ಕ್ರಿಮಿನಲ್‌ಗಳ ಕೈಯಲ್ಲಿ ಉತ್ತರಪ್ರದೇಶ

Update: 2018-12-31 05:09 GMT

ಒಂದು ಕಾಲವಿತ್ತು. ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳು ಕ್ರಿಮಿನಲ್‌ಗಳ ಅಟ್ಟಹಾಸ ಕಾರಣಗಳಿಂದಾಗಿ ‘ಜಂಗಲ್ ರಾಜ್’ ಎಂದು ಗುರುತಿಸಲ್ಪಡುತ್ತಿದ್ದವು. ರೈಲುಗಳೊಳಗೆ ನುಗ್ಗಿ ದರೋಡೆ, ಹೆದ್ದಾರಿ ದರೋಡೆ ಇತ್ಯಾದಿಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ರಾತ್ರಿಯ ಹೊತ್ತು ಜನ ಸಾಮಾನ್ಯರು ಓಡಾಡುವಂತಹ ಪರಿಸ್ಥಿತಿಯೇ ಇದ್ದಿರಲಿಲ್ಲ. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೂ ಕೆಲವು ಕಾರಣಗಳಿಗಾಗಿ ಕುಖ್ಯಾತಿಯನ್ನು ಪಡೆದಿತ್ತು. ಶ್ರೀಸಾಮಾನ್ಯರು ಪೊಲೀಸ್ ಸ್ಟೇಷನ್‌ಗೆ ತೆರಳಿದರೆ, ಜೀವ ಸಹಿತ ಮರಳುವ ಯಾವ ಭರವಸೆಯೂ ಇದ್ದಿರಲಿಲ್ಲ. ಪೊಲೀಸ್ ಅಧಿಕಾರಿಗಳು ಮೇಲ್ಜಾತಿಯ ಜಮೀನ್ದಾರರ ನಿಯಂತ್ರಣದಲ್ಲಿದ್ದರು. ಒಂದೆಡೆ ಕ್ರಿಮಿನಲ್‌ಗಳಿಗೆ ಮಗದೊಂದೆಡೆ ಪೊಲೀಸರಿಗೆ ಹೆದರುತ್ತಾ ಬದುಕಬೇಕಾದ ಸ್ಥಿತಿ ನಾಗರಿಕರದ್ದಾಗಿತ್ತು. ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ.

ಒಂದು ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಶ್ರೀಸಾಮಾನ್ಯರು ಕ್ರಿಮಿನಲ್‌ಗಳಿಗೆ ಹೆದರಬೇಕಾದ ಸನ್ನಿವೇಶವಿದ್ದರೆ, ಇಂದು ಪೊಲೀಸರು ಕೂಡ ಕ್ರಿಮಿನಲ್‌ಗಳಿಗೆ ಹೆದರಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ. ಅಖ್ಲಾಕ್‌ರಂತಹ ಅಮಾಯಕನನ್ನು ದುಷ್ಕರ್ಮಿಗಳು ದನದ ಮಾಂಸದ ಹೆಸರಿನಲ್ಲಿ ಕೊಂದು ಹಾಕುತ್ತಿರುವಾಗ ಅದಕ್ಕೆ ವೌನ ಸಾಕ್ಷಿಯಾಗಿದ್ದ ಪೊಲೀಸರೇ ಇದೀಗ ದುಷ್ಕರ್ಮಿಗಳ ಗುರಿಯಾಗಿದ್ದಾರೆ. ಇದೊಂದು ರೀತಿ ನರಭಕ್ಷಕ ಹುಲಿಯ ಕತೆಯಂತಾಗಿದೆ. ಮನುಷ್ಯರ ರಕ್ತದ ರುಚಿ ಹಿಡಿದವರಿಗೆ ಸಾಮಾನ್ಯ ನಾಗರಿಕನಾದರೇನು? ಪೊಲೀಸರಾದರೇನು? ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆಯ ಸಂಪೂರ್ಣ ನಿಯಂತ್ರಣವನ್ನು ಸಂಘಪರಿವಾರದ ಗೂಂಡಾಗಳು ಕೈಗೆತ್ತಿಕೊಂಡಿದ್ದಾರೆ ಎನ್ನುವುದಕ್ಕೆ ಉದಾಹರಣೆಯಾಗಿ ಇನ್ನೊಬ್ಬ ಪೊಲೀಸ್ ಸಿಬ್ಬಂದಿಯ ಹತ್ಯೆಯಾಗಿದೆ.

