ಚರ್ಮದ ಕುರಿತು ಈ 7 ಸುಳ್ಳುಗಳನ್ನು ನಂಬುವುದನ್ನು ನಿಲ್ಲಿಸಿ

Update: 2018-12-30 15:50 GMT

ಚರ್ಮದ ಕಾಳಜಿಯ ವಿಷಯ ಬಂದಾಗ ನಾವೆಲ್ಲ ಇತರರ ಸಲಹೆಗಳಿಗೆ ಮೊರೆ ಹೋಗುತ್ತೇವೆ. ಅದು ಸೌಂದರ್ಯತಜ್ಞರಾಗಿರಲಿ,ಟಿವಿ ಅಥವಾ ಆನ್‌ಲೈನ್ ಜಾಹೀರಾತು ಆಗಿರಲಿ,ದೂಸರಾ ವಿಚಾರ ಮಾಡದೇ ಅವುಗಳನ್ನು ನಂಬುತ್ತೇವೆ ಮತ್ತು ವ್ಯರ್ಥ ಫಲಿತಾಂಶಕ್ಕಾಗಿ ದುಡ್ಡು ವ್ಯಯಿಸುತ್ತೇವೆ. ನಮ್ಮ ಚರ್ಮದ ಕುರಿತು ಹಲವಾರು ಮಿಥ್ಯೆಗಳು ಹರಿದಾಡುತ್ತಿವೆ. ಅಂತಹ ಕೆಲವು ಮಿಥ್ಯೆಗಳು ಮತ್ತು ಸತ್ಯ ಇಲ್ಲಿವೆ.....

► ಚಳಿಗಾಲದಲ್ಲಿ ಸನ್‌ ಸ್ಕ್ರೀನ್ ಅಗತ್ಯವಿಲ್ಲ

ಇದು ಹೆಚ್ಚಿನವರು ಗಟ್ಟಿಯಾಗಿ ನಂಬಿಕೊಂಡಿರುವ ಚರ್ಮದ ಆರೋಗ್ಯದ ಕುರಿತ ಅತ್ಯಂತ ಸಾಮಾನ್ಯ ಮಿಥ್ಯೆಗಳಲ್ಲೊಂದಾಗಿದೆ ಮತ್ತು ಇದೇ ಕಾರಣದಿಂದ ಅಂತಹವರು ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಬಳಸುವುದಿಲ್ಲ. ಆದರೆ ಆಗಸದಲ್ಲಿ ಮೋಡಗಳಿದ್ದ ದಿನಗಳಲ್ಲೂ ಸೂರ್ಯನ ಅಲ್ಟ್ರಾ ವಯಲೆಟ್‌ ವಿಕಿರಣಗಳು ಭೂಮಿಯನ್ನು ತಲುಪುವುದರಿಂದ ಅವುಗಳಿಂದ ರಕ್ಷಣೆ ಪಡೆಯಲು ಆಗಲೂ ನೀವು ಸನ್‌ಸ್ಕ್ರೀನ್ ಬಳಸಲೇಬೇಕು. ಹಾನಿಕಾರಕ ಅಲ್ಟ್ರಾ ವಯಲೆಟ್-ಎ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಬಹುಬೇಗ ಚರ್ಮಕ್ಕೆ ವಯಸ್ಸಾಗುತ್ತದೆ ಮತ್ತು ಪಿಗ್ಮೆಂಟೇಷನ್ ಅಥವಾ ವರ್ಣಕತೆಯುಂಟಾಗುತ್ತದೆ. ಅಲ್ಟ್ರಾ ವಯಲೆಟ್-ಬಿ ಕಿರಣಗಳು ಚರ್ಮವನ್ನು ಕಂದುಬಣ್ಣಕ್ಕೆ ತಿರುಗಿಸುತ್ತವೆ.

► ಚರ್ಮವನ್ನು ಎಷ್ಟು ಗಟ್ಟಿಯಾಗಿ ಉಜ್ಜುತ್ತೀರೋ ಅಷ್ಟು ಒಳ್ಳೆಯದು

ಇದು ಸತ್ಯವಲ್ಲ. ನೀವು ಮುಖವನ್ನು ಬಲವಾಗಿ ತಿಕ್ಕಿಕೊಂಡಾಗ ಅದು ಚರ್ಮದಲ್ಲಿಯ ರಕ್ಷಕ ತೈಲಗಳನ್ನು ತೆಗೆದುಹಾಕುತ್ತದೆ ಮತ್ತು ಇದು ಚರ್ಮಕ್ಕೆ ಹಾನಿಯಾಗುವ ಅಪಾಯಕ್ಕೆ ಕಾರಣವಾಗುತ್ತದೆ. ಹೀಗಾಗಿ ನೀವು ಎಷ್ಟು ಗಟ್ಟಿಯಾಗಿ ಚರ್ಮವನ್ನು ಉಜ್ಜುತ್ತೀರೋ ಚರ್ಮಕ್ಕೆ ಹಾನಿಯೂ ಅಷ್ಟೇ ತೀವ್ರವಾಗಿರುತ್ತದೆ. ಹೀಗಾಗಿ ಯಾವಾಗಲೂ ಚರ್ಮವನ್ನು ಮೃದುವಾಗಿ ಉಜ್ಜಿಕೊಳ್ಳಿ. ಉಜ್ಜಿ ಚರ್ಮದ ಮೇಲಿನ ಪದರಗಳನ್ನು ನಿವಾರಿಸುವುದರಿಂದ ಅಗತ್ಯವಿರುವ ತೇವಾಂಶವು ನಷ್ಟವಾಗುತ್ತದೆ ಮತ್ತು ಚರ್ಮವು ಸೋಂಕಿಗೊಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ.

