ಜಮಾಲ್ ಖಶೋಗಿಯ ಕತ್ತರಿಸಲ್ಪಟ್ಟ ಮೃತದೇಹ ಒಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Update: 2018-12-31 16:59 GMT

ಅಂಕಾರ(ಟರ್ಕಿ),ಡಿ.31: ಟರ್ಕಿಯ ಸೌದಿ ರಾಯಭಾರಿ ಕಚೇರಿಯಲ್ಲಿ ಹತ್ಯೆಗೀಡಾದರೆನ್ನಲಾದ ಸೌದಿ ಪತ್ರಕರ್ತ ಜಮಾಲ್ ಖಶೋಗಿಯವರ ಕತ್ತರಿಸಲ್ಪಟ್ಟ ಮೃತದೇಹದ ಭಾಗಗಳನ್ನು ಆರೋಪಿಗಳು ಕೊಂಡೊಯ್ಯುತ್ತಿರುವ ದೃಶ್ಯವಿರುವ ಸಿಸಿಟಿವಿ ವಿಡಿಯೋವೊಂದನ್ನು ಟರ್ಕಿಯ ಟಿವಿ ವಾಹಿನಿಯೊಂದು ರವಿವಾರ ತಡರಾತ್ರಿ ಪ್ರಸಾರ ಮಾಡಿದೆ.

ಮೂವರು ವ್ಯಕ್ತಿಗಳು ಐದು ಸೂಟ್‌ಕೇಸ್‌ಗಳನ್ನು ಹಾಗೂ ಎರಡು ಬೃಹತ್ ಕಪ್ಪು ಬ್ಯಾಗ್‌ಗಳನ್ನು ಇಸ್ತಾಂಬುಲ್‌ನಲ್ಲಿ ಸೌದಿ ಕಾನ್ಸುಲ್ ಜನರಲ್ ಅವರ ಮನೆಗೆ ಕೊಂಡೊಯ್ಯುತ್ತಿರುವ ದೃಶ್ಯಗಳಿರುವ ಸಿಸಿಟಿವಿ ವಿಡಿಯೋವನ್ನು ಸುದ್ದಿವಾಹಿನಿ ಪ್ರಸಾರ ಮಾಡಿದೆ.

ಸೌದಿ ಕಾನ್ಸುಲ್ ಜನರಲ್ ಅವರ ನಿವಾಸವು ಕಳೆದ ಅಕ್ಟೋಬರ್‌ನಲ್ಲಿ ಖಶೋಗಿ ಅವರು ಹತ್ಯೆಯಾದರೆನ್ನಲಾದ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ.

 ವಾಶಿಂಗ್ಟನ್‌ ಪೋಸ್ಟ್ ಪತ್ರಿಕೆಯ ವರದಿಗಾರರಾದ ಖಶೋಗಿ ಸೌದಿ ಆಡಳಿತದ ಪ್ರಬಲ ಟೀಕಾಕಾರರಾಗಿದ್ದರು. ಅವರು ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ರಾಯಭಾರಿ ಕಚೇರಿಯೊಳಗೆ ಪ್ರವೇಶಿಸಿದ ಕೆಲವೇ ನಿಮಿಷಗಳ ಬಳಿಕ ಹತ್ಯೆಗೀಡಾಗಿದ್ದರು. ಸೌದಿಯಿಂದ ಕಳುಹಿಸಲ್ಪಟ್ಟ 15 ಮಂದಿ ಹಂತಕರು ಅವರನ್ನು ಹತ್ಯೆಗೈದಿದ್ದಾರೆಂದು ಟರ್ಕಿ ಆರೋಪಿಸಿದೆ. ಖಶೋಗಿ ಅವರ ಮೃತದೇಹದ ಕೆಲವು ಭಾಗಗಳನ್ನು ಆ್ಯಸಿಡ್ ಬಳಸಿ ಕರಗಿಸಲಾಗಿದೆಯೆಂದು ಅದು ಆರೋಪಿಸಿದೆ.

ಅಕ್ಟೋಬರ್‌ನಲ್ಲಿ ಟರ್ಕಿಯ ಅಧಿಕಾರಿಗಳು ಸೌದಿ ಕಾನ್ಸುಲೇಟ್ ಹಾಗೂ ರಾಯಭಾರಿಯವರ ನಿವಾಸ ಸೇರಿದಂತೆ ಇಸ್ತಾಂಬುಲ್‌ನ ಹಲವೆಡೆ ಶೋಧಿಸಿದ್ದರಾದರೂ ಅವರ ಮೃತದೇಹದ ಅವಶೇಷಗಳು ಪತ್ತೆಯಾಗಿರಲಿಲ್ಲ.

ಖಶೋಗಿ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳನ್ನು ಗಡಿಪಾರು ಮಾಡಬೇಕೆಂಬ ಟರ್ಕಿಯ ಬೇಡಿಕೆಗಳನ್ನು ಸೌದಿ ಆರೇಬಿಯ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News