ಬಾಂಗ್ಲಾ: ಹಿಂಸೆಯ ನಡುವೆ ಬಿರುಸಿನ ಮತದಾನ

Update: 2018-12-30 17:23 GMT

► ದೇಶಾದ್ಯಂತ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತ

ಢಾಕಾ, ಡಿ.30: ಬಾಂಗ್ಲಾದೇಶದ ಸಂಸತ್ ಚುನಾವಣೆಗೆ ರವಿವಾರ ಬಿರುಸಿನ ಮತದಾನವಾಗಿದೆ. ಹಲವೆಡೆ ಹಿಂಸಾಚಾರದ ಘಟನೆಗಳು ನಡೆದಿದಿದ್ದರೂ, ದೇಶಾದ್ಯಂತ ಭಾರೀ ಸಂಖ್ಯೆಯ ಮತದಾರರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬಾಂಗ್ಲಾದ ವಿವಿಧೆಡೆ ಭುಗಿಲೆದ್ದ ಚುನಾವಣಾ ಸಂಬಂಧಿ ಹಿಂಸೆಗಳಲ್ಲಿ ಇಂದು ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ. ಅಂತಾರಾಷ್ಟ್ರೀಯ ಗಮನಸೆಳೆದಿರುವ ಈ ಚುನಾವಣೆಯಲ್ಲಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಆಡಳಿತಾರೂಢ ಅವಾಮಿಲೀಗ್ ಹಾಗೂ ಖಲೀದಾ ಜಿಯಾ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ(ಬಿಎನ್‌ಪಿ) ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿದೆ.

ಇಂದು ಬೆಳಗ್ಗೆ 8:00 ಗಂಟೆಗೆ ಬಾಂಗ್ಲಾದ್ಯಂತ ಮತದಾನ ಆರಂಭಗೊಂಡಿತ್ತು. ಪ್ರಧಾನಿ ಶೇಖ್ ಹಸೀನಾ ಅವರು ಢಾಕಾದ ಮತಗಟ್ಟೆಯೊಂದಲ್ಲಿ ಪ್ರಪ್ರಥಮ ಮತದಾರರಾಗಿ ತನ್ನ ಹಕ್ಕು ಚಲಾಯಿಸಿದರು. ಈ ಕ್ಷೇತ್ರದಲ್ಲಿ ಅವರ ಸೋದರಳಿಯ ಹಾಗೂ ಅವಾಮಿ ಪಕ್ಷದ ನಾಯಕ ಫಝ್ಲೆ ನೂರ್ ತಪೊಶ್ ಸ್ಪರ್ಧಿಸಿದ್ದಾರೆ.

ಮತದಾನದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಹಸೀನಾ, ‘‘ಚುನಾವಣೆಗಳಲ್ಲಿ ನಮ್ಮ ಪಕ್ಷದ ವಿಜಯದ ಬಗ್ಗೆ ನನಗೆ ಸದಾ ಭರವಸೆಯಿದೆ ಹಾಗೂ ನನ್ನ ಜನತೆಯ ಮೇಲೆ ನನಗೆ ತುಂಬು ವಿಶ್ವಾಸವಿದೆ. ಭವಿಷ್ಯದಲ್ಲಿ ಉತ್ತಮ ಜೀವನವನ್ನು ಪಡೆಯಲು ಅವರು ನಮ್ಮನ್ನು ಆಯ್ಕೆ ಮಾಡಲಿದ್ದಾರೆ ಂದು ನಾನು ನಂಬಿದ್ದೇನೆ’ ಎಂದು ಹಸೀನಾ ಮತಚಲಾಯಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ನೌಕಾಲಿ-3ರ ಮತಗಟ್ಟೆಯೊಂದರಲ್ಲಿ ದುಷ್ಕರ್ಮಿಗಳು ಮತದಾನಕ್ಕೆ ಸಂಬಂಧಪಟ್ಟ ಎಲ್ಲಾ ಸಾಧನ-ಸಲಕರಣೆಗಳನ್ನು ಕೊಂಡೊಯ್ದದ್ದರಿಂದ ಅಲ್ಲಿ ಮತದಾನವನ್ನು ರದ್ದುಪಡಿಸಲಾಗಿದೆ.