► ದುಬಾರಿ ಚರ್ಮ ಆರೋಗ್ಯ ಉತ್ಪನ್ನಗಳು ಅತ್ಯುತ್ತಮವಾಗಿರುತ್ತವೆ

  ಇದು ಪ್ರತಿಯೊಬ್ಬರೂ ಅಂಧರಾಗಿ ಅನುಸರಿಸುವ ಇನ್ನೊಂದು ಮಿಥ್ಯೆಯಾಗಿದೆ. ಆದರೆ ಇದು ಸತ್ಯವಲ್ಲ. ಇಂತಹ ಉತ್ಪನ್ನವನ್ನು ಖರೀದಿಸುವ ಮುನ್ನ ಅದರಲ್ಲಿನ ಘಟಕಗಳ ಪಟ್ಟಿಯನ್ನು ವಿವರವಾಗಿ ಪರಿಶೀಲಿಸಿ ಮತ್ತು ನಮ್ಮ ಜೇಬಿಗೆ ಹಾಗೂ ಅಗತ್ಯಗಳಿಗೆ ಸೂಕ್ತವಾದುದನ್ನೇ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಚರ್ಮದ ವಿಧ ಮತ್ತು ಸಮಸ್ಯೆಯನ್ನು ಆಧರಿಸಿ ಎಂತಹ ಉತ್ಪನ್ನವನ್ನು ಖರೀದಿಸಬೇಕು ಎಂಬ ಬಗ್ಗೆ ತಜ್ಞವೈದ್ಯರ ಸಲಹೆಯನ್ನು ಪಡೆಯಬಹುದಾಗಿದೆ. ಯಾವಾಗಲೂ ವಿವಿಧ ಉತ್ಪನ್ನಗಳನ್ನು ಹೋಲಿಸಿ,ನಿಮ್ಮ ಅಗತ್ಯಕ್ಕೆ ಅತ್ಯಂತ ಸೂಕ್ತವಾಗಿರುವುದನ್ನೇ ಖರೀದಿಸಿ.

► ಎಸ್‌ಪಿಎಫ್ ಹೆಚ್ಚಿದ್ದಷ್ಟೂ ಬಿಸಿಲಿನಿಂದ ಹೆಚ್ಚಿನ ರಕ್ಷಣೆ ದೊರೆಯುತ್ತದೆ

ಇದು ಸತ್ಯವಲ್ಲ. ಒಂದು ನಿರ್ದಿಷ್ಟ ಮಟ್ಟದ ನಂತರ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್(ಎಸ್‌ಪಿಎಫ್) ಹೆಚ್ಚಿನ ಲಾಭವನ್ನು ನೀಡುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಕನಿಷ್ಠ 30 ರಷ್ಟಿರುವ ಎಸ್‌ಪಿಎಫ್‌ನ್ನು ಬಳಸುವುದರಿಂದ ಶೇ.70ರಷ್ಟು ಅಲ್ಟ್ರಾ ವಯಲೆಟ್-ಬಿ ಕಿರಣಗಳನ್ನು ತಡೆಗಟ್ಟಬಹುದು. ಅಲ್ಲದೆ ಬಿಸಿಲಿನಲ್ಲಿ ಹೋಗುವಾಗ ಸನ್‌ಸ್ಕ್ರೀನ್ ಲೇಪಿಸಿಕೊಳ್ಳುವುದು ಮುಖ್ಯವಾಗಿದೆ ಮತ್ತು ಹೊರಗಿರುವಾಗ ಚರ್ಮಕ್ಕೆ ನಿರಂತರ ರಕ್ಷಣೆ ಪಡೆಯಲು ಪ್ರತಿ ಮೂರು ಗಂಟೆಗಳಿಗೊಮ್ಮೆ ಅದನ್ನು ಮರುಲೇಪಿಸಿಕೊಳ್ಳುವುದು ಒಳ್ಳೆಯದು.

