ಕೆಸುವಿನ ಗಡ್ಡೆ ನೀಡುವ ಆರೋಗ್ಯಲಾಭಗಳು ನಿಮಗೆ ಗೊತ್ತೇ?

Update: 2018-12-29 10:52 GMT

ಕೆಸುವಿನ ಗಡ್ಡೆ ತರಕಾರಿಯ ರೂಪದಲ್ಲಿ ಬಳಕೆಯಾಗುತ್ತಿದ್ದು,ಹೆಚ್ಚಿನವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಎಷ್ಟು ರುಚಿಕರವಾಗಿದೆಯೋ ಅಷ್ಟೇ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಇದು ನಮ್ಮ ಶರೀರಕ್ಕೆ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಇಂತಹ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿ ಇಲ್ಲಿದೆ.......

►ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸುತ್ತದೆ

  ಕಡಿಮೆ ಗ್ಲೈಸೆಮಿಕ್ಸ್ ಇಂಡೆಕ್ಸ್ ಹೊಂದಿರುವ ಆಹಾರಗಳನ್ನು ಸೇವಿಸುವವರಲ್ಲಿ ಹೃದ್ರೋಗಗಳು ಮತ್ತು ಮಧುಮೇಹಕ್ಕೆ ಗುರಿಯಾಗುವ ಅಪಾಯಗಳು ಕಡಿಮೆಯಾಗಿರುತ್ತವೆ. ಕೆಸುವಿನ ಗಡ್ಡೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ್ನು ಹೊಂದಿರುವುದರಿಂದ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನೆರವಾಗುತ್ತದೆ. ಇದರಿಂದಾಗಿ ದೈಹಿಕ ಕ್ಷಮತೆ ಹೆಚ್ಚುತ್ತದೆ ಮತ್ತು ಇನ್ಸುಲಿನ್ ಉತ್ಪಾದನೆಯಿಂದಾಗಿ ಸಕ್ಕರೆಯ ಮಟ್ಟವು ದಿಢೀರ್ ಆಗಿ ಕುಸಿಯುವುದಿಲ್ಲ. ಕೆಸುವಿನ ಗಡ್ಡೆಯು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸಲೂ ನೆರವಾಗುತ್ತದೆ. ಅದು ಲಿಪಿಡ್‌ಗಳು ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ತಗ್ಗಿಸಿ,ನಿಯಂತ್ರಿಸುವ ಮೂಲಕ ದೇಹದ ತೂಕವನ್ನು ಇಳಿಸಲು ಮತ್ತು ಬಾಡಿ ಮಾಸ್ ಇಂಡೆಕ್ಸ್‌ನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅದು ಪ್ರೋಟಿನ್,ಕ್ಯಾಲ್ಸಿಯಂ,ಥಿಯಾಮಿನ್,ರಂಜಕ,ರಿಬೊಫ್ಲಾವಿನ್,ನಿಯಾಸಿನ್ ಮತ್ತು ಸಿ ವಿಟಾಮಿನ್‌ನಂತಹ ಪೌಷ್ಟಿಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಚರ್ಮದ ಮತ್ತು ಶರೀರದ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ.

►ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಕೆಸುವಿನ ಗಡ್ಡೆಯು ಸಮೃದ್ಧ ನಾರನ್ನು ಒಳಗೊಂಡಿರುವುದರಿಂದ ಅದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಲವಿಸರ್ಜನೆಯನ್ನು ಸರಾಗವಾಗಿಸುತ್ತದೆ. ಈ ಗಡ್ಡೆಯ ಸೇವನೆಯಿಂದ ಆಗಾಗ್ಗೆ ಹಸಿವಿನ ಬಾಧೆ ತಟ್ಟುವುದಿಲ್ಲ.

