ಕನ್ನಡ ಬದುಕಿಸಲು ಬಡವರು ಸಾಯಬೇಕೇ?

Update: 2018-12-31 18:42 GMT

‘ಕನ್ನಡವೋ ಇಂಗ್ಲಿಷೋ ಯಾವುದೋ ಒಂದು ಭಾಷೆಯಲ್ಲಿ, ನಮಗೆ ನೌಕರಿ, ಅನ್ನಕೊಟ್ಟು ನಮ್ಮನ್ನು ಬದುಕಿಸುವ ಒಂದು ಭಾಷಾ ಮಾಧ್ಯಮದಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿ’’ ಎಂದು ಸರಕಾರವನ್ನು ಬೇಡಿಕೊಳ್ಳುವ ದಯನೀಯ ಸ್ಥಿತಿಯಲ್ಲಿ ನಮ್ಮ ರಾಜ್ಯದ ಬಡವರು ದೀನದಲಿತರು ಇದ್ದಾರೆ. ಇವರ ಹತಾಶ ಮುಖಗಳನ್ನು ನೋಡಿಯಾದರೂ ನಮ್ಮ ಸಾಹಿತಿಗಳು, ಕನ್ನಡಪ್ರೇಮಿಗಳು, ಚಿಂತಕ ಮಹಾಶಯರು ಭಾಷೆಗೆ ಸಂಬಂಧಿಸಿ ಅಗ್ಗದ ರಾಜಕೀಯ ಮಾಡುವುದನ್ನು ಬಿಟ್ಟು, ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ತೆಗೆದುಕೊಳ್ಳುವ ಯಾವುದೇ ಕ್ರಮವನ್ನಾದರೂ ಬೆಂಬಲಿಸುವ ಔದಾರ್ಯ ತೋರಬೇಕು.


ಸರಕಾರ ಈ ವರ್ಷ 1,000 ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವ ವಿಷಯದಲ್ಲಿ ಕೆಲವು ಸಾಹಿತಿಗಳು, ಕನ್ನಡ ಪ್ರೇಮಿಗಳು ಇನ್ನೇನು ಕನ್ನಡ ನಾಶವಾಗಿಯೇ ಬಿಟ್ಟಿತು ಎಂಬಂತೆ ಬೊಬ್ಬೆ ಹೊಡೆಯುತ್ತಿದ್ದಾರೆ. ಇವರು ಗಮನಿಸಬೇಕಾದ ಮತ್ತು ಇವರ ಕುರಿತು ಕನ್ನಡಿಗರು ಗಮನಿಸಬೇಕಾದ ಹಲವು ಸಂಗತಿಗಳಿವೆ.

ಇಂಗ್ಲಿಷ್ ಭಾಷೆಯಲ್ಲಿ ಅನಿವಾರ್ಯ, ಇಂಗ್ಲಿಷ್ ಮಾಧ್ಯಮದ ಹೊರತು ನಮ್ಮ ಮಕ್ಕಳಿಗೆ ಉದ್ಯೋಗದೊರಕ ಬಾರದೆಂಬ ಸಕಾರಣವಾದ ಭಯ ಸಮೂಹ ಸನ್ನಿಯಾಗಿ ಜನರನ್ನು ಕಾಡುತ್ತಿದೆ. ಪರಿಣಾಮವಾಗಿ ತೀರ ಬಡ, ಹಿಂದುಳಿದ, ದಲಿತ ಕುಟುಂಬಗಳ ಮಕ್ಕಳು ಮಾತ್ರ ಅನಿವಾರ್ಯವಾಗಿ ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಬಡವರ ಈ ಮಕ್ಕಳೇ ನಮ್ಮ ಕನ್ನಡ ರಕ್ಷಕರಿಗೆ ಕನ್ನಡಭಾಷೆಯ ಮಹಾ ರಕ್ಷಕರಾಗಿ ಕಾಣಿಸುತ್ತಿರುವುದರ ಹಿಂದಿನ ಮರ್ಮವೇನು? ಮನೋಧರ್ಮ, ಮಸಲತ್ತು ಏನು?
ಈಗಾಗಲೇ ಮೂರುಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳು ಯಾಕಾಗಿ ಮುಚ್ಚಿವೆ? ಊರಿನಲ್ಲಿ ಶಾಲೆಯೇ ಇಲ್ಲವೆಂದ ಮೇಲೆ ಬಡ ಮಕ್ಕಳಿಗೆ ಶಿಕ್ಷಣ, ಕಲಿಕೆ ಎಲ್ಲಿಂದ ಬರಬೇಕು? ಇನ್ನು ಸರಕಾರಿ ಶಾಲೆಗಳಿಗೆ ಹೋಗಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆಯುವ ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ‘ಉಳ್ಳವರ’ ಮಕ್ಕಳಿಗೆ ಸಮಾನವಾಗಿ ಸ್ಪರ್ಧಿಸಿ ಉದ್ಯೋಗ ಮಾರುಕಟ್ಟೆಯಲ್ಲಿ ನೌಕರಿಗಿಟ್ಟಿಸಿಕೊಳ್ಳುವುದು ಸಾಧ್ಯವೇ? ಸಾಧ್ಯವಿಲ್ಲವೆಂದಾದಲ್ಲಿ ಅವರ ಪಾಡೇನು?
ಇಂತಹ ಹತ್ತಾರು ಪ್ರಶ್ನೆಗಳಿಗೆ ‘ಗೋಕಾಕ್ ಮಾದರಿ ಚಳವಳಿ ನಡೆಸುತ್ತೇವೆ’ ಎನ್ನುವವರ ಬಳಿ ಏನು ಉತ್ತರ ಇದೆ?

