಲ. ಬಾಕಿ ಮೊತ್ತವೂ ಸೇರಿಕೊಂಡು ಇದು ಕ್ರಮೇಣ 80 ಸಾವಿರ ರೂಪಾಯಿಗೆ ಹೆಚ್ಚಿತು. ಆ ವೇಳೆಗೆ ನಮಗೆ ಆಯೋಗದ ಬಗ್ಗೆ ತಿಳಿಯಿತು. ಒಂದು ಸಭೆಯಲ್ಲಿ ಆಯೋಗದ ಮುಂದೆ ನಾವು ಮನವಿ ಸಲ್ಲಿಸಿದೆವು. ಇದರಿಂದಾಗಿ ಬ್ಯಾಂಕ್‌ನ ಸುಸ್ತಿವಸೂಲಿ ಪ್ರಕ್ರಿಯೆ ಸ್ಥಗಿತಗೊಂಡಿತು. ಎರಡು ತಿಂಗಳ ಹಿಂದಷ್ಟೇ ನಿಮ್ಮ ಎಲ್ಲ ಸಾಲ ಮನ್ನಾ ಮಾಡಲಾಗಿದೆ ಎಂಬ ಪತ್ರ ಸಿಕ್ಕಿದೆ ಎಂದು ವಿವರಿಸುತ್ತಾರೆ.

ಮನ್ನಾ ಮಾಡಿರುವುದು ಸಣ್ಣ ಮೊತ್ತವಾದರೂ, ಅದು ರೈತರಿಗೆ ದೊಡ್ಡ ಪ್ರಯೋಜನ ಒದಗಿಸಿದೆ. ಈ ಪ್ರಕ್ರಿಯೆ ವೇಗ ಪಡೆಯಬೇಕು ಎನ್ನುವುದಷ್ಟೇ ನನ್ನ ಬಯಕೆ ಎಂದು ರಾಜಪ್ಪನ್ ಹೇಳುತ್ತಾರೆ.


www.livemint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News