►ಕ್ಯಾನ್ಸರ್ ತಡೆಯಲು ನೆರವಾಗುತ್ತದೆ

ಕೆಸುವಿನ ಗಡ್ಡೆಯಲ್ಲಿರುವ ಪಾಲಿಫಿನಾಲ್‌ಗಳು ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾಗಿದ್ದು ಕ್ಯಾನ್ಸರ್‌ತಡೆಯುವುದು ಸೇರಿದಂತೆ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತವೆ. ಇವುಗಳಲ್ಲಿ ಪ್ರಮುಖವಾಗಿರುವ ಕ್ವರ್ಸೆಟಿನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

►ಹೃದ್ರೋಗಗಳನ್ನು ತಡೆಯುತ್ತದೆ

 ಈ ಗಡ್ಡೆಯು ಪಿಷ್ಟ ಮತ್ತು ನಾರನ್ನು ಉತ್ತಮ ಪ್ರಮಾಣದಲ್ಲಿ ಒಳಗೊಂಡಿದೆ. ಹೃದ್ರೋಗಗಳನ್ನು ತಡೆಯಲು ನಾರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಕೆಟ್ಟ ಕೊಲೆಸ್ಟ್ರಾಲ್ ಆಗಿರುವ ಎಲ್‌ಡಿಎಲ್‌ನ್ನು ಕಡಿಮೆ ಮಾಡುವಲ್ಲಿ ನಾರು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಲ್ಲಿರುವ ಪ್ರತಿರೋಧಕ ಪಿಷ್ಟವು ಹಲವಾರು ಚಯಾಪಚಯ ಲಾಭಗಳನ್ನು ನೀಡುತ್ತದೆ. ಅದು ಶರೀರದಲ್ಲಿ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸಿ,ಆಹಾರ ಸೇವನೆಯ ತೃಪ್ತಿಯನ್ನು ನೀಡುತ್ತದೆ ಮತ್ತು ಕೊಬ್ಬು ಸಂಗ್ರಹವಾಗುವುದನ್ನು ತಗ್ಗಿಸುತ್ತದೆ. ಇದರಿಂದ ಯಾವುದೇ ತಡೆಗಳಿಲ್ಲದೆ ರಕ್ತಪರಿಚಲನೆಯು ಸರಾಗಗೊಳ್ಳುತ್ತದೆ,ತನ್ಮೂಲಕ ಹೃದಯವನ್ನು ಆರೋಗ್ಯಯುತ ವಾಗಿರಿಸುತ್ತದೆ.

►ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

 ಕೆಸುವಿನ ಗಡ್ಡೆಯು ಉತ್ಕರ್ಷಣ ನಿರೋಧಕ,ಸೂಕ್ಷ್ಮಜೀವಾಣು ನಿರೋಧಕದಂತಹ ಗುಣಗಳ ಜೊತೆಗೆ ಫಿನಾಲಿಕ್ ಸಂಯುಕ್ತಗಳು,ಗ್ಲೈಕೋಅಲ್ಕನಾಯ್ಡೆಗಳು ಮತ್ತು ಫೈಟಿಕ್ ಆ್ಯಸಿಡ್‌ಗಳಂತಹ ಜೈವಿಕಸಕ್ರಿಯ ಸಂಯುಕ್ತಗಳನ್ನು ಹೊಂದಿರುವುದರಿಂದ ಶರೀರದಲ್ಲಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲಿರುವ ವಿಟಾಮಿನ್ ಸಿ ಶರೀರವನ್ನು ಸದೃಢಗೊಳಿಸುತ್ತದೆ ಮತ್ತು ಶೀತ,ಕೆಮ್ಮುಗಳಂತಹ ಸಾಮಾನ್ಯ ಅನಾರೋಗ್ಯಗಳ ವಿರುದ್ಧ ಶರೀರಕ್ಕೆ ರಕ್ಷಣೆಯನ್ನು ನೀಡುತ್ತದೆ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್‌ಗಳನ್ನು ತಟಸ್ಥಗೊಳಿಸುವ ಮೂಲಕ ಜೀವಕೋಶಗಳಿಗೆ ಹಾನಿಯನ್ನು ತಡೆಯುತ್ತವೆ.

►ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ

ಕೆಸುವಿನ ಗಡ್ಡೆಯಲ್ಲಿರುವ ವಿಟಾಮಿನ್ ಎ,ವಿಟಾಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತವೆ. ಅವು ಹಾನಿಗೀಡಾದ ಚರ್ಮದ ಕೋಶಗಳಿಗೆ ಪುನಃಶ್ಚೇತನ ನೀಡುತ್ತವೆ,ನಿರಿಗೆಗಳನ್ನು ಕಡಿಮೆ ಮಾಡುತ್ತವೆ.