ಬುಲಂದ್ ಶಹರ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಕೊಚ್ಚಿ ಕೊಂದು ಹಾಕಿದ ಘಟನೆ ತನಿಖೆಯ ಹಂತದಲ್ಲಿರುವಾಗಲೇ, ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಭಾಗವಹಿಸಿ ಮರಳುತ್ತಿದ್ದ ಗುಂಪೊಂದು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಕಲ್ಲು ತೂರಿ ಕೊಂದು ಹಾಕಿದ್ದಾರೆ. ಘಟನೆಯ ಕುರಿತಂತೆ ಮುಖ್ಯಮಂತ್ರಿಯಿಂದ ಯಾವುದೇ ಹೇಳಿಕೆ ಈವರೆಗೆ ಹೊರ ಬಿದ್ದಿಲ್ಲ. ಉತ್ತರ ಪ್ರದೇಶದ ಬುಲಂದ್ ಶಹರ್‌ನಲ್ಲಿ ಪೊಲೀಸ್ ಅಧಿಕಾರಿಯನ್ನು ಬರ್ಬರವಾಗಿ ಕೊಚ್ಚಿ ಕೊಂದು ಹಾಕಿರುವುದರ ಮುಂದುವರಿದ ಭಾಗವಾಗಿದೆ ಪೊಲೀಸ್ ಪೇದೆಯ ಹತ್ಯೆ. ಈ ಮೂಲಕ ಕ್ರಿಮಿನಲ್‌ಗಳು ಉತ್ತರ ಪ್ರದೇಶದಲ್ಲಿ ಪೊಲೀಸ್ ಇಲಾಖೆಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ವಿಪರ್ಯಾಸವೆಂದರೆ ಇವರು ಬರೇ ಕ್ರಿಮಿನಲ್‌ಗಳಾಗಿದ್ದಿದ್ದರೆ ಪೊಲೀಸರು ಯಾವ ದಾಕ್ಷಿಣ್ಯವೂ ಇಲ್ಲದೆ ಗೋಲಿಬಾರ್ ನಡೆಸಿ ಬೀದಿ ನಾಯಿಯನ್ನು ಕೊಂದು ಹಾಕಿದಂತೆ ಕೊಂದು ಬಿಡುತ್ತಿದ್ದರು. ಈ ಹಿಂದೆ ದಲಿತರು ಪ್ರತಿಭಟನೆ ನಡೆಸಿದಾಗ ಯಾವ ಮಾನವೀಯತೆಯೂ ಇಲ್ಲದೆ ಗುಂಡಿಕ್ಕಿ ಕೊಂದು ಹಾಕಿದ ಇತಿಹಾಸವಿರುವ ಪೊಲೀಸರಿಗೆ, ತಮ್ಮ ಮೇಲೆ ಕ್ರಿಮಿನಲ್‌ಗಳು ಹಲ್ಲೆ ನಡೆಸಿದಾಗ ಪ್ರತಿ ಗೋಲಿಬಾರ್ ನಡೆಸಲು ಕಲಿಸಿ ಕೊಡಬೇಕಾಗಿಲ್ಲ. ಆದರೆ ಅವರು ಉತ್ತರ ಪ್ರದೇಶದಲ್ಲಿ ಅಸಹಾಯಕರಾಗಿದ್ದಾರೆ. ಯಾಕೆಂದರೆ ಪೊಲೀಸರನ್ನು ಹತೈಗೈದವರು ಬರೇ ಕ್ರಿಮಿನಲ್‌ಗಳಲ್ಲ. ಅವರು ಸಂಸ್ಕೃತಿ ರಕ್ಷಕರ ವೇಷದಲ್ಲಿರುವ ರಾಜಕೀಯ ಕಾರ್ಯಕರ್ತರೂ ಹೌದು. ಎಲ್ಲಕ್ಕಿಂತ ಮುಖ್ಯವಾಗಿ ಆ ರಾಜ್ಯದ ಮುಖ್ಯಮಂತ್ರಿಯ ವೌನ ಸಮ್ಮತಿಯ ಜೊತೆಗೆ ಅವರು ಈ ಕೃತ್ಯಗಳನ್ನು ಎಸಗುತ್ತಿದ್ದಾರೆ.

