ಅಪ್ರಾಪ್ತ ವಯಸ್ಕ ಬಾಲಕಿಯ ಅತ್ಯಾಚಾರ ಪ್ರಕರಣ: ಡಿಎಂಕೆ ಮಾಜಿ ಶಾಸಕನಿಗೆ 10 ವರ್ಷ ಜೈಲುಶಿಕ್ಷೆ

Update: 2018-12-29 17:37 GMT

ಚೆನ್ನೈ, ಡಿ.29: 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಶಿಕ್ಷಾರ್ಹ ನರಹತ್ಯೆ ಪ್ರಕರಣದಲ್ಲಿ ಡಿಎಂಕೆ ಮುಖಂಡ ಹಾಗೂ ಮಾಜಿ ಶಾಸಕ ಎಂ.ರಾಜಕುಮಾರ್‌ಗೆ ವಿಶೇಷ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2012ರಲ್ಲಿ ಕೇರಳ ರಾಜ್ಯದ ನಿವಾಸಿಯಾಗಿರುವ ಬಾಲಕಿ ಶಾಸಕ ರಾಜಕುಮಾರ್ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಕೆಲ ದಿನಗಳ ಬಳಿಕ ಈಕೆ ತೀವ್ರ ಅಸ್ವಸ್ಥಗೊಂಡ ಕಾರಣ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು. ಈಕೆಯ ಅಂತ್ಯಸಂಸ್ಕಾರ ಇಡುಕ್ಕಿಯಲ್ಲಿ ನಡೆದ ಸಂದರ್ಭ ಮೃತದೇಹದಲ್ಲಿನ ಗಾಯದ ಗುರುತನ್ನು ಕಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದ್ದು ರಾಜಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು ಶಾಸಕ ರಾಜಕುಮಾರ್, ಆತನ ಕಾರಿನ ಚಾಲಕ ಮಹೇಂದ್ರನ್ ಹಾಗೂ ಇತರ ಐವರ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣಾ ಹಂತದಲ್ಲಿ ಓರ್ವ ಆರೋಪಿ ಮೃತಪಟ್ಟಿದ್ದ. ಪ್ರಕರಣದ ಕೆಲವು ಸಾಕ್ಷಿಗಳು ಪ್ರತಿಕೂಲ ಸಾಕ್ಷಿ ನುಡಿದಿದ್ದರೂ, ಮರಣೋತ್ತರ ವರದಿ ಪ್ರಬಲ ಪುರಾವೆಯಾಗಿದ್ದ ಕಾರಣ ಅಪರಾಧ ದೃಢಪಟ್ಟು, ರಾಜಕುಮಾರ್ ಹಾಗೂ ದುಷ್ಕೃತ್ಯಕ್ಕೆ ಸಹಕರಿಸಿದ್ದ ಜೈಶಂಕರ್ ಎಂಬಾತನನು್ನ ಅಪರಾಧಿಗಳೆಂದು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News