ಸಿರಿಯ: ಸೇನಾ ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸಲು ರಶ್ಯ-ಟರ್ಕಿ ನಿರ್ಧಾರ

Update: 2018-12-30 17:33 GMT

ಮಾಸ್ಕೊ, ಡಿ.30: ಸಿರಿಯದಿಂದ ಅಮೆರಿಕ ಸೇನೆಯ ನಿರ್ಗಮನದ ದಿಢೀರ್ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ರಶ್ಯ ಹಾಗೂ ಟರ್ಕಿಗಳು, ಯುದ್ಧಗ್ರಸ್ತ ಆ ದೇಶದಲ್ಲಿ ಇನ್ನು ಮುಂದೆ ಸೇನಾ ಕಾರ್ಯಾಚರಣೆಗಳನ್ನು ಸಮನ್ವಯದಿಂದ ನಡೆಸಲು ನಿರ್ಧರಿಸಿವೆ.

ಡೊನಾಲ್ಡ್ ಟ್ರಂಪ್‌ರ ಈ ನಡೆಯ ಬೆನ್ನಲ್ಲೇ ಕುರ್ದಿಶ್ ಪಡೆಗಳಿಗೆ ಬೆಂಬಲವಾಗಿ ಶುಕ್ರವಾರ ಸಿರಿಯನ್ ಪಡೆಗಳನ್ನು ನಿಯೋಜಿಸಲಾಗಿದೆ. ಟರ್ಕಿ ಸೈನ್ಯದ ದಾಳಿ ಬೆದರಿಕೆಯನ್ನು ಎದುರಿಸುತ್ತಿರುವ ಕುರ್ದ್ ಬಂಡುಕೋರರಿಗೆ, ಅಮೆರಿಕದ ಪಡೆಗಳು ಈತನಕ ಬೆಂಬಲ ನೀಡುತ್ತಾ ಬಂದಿದ್ದವು.

ಕುರ್ದ್ ಪಡೆಗಳಿಗೆ ಬೆಂಬಲವಾಗಿ ಸಿರಿಯ ಸೇನೆಯ ನಿಯೋಜನೆಯನ್ನು ರಶ್ಯವು ಸ್ವಾಗತಿಸಿದೆಯಾದರೂ, ಅದರ ಜೊತೆಗಾರನಾದ ಟರ್ಕಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

 ಅಮೆರಿಕದ ನಿರ್ಗಮನದ ಬಳಿಕ ನೂತನ ಬದಲಾದ ನೂತನ ಪರಿಸ್ಥಿತಿಯಲ್ಲಿ ಸಮನ್ವಯತೆಯಿಂದ ಸೇನಾ ಕಾರ್ಯಾಚರಣೆಯನ್ನು ನಡೆಸಲು ರಶ್ಯ ಹಾಗೂ ಟರ್ಕಿಯ ಸೇನಾ ಪ್ರತಿನಿಧಿಗಳು ಅಂತಿಮವಾಗಿ ಸಿರಿಯದಲ್ಲಿ ಭಯೋತ್ಪಾದಕರ ಬೆದರಿಕೆಯನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ ತಿಳುವಳಿಕಾ ಒಪ್ಪಂದವನ್ನು ಏರ್ಪಡಿಸಿಕೊಂಡಿದ್ದಾರೆ ಎಂದು ರಶ್ಯದ ವಿದೇಶಾಂಗ ಸಚಿವ ಸರ್ಗೆಯಿ ಲಾವ್ರೊವ್ ತಿಳಿಸಿದ್ದಾರೆ.

 ಸಿರಿಯದಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ರಶ್ಯ ಹಾಗೂ ಟರ್ಕಿ ಸಮನ್ವಯತೆಯಿಂದ ನಡೆಸಲಿವೆ. ಅಂತರ್ಯುದ್ದದಿಂದಾಗಿ ದೇಶದ ತೊರೆದಿರುವ ಸಿರಿಯ ನಾಗರಿಕರನ್ನು ಮರಳಿ ತಾಯ್ನಾಡಿಗೆ ಕರೆಸಿಕೊಳ್ಳುವ ಯೋಜನೆಯ ಬಗ್ಗೆಯೂ ಅವು ಚರ್ಚಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News