ಸರಕಾರಿ ಶಾಲೆಗಳು ಮುಚ್ಚುವುದೆಂದರೆ ಬಡಮಕ್ಕಳ ಪಾಲಿಗೆ ಶಿಕ್ಷಣ ಕೊನೆ ಉಸಿರೆಳೆಯುವುದು, ತೀವ್ರ ನಿಗಾ ಘಟಕದಲ್ಲಿ(ಐಸಿಯು) ಮಲಗಿರುವುದು. ಈಗ ಸರಕಾರ ಮಾಡಬೇಕಾಗಿರುವುದು ಐಸಿಯುನಲ್ಲಿ ಇಡಲಾಗಿರುವ ರೋಗಿಯನ್ನು ಹೇಗಾದರೂ ಏನಾದರೂ ಮಾಡಿ ಒಮ್ಮೆ ಬದುಕಿಸುವುದು. ಮಿಕ್ಕಿದ್ದೆಲ್ಲ ಆಮೇಲೆ. ಇಂಗ್ಲಿಷ್ ಮಾಧ್ಯಮದ ಮೂಲಕ ಸರಕಾರಿ ಶಾಲೆಗಳು ಉಳಿಯುತ್ತವಾದಲ್ಲಿ, ಕೇವಲ 1,000 ಶಾಲೆಗಳಷ್ಟೆ ಅಲ್ಲ, ಎಲ್ಲ ಸರಕಾರಿ ಶಾಲೆಗಳೂ ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಲಿ. ಅಲ್ಲಿ ಕನ್ನಡ ಕಲಿಯುವ ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ ನೀಡಿ ಕನ್ನಡವನ್ನು ಉಳಿಸಲು ಸಾಧ್ಯವೋ ಎಂದು ನೋಡೋಣ. ಯಾಕೆಂದರೆ ಈಗಿನ ಶೈಕ್ಷಣಿಕ ವಾತಾವರಣದಲ್ಲಿ ತಮ್ಮ ಮಕ್ಕಳನ್ನು ಮಾತ್ರ ಕನ್ನಡ ಶಾಲೆಗಳಿಗೆ ಕಳುಹಿಸಿ, ಅವರು ಮೇಲಕ್ಕೆ ಬರದಂತೆ ಅವರನ್ನು ಕೆಳಕ್ಕೆ ತಳ್ಳಲಾಗುತ್ತಿದೆ ಎಂದು ಬಡವರಿಗೆ ಅನ್ನಿಸಿದೆ. ಈ ಅನಿಸಿಕೆ ಇರುವವರೆಗೆ ಅವರು ತಮ್ಮ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗಳಿಗೆ ಕಳುಹಿಸಲು ಸುತರಾಂ ಒಪ್ಪುವುದಿಲ್ಲ.