► ಬ್ಯಾಕ್ಟೀರಿಯಾ ನಿರೋಧಕ ಸಾಬೂನು ಚರ್ಮಕ್ಕೆ ಒಳ್ಳೆಯದು

 ಚರ್ಮವನ್ನು ಸ್ವಚ್ಛ ಮತ್ತು ಆರೋಗ್ಯಯುತವಾಗಿ ಇರಿಸುವಲ್ಲಿ ಇಂತಹ ಸಾಬೂನು ನೆರವಾಗದಿರಬಹುದು ಎನ್ನುವುದು ವಾಸ್ತವ ಸಂಗತಿಯಾಗಿದೆ. ನಮ್ಮ ಚರ್ಮದಲ್ಲಿ ಬ್ಯಾಕ್ಟೀರಿಯಾಗಳು ಇದ್ದೇ ಇರುತ್ತವೆ ಮತ್ತು ಯಾವುದೇ ಸಮಯದಲ್ಲಿಯೂ ಚರ್ಮವನ್ನು ಬ್ಯಾಕ್ಟೀರಿಯಾಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವಿಲ್ಲ. ವಾಸ್ತವದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಸಾಬೂನು ಬ್ಯಾಕ್ಟೀರಿಯಾಗಳಿಗೆ ಅಂತಹ ಸಾಬೂನಿಗೆ ಪ್ರತಿರೋಧಕ ಶಕ್ತಿಯನ್ನು ನೀಡಬಹುದು ಮತ್ತು ಇದು ಇನ್ನಷ್ಟು ಹಾನಿಯನ್ನುಂಟು ಮಾಡುತ್ತದೆ. ಇಂತಹ ಸಾಬೂನು ಬಳಸಲು ನೀವು ಉದ್ದೇಶಿಸಿದ್ದರೆ ನಿಮ್ಮ ಚರ್ಮದ ಸ್ಥಿತಿಗೆ ಯಾವ ಸಾಬೂನು ಸೂಕ್ತ ಎನ್ನುವುದರ ಬಗ್ಗೆ ತಜ್ಞವೈದ್ಯರಿಂದ ಸಲಹೆ ಪಡೆದುಕೊಳ್ಳಿ.

► ಚರ್ಮದಲ್ಲಿ ತೈಲಾಂಶವಿದ್ದರೆ ಮಾಯಿಶ್ಚರೈಸರ್ ಅಗತ್ಯವಿಲ್ಲ

 ಇದು ಸಂಪೂರ್ಣವಾಗಿ ಸತ್ಯವಲ್ಲ.ನಿಮ್ಮ ಚರ್ಮದಲ್ಲಿ ಎಣ್ಣೆಯ ಅಂಶವಿದ್ದರೂ ನಿಮಗೆ ಮಾಯಿಶ್ಚರೈಸರ್ ಅಗತ್ಯವಾಗಬಹುದು,ಏಕೆಂದರೆ ಹೆಚ್ಚಿನ ಕ್ಲೀನ್ಸರ್‌ಗಳು ನಿಮ್ಮ ಚರ್ಮದಲ್ಲಿಯ ನೈಸರ್ಗಿಕ ತೈಲಗಳನ್ನು ತೆಗೆಯುವುದರಿಂದ ಅದರ ತೇವವನ್ನು ಕಾಯ್ದುಕೊಳ್ಳಲು ಮಾಯಿಶ್ಚರೈಸರ್‌ನ್ನು ನೀವು ಬಳಸಬೇಕಾಗುತ್ತದೆ.

► ಎಣ್ಣೆಯಂಶದ ಆಹಾರಗಳ ಸೇವನೆ ಮತ್ತು ಮುಖವನ್ನು ತೊಳೆಯದಿರುವುದು ಮೊಡವೆಗಳಿಗೆ ಕಾರಣ

ಚರ್ಮ ಆರೋಗ್ಯ ಉತ್ಪನ್ನಗಳ ಬಳಕೆ,ನಿಯಮಿತವಾಗಿ ಮುಖವನ್ನು ತೊಳೆಯದಿರುವುದು ಅಥವಾ ಮಸಾಲೆ ಮತ್ತು ಎಣ್ಣೆ ಹೆಚ್ಚಾಗಿರುವ ಆಹಾರಗಳ ಸೇವನೆ ಮೊಡವೆಗಳಿಗೆ ಕಾರಣ ಎನ್ನುವುದು ಹೆಚ್ಚಿನವರ ನಂಬಿಕೆಯಾಗಿದೆ. ಆದರೆ ಇದು ಪೂರ್ಣವಾಗಿ ಸತ್ಯವಲ್ಲ. ಮೊಡವೆಯು ಹಾರ್ಮೋನ್‌ಗಳ ಅಸಮತೋಲನದಿಂದ ಉಂಟಾಗುವ ಚರ್ಮದ ಸಮಸ್ಯೆಯಾಗಿದೆ. ಬಾಹ್ಯ ಕಾರಣಗಳು ಅದನ್ನು ತೀವ್ರಗೊಳಿಸಿಬಹುದು. ಮೊಡವೆಗೆ ಹಲವಾರು ಕಾರಣಗಳಿರುವುದರಿಂದ ಕೇವಲ ಎಣ್ಣೆಯಂಶದ ಆಹಾರಗಳು ಅಥವಾ ಮುಖವನ್ನು ತೊಳೆಯದಿರುವುದನ್ನೇ ದೂರುವುದು ಸರಿಯಲ್ಲ. ಅಲ್ಲದೆ ಕೆಲವು ಬಗೆಯ ಆಹಾರಗಳು ಮೊಡವೆಗಳನ್ನುಂಟು ಮಾಡುತ್ತವೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News