ಪೊಲೀಸ್ ಇಲಾಖೆ ಇವರ ವಿರುದ್ಧ ಕ್ರಮ ತೆಗೆದುಕೊಂಡದ್ದೇ ಆದಲ್ಲಿ, ಅದು ಪರೋಕ್ಷವಾಗಿ ರಾಜ್ಯದ ಮುಖ್ಯಮಂತ್ರಿಯ ವಿರುದ್ಧವೇ ಕ್ರಮ ಕೈಗೊಂಡಂತೆ. ಈ ಕಾರಣದಿಂದಲೇ ಕ್ರಿಮಿನಲ್‌ಗಳಿಗೆ ತಕ್ಕ ಶಾಸ್ತಿ ಮಾಡುವುದಿರಲಿ, ತಮ್ಮ ಜೀವ ಉಳಿಸಿಕೊಳ್ಳುವುದೇ ಅಲ್ಲಿನ ಪೊಲೀಸರಿಗೆ ಆದ್ಯತೆಯ ವಿಷಯವಾಗಿದೆ. ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚುವುದಕ್ಕೆ ಇದು ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಇಂದು ಪೊಲೀಸರು ಆರೋಪಿಗಳ ಜೊತೆಗೆ ಆತ್ಮೀಯ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗಿದೆ. ಯಾಕೆಂದರೆ ದುಷ್ಕರ್ಮಿಗಳ ಬೆನ್ನಿಗೆ ರಾಜಕೀಯ ಶಕ್ತಿ ನಿಂತಿದೆ. ತಮ್ಮ ಮೂಗಿನ ನೇರಕ್ಕಿಲ್ಲದ, ಕಾನೂನಿನ ಮೇಲೆ ಗೌರವವಿರುವ ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುವ ಶಕ್ತಿ ಇವರಿಗಿದೆ. ಅದೂ ಸಾಧ್ಯವಾಗಲಿಲ್ಲ ಎಂದರೆ ಬುಲಂದ್ ಶಹರ್‌ನಲ್ಲಿ ನಡೆದಂತೆ ಬರ್ಬರವಾಗಿ ಕೊಂದು ಹಾಕುತ್ತಾರೆ ಮತ್ತು ಈ ಕೊಲೆಗಾರರಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರೇ ಕ್ಲೀನ್‌ಚಿಟ್ ನೀಡುತ್ತಾರೆ. ಘಟನೆ ‘ಒಂದು ಆಕಸ್ಮಿಕ’ ಎಂಬ ಹೇಳಿಕೆ ನೀಡಿ, ತನಿಖಾಧಿಕಾರಿಗಳ ಕೈ ಕಟ್ಟಿ ಹಾಕುತ್ತಾರೆ.

