ಭಾರತೀಯ ಯಾತ್ರಿಕರಿಗೆ ವೀಸಾ ರಹಿತ ಪ್ರವಾಸ: ಪಾಕ್ ಪ್ರಸ್ತಾವನೆ

Update: 2018-12-30 17:31 GMT

ಇಸ್ಲಾಮಾಬಾದ್, ಡಿ.29: ಕರ್ತಾರ್‌ಪುರ ರಸ್ತೆ ಕಾರಿಡಾರ್ ಯೋಜನೆಯಡಿ ಭಾರತೀಯ ಸಿಖ್ಖ್ ಯಾತ್ರಿಕರಿಗೆ ಪಾಕಿಸ್ತಾನಕ್ಕೆ ವೀಸಾ ರಹಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಪಾಕ್ ಸರಕಾರವು ಭಾರತಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.

ಕರ್ತಾರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದ 14 ಪ್ರಮುಖ ಪ್ರಸ್ತಾವನೆಗಳನ್ನೊಳಗೊಂಡ 59 ಪುಟಗಳ ದಾಖಲೆಯನ್ನು ಇಸ್ಲಾಮಾಬಾದ್ ಹೊಸದಿಲ್ಲಿಗೆ ಸಲ್ಲಿಸಿರುವುದಾಗಿ, ಪಾಕ್ ರಾಜತಾಂತ್ರಿಕ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ‘‘ಎಕ್ಸ್‌ಪ್ರೆಸ್ ನ್ಯೂಸ್ ಟಿವಿ’’ ರವಿವಾರ ವರದಿ ಮಾಡಿದೆ.

ಕರ್ತಾರ್‌ಪುರ ರಸ್ತೆ ಕಾರಿಡಾರ್ ಮೂಲಕ ಪ್ರಯಾಣಿಸುವ ಭಾರತೀಯರಿಗೆ ಪಾಕಿಸ್ತಾನದ ಮುಕ್ತ ಪ್ರವೇಶ ನೀಡಲಾಗುವುದು ಹಾಗೂ ಉಭಯದೇಶಗಳ ಗಡಿಗಳಲ್ಲಿ ಭದ್ರತಾ ತಪಾಸಣಾ ಠಾಣೆಗಳನ್ನು ಸ್ಥಾಪಿಸುವಂತೆ ಪ್ರಸ್ತಾವನಾ ಪತ್ರದಲ್ಲಿ ಭಾರತವನ್ನು ಒತ್ತಾಯಿಸಿದೆ.

ಕನಿಷ್ಠ 15 ಮಂದಿ ಸದಸ್ಯರಿರುವ ಯಾತ್ರಿಕ ತಂಡಗಳಿಗೆ ಈ ಸೌಲಭ್ಯ ಲಭ್ಯವಿರುವುದು ಹಾಗೂ ಅವರಿಗೆ ಪಾಕಿಸ್ತಾನವು ವಿಶೇಷ ಅನುಮತಿಪತ್ರಗಳನ್ನು ವಿತರಿಸಲಿದೆಯೆಂದು ವರದಿ ಹೇಳಿದೆ.

ನವೆಂಬರ್ 28ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದಲ್ಲಿನ ಕಾರಿಡಾರ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಕಾರಿಡಾರ್ ಯೋಜನೆಯ ಮೂಲಕ ಪಾಕ್‌ನ ಕರ್ತಾರ್‌ಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರವನ್ನು, ಭಾರತದ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಗುರುದ್ವಾರದ ಜೊತೆ ಸಂಪರ್ಕಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News