ಇಂಗ್ಲಿಷ್ ಮಾಧ್ಯಮ ಆರಂಭಿಸಿದ ಕೂಡಲೇ ಅಲ್ಲಿ ಕಲಿತ ಮಕ್ಕಳು, ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಉದ್ಯೋಗರಂಗದಲ್ಲಿ ನೀಡುವ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸುತ್ತಾರೆಂಬುದನ್ನು ಒಪ್ಪದ ಎಡ-ಬಲ-ನಡು ಪಂಥೀಯ ಎಲ್ಲ ಸಾಹಿತಿಗಳು, ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಎಷ್ಟು ಮಂದಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮತ್ತು ಎಷ್ಟು ಮಂದಿ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ‘ಮಿಂಚಿಂಗ್’ ಎಂದು ಸ್ವಲ್ಪ ಕಣ್ಣು ಹಾಯಿಸಬೇಕು. ಸರಕಾರ ಜಾತಿ ಸಮೀಕ್ಷೆ ನಡೆಸಿದಂತೆ ಈ ಎಲ್ಲ ಸಾಹಿತಿಗಳ ಮಕ್ಕಳು, ಮೊಮ್ಮಕ್ಕಳು ಯಾವ ಮಾಧ್ಯಮ ಶಾಲೆಗಳಲ್ಲಿ ಕಲಿತು ಈಗ ಎಲ್ಲೆಲ್ಲಿ ಏನೇನು ನೌಕರಿ ಮಾಡುತ್ತಾ ಎಷ್ಟು ಗಳಿಸಿದ್ದಾರೆ, ಗಳಿಸುತ್ತಿದ್ದಾರೆ ಎಂಬ ಬಗ್ಗೆ ವ್ಯಾಪಕವಾದ ವಿವಿರವಾದ ಒಂದು ಸಮೀಕ್ಷೆ ನಡೆಸಬೇಕು. ಆಗಲಾದರೂ ಈ ಸಾಹಿತಿಗಳ ಗೋಸುಂಬೆತನ ಬಯಲಾದೀತು.

‘‘ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ನೌಕರಿ ದೊರಕುತ್ತದೆ ಎಂಬುದು ನಮ್ಮ ಜನರ ಒಂದು ನಂಬಿಕೆ ಅಷ್ಟೆ?’’ ಎಂದು ಸಾಹಿತಿಗಳಲ್ಲಿ ಬಹಳ ಮಂದಿ ವಾದಿಸಿದ್ದಾರೆ; ಈಗಲೂ ವಾದಿಸುತ್ತಿದ್ದಾರೆ. ಇವರೆಲ್ಲ ದಯಮಾಡಿ ಗಮನಿಸಬೇಕು, ಇದು ಕೇವಲ ನಂಬಿಕೆಯಲ್ಲ; ಇವತ್ತಿನ ಕಠೋರ ವಾಸ್ತವ. ಕಳೆದ 45 ವರ್ಷಗಳಿಂದ ಶಿಕ್ಷಣರಂಗದ ವಿವಿಧ ಮಜಲುಗಳನ್ನು ಗಮನಿಸುತ್ತ, ವಿವಿಧ ಹಂತಗಳಲ್ಲಿ ಇಂಗ್ಲಿಷ್ ಬೋಧಿಸುತ್ತ, ಎರಡು ತಲೆಮಾರುಗಳ ಸಾಮಾಜಿಕ ಶೈಕ್ಷಣಿಕ ಪಲ್ಲಟಗಳನ್ನು ಆರ್ಥಿಕ ಆತಂಕಗಳನ್ನು ತೀರ ಹತ್ತಿರದಿಂದ ಬಲ್ಲವನಾಗಿ ನಾನು ಹೇಳುತ್ತೇನೆ: ಇಂಗ್ಲಿಷ್ ಮಾಧ್ಯಮ ಆರಂಭಿಸುವುದರಿಂದ ಈಗ ಮುಚ್ಚುತ್ತಿರುವ ಕನ್ನಡ ಶಾಲೆಗಳು ಉಳಿಯುವ ಸಾಧ್ಯತೆಯಾದರೂ ಇದೆ. ಈ ಕಾರಣಕ್ಕಾಗಿಯಾದರೂ ಕನಿಷ್ಠ ಒಂದು ಪ್ರಯೋಗವಾಗಿ ಸರಕಾರ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲಿ.