ಬುಲಂದ್‌ಶಹರ್‌ನಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆಯ ಆನಂತರದ ಬೆಳವಣಿಗೆ ದುಷ್ಕರ್ಮಿಗಳಿಗೆ ಇನ್ನಷ್ಟು ಧೈರ್ಯಕೊಟ್ಟಿದೆ. ಪ್ರಮುಖ ಆರೋಪಿಗಳ ಪರವಾಗಿ ಬಿಜೆಪಿಯ ಶಾಸಕರು, ಸಚಿವರೂ ಹೇಳಿಕೆ ನೀಡಿದ್ದಾರೆ. ಅದರ ಬಲದಿಂದಲೇ ಅವರು ಇನ್ನೊಬ್ಬ ಪೊಲೀಸ್ ಸಿಬ್ಬಂದಿಯನ್ನು ಕೊಂದು ಹಾಕಿದ್ದಾರೆ. ಇದು ಇನ್ನಿತರ ಪೊಲೀಸ್ ಅಧಿಕಾರಿಳಿಗೆ ಅಲ್ಲಿನ ಸಂಘಪರಿವಾರದ ದುಷ್ಕರ್ಮಿಗಳು ನೀಡಿರುವ ಎಚ್ಚರಿಕೆಯಾಗಿದೆ. ಈ ಘಟನೆಯ ಬಳಿಕ ಉತ್ತರ ಪ್ರದೇಶದಲ್ಲಿ ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಒಂದು ವರದಿ ಹೇಳುತ್ತದೆ. ‘‘ಅವರಿಗಾದ ಗತಿಯೇ ನಿಮಗೂ ಆದೀತು’’ ಎಂಬ ಬೆದರಿಕೆಯ ಮೂಲಕ ರಾಜಕಾರಣಿಗಳು, ಅವರ ಹಿಂಬಾಲಕರು ಪೊಲೀಸರ ನೈತಿಕ ಶಕ್ತಿಯನ್ನು ಸಾಯಿಸುತ್ತಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ಕತ್ತಿ ಮಚ್ಚುಗಳಿಂದ ಕೊಚ್ಚಿ ಹಾಕುತ್ತಾರೆ ಮತ್ತು ಆ ಕೃತ್ಯವನ್ನು ಎಸಗಿದ ಆರೋಪಿಗಳನ್ನು ರಾಜಕಾರಣಿಗಳು ಸಮರ್ಥಿಸುತ್ತಾರೆ ಎಂದ ಮೇಲೆ ಯಾವ ಧೈರ್ಯದಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಬೇಕು?

ಈ ಎರಡು ಹತ್ಯೆಯ ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆಯ ಚುಕ್ಕಾಣಿಯನ್ನು ಕ್ರಿಮಿನಲ್‌ಗಳು ಸಂಪೂರ್ಣ ತಮ್ಮದಾಗಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಯಾವುದೇ ಬಾಯಿ ಮಾತಿನ ಹೇಳಿಕೆಗಳು ಪರಿಸ್ಥಿತಿಯನ್ನು ಹತೋಟಿಗೆ ತರುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ನಿವೃತ್ತ ಅಧಿಕಾರಿಗಳು, ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಒಂದು ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲಿ ಮುಖ್ಯಮಂತ್ರಿಯ ಸಾಮೂಹಿಕ ಹೊಣೆಗಾರಿಕೆಯನ್ನು ಎತ್ತಿ ಹೇಳಿದ್ದರು. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂದೂ ಮನವಿ ಮಾಡಿದ್ದರು. ಆದರೆ ಆದಿತ್ಯನಾಥ್‌ರ ರಾಜಕೀಯ ಹಿನ್ನೆಲೆಯನ್ನು ಗಮನಿಸಿದರೆ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಆದಿತ್ಯನಾಥ್ ಅವರು ಹೊಡಿ, ಬಡಿ, ಕೊಲ್ಲು ಎನ್ನುವ ಭಾಷೆಯನ್ನು ಬಳಸಿಕೊಂಡು, ಗೂಂಡಾಗಳ ಗುಂಪುಗಳನ್ನು ಕಟ್ಟಿ ಅವರ ಮೂಲಕ ಸಮಾಜದಲ್ಲಿ ಉದ್ವಿಗ್ನಕಾರಿ ವಾತಾವರಣವನ್ನು ನಿರ್ಮಿಸಿ ಮುಖ್ಯಮಂತ್ರಿ ಹುದ್ದೆಗೇರಿದವರು. ಇಂದು ಮುಖ್ಯಮಂತ್ರಿಯಾದ ಬಳಿಕ, ತಮ್ಮದೇ ಕಾರ್ಯಕರ್ತರನ್ನು ಬಂಧಿಸಿ, ಶಿಕ್ಷಿಸಿ ಎಂದು ಅವರು ಪೊಲೀಸರಿಗೆ ಸೂಚನೆ ನೀಡುವುದು ಸಾಧ್ಯವೇ? ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಜಾರಿಗೆ ಬರಬೇಕಾದರೆ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕು. ಒಂದೋ ಆದಿತ್ಯನಾಥ್ ರಾಜೀನಾಮೆ ನೀಡಬೇಕು. ಇಲ್ಲವೇ ಸರಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News