►ಶರೀರದ ತೂಕವನ್ನು ಇಳಿಸಲು ನೆರವಾಗುತ್ತದೆ

 ಕೆಸುವಿನ ಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ನಾರು ಊಟದ ಬಳಿಕ ಹೊಟ್ಟೆ ತುಂಬಿದ ಅನುಭವವನ್ನುಂಟು ಮಾಡುತ್ತದೆ ಮತ್ತು ಪದೇ ಪದೇ ಹಸಿವೆಯಾಗುವುದನ್ನು ತಡೆಯುತ್ತದೆ. ಹೀಗಾಗಿ ಆಗಾಗ್ಗೆ ಕುರುಕಲು ತಿಂಡಿಗಳು,ಜಂಕ್ ಫುಡ್‌ಗಳನ್ನು ತಿನ್ನುವ ತುಡಿತವುಂಟಾಗುವುದಿಲ್ಲ ಮತ್ತು ಇದು ಸಹಜವಾಗಿಯೇ ಶರೀರದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ನೆರವಾಗುತ್ತದೆ.

►ವಯಸ್ಸಾಗುವುದನ್ನು ತಡೆಯುತ್ತದೆ

ಈ ಗಡ್ಡೆಯಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳಿಗೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಮೃತಕೋಶಗಳನ್ನು ನಿವಾರಿಸಿ ಹೊಸ ಕೋಶಗಳನ್ನು ಭರ್ತಿ ಮಾಡುವ ಮೂಲಕ ಶರೀರವನ್ನು ದೀರ್ಘಕಾಲ ಯುವಾವಸ್ಥೆಯಲ್ಲಿ ಇರಿಸುತ್ತವೆೆ. ಅವು ಕೆಲವು ಕಾಯಿಲೆಗಳ ವಿರುದ್ಧ ಹೋರಾಡುವ ಜೊತೆಗೆ ಅಲ್ಟ್ರಾ ವಯೊಲೆಟ್ ಕಿರಣಗಳ ವಿರುದ್ಧ ರಕ್ಷಣೆಯನ್ನೂ ನೀಡುತ್ತವೆ.

►ಸ್ನಾಯುಗಳ ಚಯಾಪಚಯವನ್ನು ಹೆಚ್ಚಿಸುತ್ತದೆ

ಕೆಸುವಿನ ಗಡ್ಡೆಯಲ್ಲಿ ಮ್ಯಾಗ್ನೀಷಿಯಂ ಮತ್ತು ವಿಟಾಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ಚಯಾಪಚಯವನ್ನು ಹೆಚ್ಚಿಸಿ ಸ್ನಾಯುಗಳ ಸಾಮಾನ್ಯ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುತ್ತವೆ. ಮ್ಯಾಗ್ನೀಷಿಯಂ ದೈಹಿಕ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ. ಇದರಲ್ಲಿರುವ ಕಾರ್ಬೊಹೈಡ್ರೇಟ್‌ಗಳು ತೀವ್ರ ವ್ಯಾಯಾಮದ ಬಳಿಕ ಸ್ನಾಯುಗಳು ಚೇತರಿಸಕೊಳ್ಳುವಂತೆ ಮಾಡುವ ಜೊತೆಗೆ ಶರೀರಕ್ಕೆ ಶಕ್ತಿಯನ್ನು ನೀಡುತ್ತವೆ.

►ಉತ್ತಮ ದೃಷ್ಟಿಗೆ ನೆರವಾಗುತ್ತದೆ

ಕೆಸುವಿನ ಗಡ್ಡೆಯಲ್ಲಿರುವ ವಿಟಾಮಿನ್ ಎ ಮತ್ತು ಕ್ರಿಪ್ಟೊಷಾಂಥಿನ್ ಕಣ್ಣಿನ ದೃಷ್ಟಿಯನ್ನು ಮತ್ತು ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News