ಯಾಕೆಂದರೆ ಬಾಯಿ ತೆರೆದರೆ ‘ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಶೌಚಾಲಯ, ಸಾಕಷ್ಟು ಶಿಕ್ಷಕರು, ಪ್ರಯೋಗಾಲಯ, ಗ್ರಂಥಾಲಯ ಇಲ್ಲ; ಆದ್ದರಿಂದಲೇ ಅಲ್ಲಿಗೆ ಪೋಷಕರು ಮಕ್ಕಳನ್ನು ಕಳುಹಿಸುತ್ತಿಲ್ಲ’ ಎಂಬ ಮಾತುಗಳನ್ನು ಹೇಳಿ ಹೇಳಿ, ಕೇಳಿ ಕೇಳಿ ಸಾಕಾಗಿದೆ. ಈ ಮಾತುಗಳೆಲ್ಲ ಸವಕಲಾಗಿವೆ. ಎಂತಹ ಮೂಲ ಸೌಕರ್ಯ, ಸೂಪರ್ ಸವಲತ್ತು ಒದಗಿಸಿ ದರೂ ಬಡವರು ತಮ್ಮ ಕಣ್ಣು ಮುಂದೆ ತಮ್ಮ ಪರಿಸರದ ನೆರೆಹೊರೆಯ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳು ಐಟಿ, ಬಿಟಿ, ಟೆಕ್ಕಿ ಎನ್ನುತ್ತ ಕಾರು ಬಂಗಲೆ ವಿದೇಶ ಪ್ರವಾಸಗಳಲ್ಲಿ ಓಲಾಡುತ್ತಿರುವುದನ್ನು ಕಂಡ ಮೇಲೆ, ಜಪ್ಪಯ್ಯ ಎಂದರೂ ತಮ್ಮ ಮಕ್ಕಳನ್ನು ಸರಕಾರಿ ‘ಕನ್ನಡ ಶಾಲೆ’ಗಳಿಗೆ ಕಳುಹಿಸುವುದಿಲ್ಲ. ‘ಇಂಗ್ಲಿಷ್ ಮಾಧ್ಯಮ ಅಂದರೆ ಉದ್ಯೋಗ’ ಎಂಬ ಸಮೀಕರಣ ಅವರ ತಲೆಯಲ್ಲಿ ಠಿಕಾಣಿ ಹೂಡಿ ದಶಕಗಳೇ ಕಳೆದಿವೆ. ಬಡವರಿಂದಾಯೇ ಕನ್ನಡ ಉಳಿಯುವುದು ಎಂದ ಮೇಲೆ ಆ ಬಡವರಿಗಾಗಿ ಕನಿಷ್ಠ ಪಕ್ಷ ಅವರು ಬಯಸುವ ಶಾಲೆಗಳನ್ನಾದರೂ ತೆರೆಯಬೇಡವೇ? ನಮ್ಮ ಇಂದಿನ ಮಾಧ್ಯಮ ವರ್ಗ ಇನ್ನು ಎಂದೆಂದಿಗೂ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಸರಕಾರಿ ಶಾಲೆಗೆ ಸೇರಿಸುವುದಿಲ್ಲ; ಈಗ ಬಡವರು ತೀರ ಹಿಂದುಳಿದ ಜಾತಿಗಳು, ದಲಿತರು ಮಾತ್ರ ಸರಕಾರಿ ಶಾಲೆಗಳನ್ನು ಬಚಾವ್ ಮಾಡುವವರಾಗಿ ಉಳಿದಿದ್ದಾರೆ ಎಂದ ಮೇಲೆ ಇವರನ್ನು ಉಳಿಸಲಿಕ್ಕಾಗಿ ಯಾದರೂ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯೋಣ.

‘‘ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಶಿಕ್ಷಣದಂತಹದೇ ಶಿಕ್ಷಣ ನೀಡುವುದು ಸರಕಾರದ ಜವಾಬ್ದಾರಿ’’ ಎನ್ನುವಾಗ ನಾವು ತುಂಬ ಜಾಣರಾಗಿ ಆ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿ ಇರಲಿ; ಅಲ್ಲಿ ಕಲಿತ ಮಕ್ಕಳು ನಮ್ಮ ಮಕ್ಕಳಿಗೆ ಸಮಾನವಾಗಿ ಸ್ಪರ್ಧೆ ನೀಡಲಿ ಎಂದು ಹೇಳುವುದಿಲ್ಲ. ಇಂತಹ ಆತ್ಮವಂಚನೆಯಿಂದ ನಾವು ಹೊರಬರಬೇಕಾಗಿದೆ. ಇಂಗ್ಲಿಷ್ ಇಂದು ಒಂದು ‘ವ್ಯಾಮೋಹ’ವಾಗಿ ಅಥವಾ ಒಂದು ಅದಮ್ಯ ಬಯಕೆ ಅಥವಾ ‘ದಾಹ’ವಾಗಿ ಉಳಿದಿಲ್ಲ. ಅದೀಗ ಈ ದೇಶದ ಕೋಟಿಗಟ್ಟಲೆ ನಿರುದ್ಯೋಗಿಗಳಲ್ಲಿ ಕೆಲವು ಲಕ್ಷ ಜನರಿಗಾದರೂ ಉತ್ತಮ ವೇತನ ತರುವ ಉದ್ಯೋಗದಾತನಾಗಿ ಮಾರ್ಪಟ್ಟಿದೆ.

