ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕನಿಷ್ಠ ವಿದ್ಯಾರ್ಹತೆ ಅಗತ್ಯ ಕೈಬಿಡಲು ರಾಜಸ್ಥಾನ ಸರಕಾರದ ನಿರ್ಧಾರ

Update: 2018-12-29 17:37 GMT

ಜೈಪುರ,ಡಿ.29: ರಾಜಸ್ಥಾನದಲ್ಲಿ ಅಧಿಕಾರದ ಗದ್ದುಗೆಯನ್ನೇರಿರುವ ಕಾಂಗ್ರೆಸ್ ಪಕ್ಷವು ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕನಿಷ್ಠ ವಿದ್ಯಾರ್ಹತೆ ಹೊಂದಿದವರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡುವ ಹಿಂದಿನ ವಸುಂಧರಾ ರಾಜೇ ಸರಕಾರದ ನಿರ್ಧಾರವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ಮಸೂದೆಯೊಂದನ್ನು ಅದು ಶೀಘ್ರವೇ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಿದೆ.

2015ರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸುವ ಮೂಲಕ ರಾಜಸ್ಥಾನವು ದೇಶದಲ್ಲಿ ಇಂತಹ ಕ್ರಮ ಕೈಗೊಂಡ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಭ್ಯರ್ಥಿಗಳು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ಹೊಂದಿರುವುದನ್ನು ಕೂಡ ಅದು ಕಡ್ಡಾಯಗೊಳಿಸಿತ್ತು.

ಶಿಕ್ಷಣವನ್ನು ಕೇಸರೀಕರಣ ಮುಕ್ತಗೊಳಿಸುವುದು ಮತ್ತು ಸರಕಾರಿ ಸಂಸ್ಥೆಗಳು ಹೊರಡಿಸುವ ಎಲ್ಲ ಸುತ್ತೋಲೆಗಳಿಂದ ಆರೆಸ್ಸೆಸ್ ಸಿದ್ಧಾಂತಿ ದೀನದಯಾಳ ಉಪಾಧ್ಯಾಯರ ಚಿತ್ರವಿರುವ ಲಾಂಛನವನ್ನು ತೆಗೆದುಹಾಕುವುದು ಸೇರಿದಂತೆ ಹಿಂದಿನ ಸರಕಾರದ ಹಲವು ಕ್ರಮಗಳನ್ನು ರದ್ದುಗೊಳಿಸಲು ಸಹ ಅಶೋಕ೵ ಗೆಹ್ಲೋಟ್ ನೇತೃತ್ವದ ಸರಕಾರವು ನಿರ್ಧರಿಸಿದೆ. ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚಿನ ಆದ್ಯತೆಯನ್ನು ನೀಡಲೂ ಅದು ನಿರ್ಧರಿಸಿದೆ.

ಶಾಲಾ ವಿದ್ಯಾರ್ಥಿಗಳಿಗೆ ಕೇಸರಿ ಬಣ್ಣದ ಸೈಕಲ್‌ಗಳನ್ನು ವಿತರಿಸುವ ಮತ್ತು ರಾಜ್ಯಾದ್ಯಂತ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಜಾರಿಗೊಳಿಸುವ ರಾಜೇ ಸರಕಾರದ ನಿರ್ಧಾರಗಳನ್ನೂ ಗೆಹ್ಲೋಟ್ ಸರಕಾರವು ಪುನರ್‌ಪರಿಶೀಲಿಸಲಿದೆ.

ಚರಿತ್ರೆ ಮತ್ತು ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳು ಹೆಚ್ಚಿನ ಕೇಸರೀಕರಣಕ್ಕೊಳಗಾಗಿದ್ದು,ಮಹಾತ್ಮಾ ಗಾಂಧಿಯವರ ಕುರಿತ ಪ್ರಸ್ತಾವಗಳನ್ನು ತೀವ್ರವಾಗಿ ಕಡಿಮೆ ಮಾಡಿ ಹಿಂದುತ್ವ ಸಿದ್ಧಾಂತಿ ವಿನಾಯಕ ಸಾವರ್ಕರ್ ಅವರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿತ್ತು. ಅಲ್ಲದೆ 11ನೇ ತರಗತಿಯ ಪಠ್ಯಪುಸ್ತಕದಲ್ಲಿ ಕಾಂಗ್ರೆಸ್ ಪಕ್ಷವನ್ನು ‘ಬ್ರಿಟಿಷ್ ಸಾಮ್ರಾಜ್ಯದಿಂದ ಪೋಷಿತ ಮಗು’ ಎಂದು ಬಣ್ಣಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News