 ಚುನಾವಣೆಯ ಹಿನ್ನೆಲೆಯಲ್ಲಿ ಬಾಂಗ್ಲಾದ್ಯಂತ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಮಧ್ಯಾಹ್ನದಿಂದ ಮತ್ತೆ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಒದಗಿಸಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ.

 ದೇಶಾದ್ಯಂತ ಶಾಲಾಕಾಲೇಜುಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸ ಲಾಗಿದ್ದು, ದೇಶದಾದ್ಯಂತ ವಿವಿಧೆಡೆ ಮತದಾರರು ಮತದಾನ ಆರಂಭಕ್ಕೆ ಮುನ್ನವೇ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಕಂಡುಬಂದಿತ್ತು.

ರಂಗಮತಿ ಜಿಲ್ಲೆಯ ಕಾವ್‌ಖಾಲಿಯಲ್ಲಿ ಅವಾಮಿ ಲೀಗ್ ಹಾಗೂ ಬಿಎನ್‌ಪಿ ಕಾರ್ಯಕರ್ತರ ನಡುವೆ ನಡೆದ ಹೊಡೆದಾಟದಲ್ಲಿ ಅವಾಮಿ ಲೀಗ್‌ನ ನಾಯಕರೊಬ್ಬರು ಹತ್ಯೆಯಾಗಿದ್ದಾರೆ ಹಾಗೂ ಇತರ 10 ಮಂದಿ ಗಾಯಗೊಂಡಿದ್ದಾರೆ.

ಚತ್ರೊಗ್ರಾಮ್‌ನಲ್ಲಿ ನಡೆದ ಚುನಾವಣಾ ಹಿಂಸಾಚಾರದಲ್ಲಿ ಓರ್ವ ಬಿಎನ್‌ಪಿ ಕಾರ್ಯಕರ್ತ ಸಾವನ್ನಪ್ಪಿದ್ದರೆ, ರಾಜ್‌ಶಾಹಿಯಲ್ಲಿ ಅವಾಮಿ ಲೀಗ್‌ನ ಬೆಂಬಲಿಗರೊಬ್ಬರು ಮೃತಪಟ್ಟಿರುವುದಾಗಿ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

ಚುನಾವಣಾ ಪ್ರಕ್ರಿಯೆಯ ಸುಗಮನಿರ್ವಹಣೆಗೆ ದೇಶಾದ್ಯಂತ ಸಾವಿರಾರು ಮಂದಿ ಸೈನಿಕರು ಸೇರಿದಂತೆ 6 ಲಕ್ಷಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಲಂಚದ ಆರೋಪಗಳ ಹಿನ್ನೆಲೆಯಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ಖಲೀದಾ ಜಿಯಾ ಅನುಭವಿಸುತ್ತಿದ್ದಾರೆ. ಬಾಂಗ್ಲಾ ಸಂಸತ್‌ನ 300 ಕ್ಷೇತ್ರಗಳ ಪೈಕಿ 299 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದ್ದು, 1848 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಭಾರೀ ಗಮಸೆಳೆದಿರುವ ಬಾಂಗ್ಲಾ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಶೇಖ್ ಹಸೀನಾ ವಾಜೇದ್ ಅವರು ಅವರು ನಾಲ್ಕನೆ ಅವಧಿಗೆ ಪುನಾರಾಯ್ಕೆ ಕೋರಿ ಸ್ಪರ್ಧಿಸುತ್ತಿದ್ದರೆ, ಅವರ ಬದ್ಧ ಎದುರಾಳಿ ಬಿಎನ್‌ಪಿ ನಾಯಕಿ ಖಲೀದಾ ಜಿಯಾ ಅವರು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ 5 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅನಿಶ್ಚಿತ ರಾಜಕೀಯ ಬದುಕನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News