ಇಷ್ಟಕ್ಕೂ ನಮ್ಮ ಪ್ರಭುಗಳ ತಲೆಬುಡವಿಲ್ಲದ ಆರ್ಥಿಕ ನೀತಿಗಳಿಂದಾಗಿ ಲಕ್ಷಗಟ್ಟಲೆ ಉದ್ಯೋಗಗಳು ನಾಶವಾಗುತ್ತಿವೆ. (ಒಂದು ವರದಿಯ ಪ್ರಕಾರ ನೋಟು ರದ್ಧತಿ, ಜಿಎಸ್‌ಟಿಯಿಂದಾಗಿ 35ಲಕ್ಷ ಉದ್ಯೋಗಗಳು ನಷ್ಟವಾಗಿವೆ.) ಡಾರ್ವಿನ್‌ನ ‘ಅತ್ಯಂತ ಬಲಿಷ್ಠರಾದವರು ಮಾತ್ರ ಬದುಕಿ ಉಳಿಯುತ್ತಾರೆ’ ಎಂಬ ಅರಣ್ಯ ಕಾನೂನು ನಮ್ಮ ನೌಕರಿ ಮಾರುಕಟ್ಟೆಗೂ ಅನ್ವಯಿಸುತ್ತದೆ. ದೇಶದ ಎಲ್ಲ ವರ್ಗಗಳ ನಿರುದ್ಯೋಗಿ ಯುವಜನತೆಯ ಸ್ಥಿತಿ ಮುಳುಗುತ್ತಿರುವ ಹಡಗಿನಲ್ಲಿ ಕುಳಿತವರಂತಾಗಿದೆ. ರಾಜಕಾರಣಿಗಳು, ನಮ್ಮನಾಳುವವರು ತಾವು ಹೇಗೆ ನಾನಾ ರೀತಿಯ ‘ಆಪರೇಶನ್’ ಗಳ ಮೂಲಕ ಇನ್ನಷ್ಟು ಕೋಟಿಗಳನ್ನು ಎಗರಿಸುವುದು? ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಒಂದು ಸಾಮಾನ್ಯ ನಗರಸಭೆಯ ಸದಸ್ಯನಾದವನು ಕೂಡ ಕೆಲವೇ ವರ್ಷಗಳಲ್ಲಿ ರಾಜಕೀಯ ಬಲದಿಂದ ಕೋಟ್ಯಧೀಶನಾಗುವುದನ್ನು ಕಾಣುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ‘‘ಕನ್ನಡವೋ ಇಂಗ್ಲಿಷೋ ಯಾವುದೋ ಒಂದು ಭಾಷೆಯಲ್ಲಿ, ನಮಗೆ ನೌಕರಿ, ಅನ್ನಕೊಟ್ಟು ನಮ್ಮನ್ನು ಬದುಕಿಸುವ ಒಂದು ಭಾಷಾ ಮಾಧ್ಯಮದಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿ’’ ಎಂದು ಸರಕಾರವನ್ನು ಬೇಡಿಕೊಳ್ಳುವ ದಯನೀಯ ಸ್ಥಿತಿಯಲ್ಲಿ ನಮ್ಮ ರಾಜ್ಯದ ಬಡವರು ದೀನದಲಿತರು ಇದ್ದಾರೆ. ಇವರ ಹತಾಶ ಮುಖಗಳನ್ನು ನೋಡಿಯಾದರೂ ನಮ್ಮ ಸಾಹಿತಿಗಳು, ಕನ್ನಡಪ್ರೇಮಿಗಳು, ಚಿಂತಕ ಮಹಾಶಯರು ಭಾಷೆಗೆ ಸಂಬಂಧಿಸಿ ಅಗ್ಗದ ರಾಜಕೀಯ ಮಾಡುವುದನ್ನು ಬಿಟ್ಟು, ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ತೆಗೆದುಕೊಳ್ಳುವ ಯಾವುದೇ ಕ್ರಮವನ್ನಾದರೂ ಬೆಂಬಲಿಸುವ ಔದಾರ್ಯ ತೋರಬೇಕು.

ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳ ಕನ್ನಡ ಪ್ರೀತಿ ಉಳಿಯಬೇಕಾದರೆ ಮಕ್ಕಳ ಪೋಷಕರು ಮನೆಯಲ್ಲಿ ಮೊದಲು ಕನ್ನಡ ಮಾತಾಡಬೇಕು. ಶುದ್ಧ ಕನ್ನಡದಲ್ಲಿ ‘ಇವರು ನನ್ನ ಅಪ್ಪ, ತಂದೆ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ,ತಂಗಿ’ ಎಂದರೆ ತಮ್ಮ ಪ್ರತಿಷ್ಠೆಗೆ ಕುಂದು ಎನ್ನುವ ರೀತಿಯಲ್ಲಿ ‘ಇವರು ನಮ್ ಫಾದರ್, ಮದರ್, ಅಂಕಲ್, ಅಂಟಿ, ಬ್ರದರ್, ಸಿಸ್ಟರ್’ ಎಂದು ಆಡುವ ಜನ ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕು.

ಕಳೆದ ಐದು ವರ್ಷಗಳಿಂದ ಈ ದೇಶದ ‘ರಾಷ್ಟ್ರೀಯ ಮಹತ್ವ ಹೊಂದಿರುವ ಸಂಸ್ಥೆ’ಗಳಲ್ಲೊಂದಾದ ಒಂದು ಸಂಸ್ಥೆಯಲ್ಲಿ ದೇಶದ ‘ಬೆಸ್ಟ್ ಸಾಯನ್ಸ್ ಬ್ರೆಯನ್ಸ್’ಗಳೆನ್ನಲಾಗುವ ಯುವ ತಲೆಮಾರಿಗೆ ‘ವೃತ್ತಿಪರ ಸಂವಹನ’ ಬೋಧಿಸುತ್ತಿರುವ ಓರ್ವ ತಜ್ಞನಾಗಿ ಇಂಗ್ಲಿಷ್ ಮಾಧ್ಯಮದ ಮಾಯೆ, ಕರಾಮತ್ತು, ಕಸರತ್ತು, ರಾಜಕೀಯಗಳನ್ನು ನೋಡುತ್ತಿದ್ದೇನೆ. ಇಂಗ್ಲಿಷ್ ಮಾಧ್ಯಮದ ಹೊರತಾಗಿ ನನ್ನ ಶೇ. 99.99 ವಿದ್ಯಾರ್ಥಿಗಳು ಅಲ್ಲಿ ಇರುತ್ತಿರಲಿಲ್ಲ; ಇರುವುದು ಸಾಧ್ಯವೂ ಇಲ್ಲ. ಹೀಗಾಗಿ, ‘‘ಬಡವರೇ, ನಿಮ್ಮ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗೆ ಕಳುಹಿಸಿ. ನಾವು ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸಿ, ಅಳಿದುಳಿದು ಸಿಗುವ ಎಲ್ಲ ನೌಕರಿ, ಸವಲತ್ತು, ಸಂಪತ್ತನ್ನು ಕಬಳಿಸಿಕೊಳ್ಳುತ್ತೇವೆ’’ ಎನ್ನುವ ಸಾಹಿತಿಗಳ, ಕನ್ನಡ ಪ್ರೇಮಿಗಳ ದಗಲ್ಬಾಜಿತನಕ್ಕೆ ಇನ್ನಾದರೂ ತೆರೆಬೀಳಬೇಕು.
ಸರಕಾರ ಒಂದು ಸಾವಿರ ಅಲ್ಲ, ಹತ್ತು ಸಾವಿರ ಸರಕಾರಿ ಶಾಲೆಗಳಲ್ಲಿ ಬೇಕಾದರೂ ಇಂಗ್ಲಿಷ್ ಮಾಧ್ಯಮ ತೆರೆಯಲಿ. ಹಾಗಾದರೂ ಬಡವರು ಬದುಕಿಕೊಳ್ಳಲಿ. ಕನ್ನಡ ಉಳಿಸಲು ಬಡವರೇ ಬೇಕು ಎನ್ನುವ ವಿಕೃತ, ವಿತಂಡವಾದಕ್ಕೆ ಧಿಕ್ಕಾರ ಹಾಕುವ ಧೈರ್ಯ ನಮಗೆ ಬರಲಿ.
ಕನ್ನಡ ಬದುಕಿಸಲು ಬಡವರು ಸಾಯಬೇಕೇ?


(bhaskarrao599@gmail.com)

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News